ADVERTISEMENT

12ರಿಂದ ಕೊರಗರ ಶೈಕ್ಷಣಿಕ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 5:26 IST
Last Updated 6 ಫೆಬ್ರುವರಿ 2017, 5:26 IST

ಉಡುಪಿ: ಜಿಲ್ಲೆಯ ಕೊರಗ ಸಮುದಾಯದವರ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದೇ 12ರಿಂದ 18ರ ವರೆಗೆ ಶಿಕ್ಷಣ ಇಲಾಖೆಯಿಂದ ಕೊರಗ ಸಮುದಾಯದ ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಹೇಳಿದರು.

ಶನಿವಾರ ನಡೆದ 2017ನೇ ಸಾಲಿನ ಕೊರಗ ಸಮುದಾಯದ ಶೈಕ್ಷಣಿಕ ಸ್ಥಿತಿಗತಿ ಅಧ್ಯಯನದ ಮೊದಲನೇ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಜಿಲ್ಲೆಯ ಕೊರಗ ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಹಾಗೂ ಕಾರ್ಯತಂತ್ರಗಳನ್ನು ಹಮ್ಮಿಕೊಳ್ಳ ಲಾಗುವುದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಿಕ್ಷಣ ಸಪ್ತಾಹ ಕಾರ್ಯಕ್ರಮ ದಡಿ ಸಮಗ್ರ ಸಮೀಕ್ಷೆಯನ್ನು ಹಮ್ಮಿಕೊಂಡಿದೆ ಎಂದರು.

ಪ್ರತಿ ಹಾಡಿಗೆ 3 ಜನರ ತಂಡ ತೆರಳ ಲಿದ್ದು, ಶಾಲೆಯ ಮುಖ್ಯೋಪಾಧ್ಯಾ ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ತಂಡದಲ್ಲಿ ರುತ್ತಾರೆ. ಇವರು ಪ್ರತಿ ಮನೆಗೆ ತೆರಳಿ ಸಮಗ್ರ ಮಾಹಿತಿ ಸಂಗ್ರಹಿಸುವರು.

ಸಮಗ್ರ ಗಿರಿಜನ ಅಭಿವೃದ್ಧಿ ಉಪಯೋಜ ನೆಯಡಿ ಲಭ್ಯವಿರುವ ಮಾಹಿತಿಯಂತೆ ಜಿಲ್ಲೆಯಲ್ಲಿ ಒಟ್ಟು 2,572 ಕೊರಗ ಸಮುದಾಯದ ಕುಟುಂಬಗಳಿದ್ದು, ಶೈಕ್ಷಣಿಕ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಶೈಕ್ಷಣಿಕ ಮಾಹಿತಿ ಸಂಗ್ರಹಿಸಿದ ಬಳಿಕ ಮುಂದಿನ ಕ್ರಿಯಾಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಶಿಕ್ಷಣಾಧಿಕಾರಿ ರಾಮಚಂದ್ರರಾಜೇ ಅರಸ್‌, ಡಯಟ್‌ ಪ್ರಾಂಶುಪಾಲ ಶೇಖರ್‌, ಉಪನ್ಯಾಸಕ ಪ್ರಸನ್ನ ಕುಮಾರ್‌, ಐಟಿಡಿಪಿ ಇಲಾಖೆಯ ಉಮಾಕಾಂತಿ, ಕೊರಗ ಸಮುದಾಯದ ಮುಖಂಡ ರಾದ ಬೊಗ್ರ ಕೊರಗ, ಕುಮಾರ್‌ ದಾಸ್‌ ಹಾಲಾಡಿ, ಗಣೇಶ ಕೊರಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.