ADVERTISEMENT

₨ 17,650 ಮಾಸಿಕ ವೇತನ ಪಾವತಿಗೆ ಸೂಚನೆ

ಮಾನವ ಹಕ್ಕು ಆಯೋಗದಿಂದ ಆರೋಗ್ಯ ಇಲಾಖೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 9:42 IST
Last Updated 29 ಜುಲೈ 2014, 9:42 IST

ಉಡುಪಿ: 2000ನೇ ಇಸವಿಯಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ನೇಮಕವಾಗಿದ್ದ 16 ಜನ ಶುಶ್ರೂಷಕಿಯರಿಗೆ ಸರ್ಕಾರ ನಿಗದಿ ಮಾಡಿದ್ದ ₨ 17,650 ಮಾಸಿಕ ವೇತನವನ್ನು ಪಾವತಿ ಮಾಡುವಂತೆ ರಾಜ್ಯ ಮಾನವ ಹಕ್ಕು ಆಯೋಗ ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಿದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್‌ ಶಾನುಭಾಗ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶುಶ್ರೂಷಕಿಯರಿಗೆ ₨ 17,650 ಮಾಸಿಕ ವೇತನ ಎಂದು ಸರ್ಕಾರದ ದಾಖಲೆಯಲ್ಲಿದ್ದರೂ, ಅವರಿಗೆ ₨ 4,575 ಮಾತ್ರ ನೀಡಲಾಗುತ್ತಿದೆ. ಆರಂಭದಲ್ಲಿದ್ದ ಮೂಲ ವೇತನ ₨ 3,300 ಅನ್ನು 2006ರಲ್ಲಿ ₨ 4,575 ಎಂದು ನಿಗದಿ ಮಾಡ ಲಾಗಿತ್ತು. 2007 ರಲ್ಲಿ ಅದನ್ನು ₨ 8,825ಕ್ಕೆ ಏರಿಸಿ, 2012ರಲ್ಲಿ ₨ 17,650 ಎಂದು ಘೋಷಿಸಿದರೂ ಅವರಿಗೆ ₨ 4,575 ನೀಡಲಾಗುತ್ತಿದೆ.

ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಶುಶ್ರೂಷಕಿಯರು ಹೆಚ್ಚಿನ ವೇತನ ನೀಡುವಂತೆ ಜನಪ್ರತಿನಿಧಿಗಳು, ಅಧಿಕಾರಿ ಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. 2013 ರಲ್ಲಿ ಜಿಲ್ಲಾಧಿಕಾರಿಗಳು ₨ 17,650 ಪಾವತಿಸಬೇಕು ಎಂದು ಆದೇಶ ನೀಡಿದ್ದರು.

2000ರ ನಂತರ ನೇಮಕವಾದ  ಶುಶ್ರೂಷಕಿಯರಿಗೆ ಕಾಯಂ ನೇಮಕಾತಿ ಆದೇಶವಿದ್ದರೂ ಇವರು ಗುಲಾಮರಂತೆ ಕೆಲಸ ಮಾಡಬೇಕಾಯಿತು. ತಾತ್ಕಾ ಲಿಕ ನೆಲೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವರು ನ್ಯಾಯಾಲಯದ ಮೊರೆ ಹೋಗಲು ಹಿಂಜರಿದಿದ್ದರು. ಇದನ್ನು ಗಮನಿಸಿದ ಪ್ರತಿಷ್ಠಾನ, ಮಾನವ ಹಕ್ಕು ಆಯೋಗದಲ್ಲಿ ಪ್ರಕರಣ ದಾಖಲಿ ಸಿತು. ಆಯೋಗ ಆದೇಶ ನೀಡಿ 1 ತಿಂಗಳಾದರೂ ಬಾಕಿ ವೇತನ ಪಾವತಿ ಯಾಗಿಲ್ಲ. ವಾರದೊಳಗೆ ವೇತನ ಪಾವತಿಯಾಗದಿದ್ದರೆ ನ್ಯಾಯಾಂಗ ನಿಂದನೆ ದೂರು ದಾಖಲಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಆದೇಶದಂತೆ ಪ್ರತಿಯೊಬ್ಬ ಶುಶ್ರೂಷಕಿಯರಿಗೆ ₨ ಏಳು ಲಕ್ಷ ನೀಡಬೇಕು ಮತ್ತು ಈ ಮೊತ್ತಕ್ಕೆ ಏಳು ವರ್ಷದ ಬಡ್ಡಿ ಯನ್ನೂ ನೀಡಬೇಕು. ಇಲ್ಲವಾದಲ್ಲಿ ಬಡ್ಡಿಗಾಗಿ ನ್ಯಾಯಾಂಗ ಹೋರಾಟ ಮಾಡಲು ಪ್ರತಿಷ್ಠಾನ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.