ADVERTISEMENT

ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 7:14 IST
Last Updated 6 ಫೆಬ್ರುವರಿ 2018, 7:14 IST

ಉಡುಪಿ: ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಎಂದು ಬಿಂಬಿಸಲು ಯತ್ನಿಸುವ ಬಿಜೆಪಿಗೆ ಸರಿಯಾದ ಉತ್ತರ ನೀಡುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ವೀಕ್ಷಕ ಮಂಜುನಾಥ ಭಂಡಾರಿ ಹೇಳಿದರು.

ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಚುನಾ ಯಿತಿ ಪ್ರತಿನಿಧಿಗಳ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಹರಡುವ ಸುಳ್ಳುಗಳನ್ನು ಎದುರಿಸುವ ಹಾಗೂ ಸತ್ಯ ಏನೆಂದು ತಿಳಿಸುವ ಕೆಲಸವನ್ನು ಮಾಡಬೇಕು. ವಹಿಸಿರುವ ಜವಾಬ್ದಾರಿಯನ್ನು ಕರ್ತವ್ಯದಂತೆ ನಿರ್ವ ಹಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಧರ್ಮದ ಹೆಸರಿನಲ್ಲಿ ಮಹಿಳೆಯರು, ಯುವಕರಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ವಿಚಾರಧಾರೆಯನ್ನು ಜನರ ಮುಂದಿಡುವ ಮೂಲಕ ಪಕ್ಷದ ಉದ್ದೇಶ ಏನೆಂದು ತಿಳಿಸಬೇಕು. ಜನರ ಮನ ಗೆಲ್ಲುವ ಮೂಲಕ ಅದನ್ನು ಮತಗಳಾಗಿ ಪರಿವರ್ತನೆ ಮಾಡಬೇಕು. ಹಾಗೆ ಮಾಡಿದಾಗ ಮಾತ್ರ ಪಕ್ಷ ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದರು.

ADVERTISEMENT

ಈ ಬಾರಿಯ ವಿಧಾನಸಭಾ ಚುನಾವಣೆ ಪಕ್ಷಕ್ಕೆ ಭಾರಿ ಮಹತ್ವದ್ದಾಗಿದೆ. ಪ್ರತಿಯೊಬ್ಬ ಕಾಂಗ್ರೆಸಿಗನೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು. ಸರ್ಕಾರದ ಪರವಾಗಿ ಈಗಾಗಲೇ ಜನಾಭಿಪ್ರಾಯ ಇದ್ದು, ಅದು ಮತಗಟ್ಟೆಯ ಯಶಸ್ಸಿಗೆ ಕಾರಣವಾಗುವಂತೆ ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಜಿ.ಎ. ಬಾವಾ, ದೇವಿಪ್ರಸಾದ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮಿನ್ ಪಡುಕೆರೆ, ಮುಖಂಡರಾದ ನವೀನ್‌ಚಂದ್ರ ಶೆಟ್ಟಿ, ವೆರೋನಿಕ ಕರ್ನೆಲಿಯೋ, ಮುಖಂಡರಾದ ದಿನೇಶ್ ಪುತ್ರನ್, ಅಶೋಕ ಕುಮಾರ್ ಕೊಡವೂರು, ರೋಶಿನಿ ಒಲಿವೇರ, ಗಣೇಶ್ ಕೋಟ್ಯಾನ್, ಸುರೇಶ್ ನಾಯ್ಕ್, ಶಂಕರ್ ಕುಂದರ್, ಶ್ಯಾಮಲಾ ಭಂಡಾರಿ, ನೀರೆ ಕೃಷ್ಣ ಶೆಟ್ಟಿ, ಶಶಿಧರ್ ಶೆಟ್ಟಿ, ವಂಡ್ಸೆ ಸಂಜೀವ ಶೆಟ್ಟಿ, ಮನೋಹರ್ ಕರ್ಕೇರ ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ವರದಿ ವಾಚಿಸಿದರು. ಹರೀಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.