ADVERTISEMENT

10ರಂದು ಭಾರತ ಭಾಗ್ಯವಿಧಾತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:41 IST
Last Updated 8 ಫೆಬ್ರುವರಿ 2017, 6:41 IST

ಉಡುಪಿ: ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಅಂಬೇಡ್ಕರ್‌ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ‘ಭಾರತ ಭಾಗ್ಯ ವಿಧಾತ’ ವಿನೂತನ ಧ್ವನಿ ಬೆಳಕು ಕಾರ್ಯಕ್ರಮ ಇದೇ 10ರಂದು ಸಂಜೆ 6.30ಕ್ಕೆ ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆಯನ್ನು ಧ್ವನಿ ಮತ್ತು ಬೆಳಕಿನ ವೈಭವದಲ್ಲಿ ರೂಪಿಸುವ ಕಾರ್ಯಕ್ರಮ ಇದಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್‌.ಆರ್‌. ವಿಶುಕುಮಾರ್‌ ಅವರ ಪರಿಕಲ್ಪನೆಯ ಕಾರ್ಯಕ್ರಮವನ್ನು ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್‌ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಶಶಿಧರ ಅಡಪ ರಂಗವಿನ್ಯಾಸ, ಪ್ರಮೋದ್‌ ಶಿಗ್ಗಾಂವ್‌ ವಸ್ತ್ರಾಲಂಕಾರ ಹಾಗೂ ಡಾ. ಕೆ.ವೈ. ನಾರಾಯಣ ಸ್ವಾಮಿ ಅವರು ಗೀತ ರಚನೆ ಮಾಡಿದ್ದಾರೆ.

ಕಣ್ತುಂಬಿಸುವ ಬೆಳಕಿನ ಲೋಕ, ಕಿವಿದುಂಬಿಸುವ ಹಿನ್ನೆಲೆ ಸಂಗೀತ ದೊಂದಿಗೆ ವೈಚಾರಿಕತೆಯ ಹಿನ್ನೋಟ ಅಡಿಬರಹದಲ್ಲಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗುವುದು. ಸುಮಾರು 80 ಕಲಾವಿದರಿಂದ 15 ದಿನಗಳ ಕಾಲ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ನಡೆಯುತ್ತದೆ ಎಂದು ಜಿಲ್ಲಾ ವಾರ್ತಾಧಿಕಾರಿ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.