ADVERTISEMENT

ಕಾರ್ಕಳ: ಮಹಿಳೆ ಕೊಲೆ - ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 17:35 IST
Last Updated 17 ಜುಲೈ 2018, 17:35 IST

ಕಾರ್ಕಳ : ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಎಂಬಲ್ಲಿ ಫ್ಲೋರಿನ್ ಮಚಾದೋ ಎಂಬ ಒಂಟಿ ಮಹಿಳೆ ಕೊಲೆ ಮಾಡಿದ ಆರೋಪಿಯನ್ನು ಕಾರ್ಕಳ ಪೊಲೀಸರು ಮುಂಬೈನ ಪನ್ವೇಲ್ ರೈಲು ನಿಲ್ದಾಣದಲ್ಲಿ ಬಂಧನ ಮಾಡಿದ್ದಾರೆ.

ಆರೋಪಿ ತಾಲ್ಲೂಕಿನ ಈದು ಗ್ರಾಮದ ಹೊಸ್ಮಾರಿನ ಮೊಹಮ್ಮದ್ ರಿಯಾಜ್ (35) ಬಂಧಿತ.

ಮೂಲತಃ ಹೊಸ್ಮಾರಿನವನಾಗಿದ್ದ ಆರೋಪಿ ಹಿಂದೆ ದುಬೈಯಲ್ಲಿದ್ದು ಪಾಸ್‌ಪೋರ್ಟ್, ವೀಸಾ ಕೊಡಿಸುವ ಏಜೆನ್ಸಿಯಲ್ಲಿ ಉದ್ಯೋಗಿಯಾಗಿದ್ದ. 5 ವರ್ಷಗಳಿಂದ ಫೇಸ್‌ಬುಕ್ ಮೂಲಕ ಈತನಿಗೆ ಕಾರ್ಕಳದ ಫ್ಲೋರಿನ್ ಮಚಾದೋ ಪರಿಚಯವಾಗಿತ್ತು. ನಂತರ ಇವರಿಬ್ಬರು ತುಂಬಾ ಆತ್ಮೀಯವಾಗಿ ಹಣಕಾಸಿನ ವ್ಯವಹಾರದಲ್ಲಿ ಮುಂದುವರಿದರು.

ADVERTISEMENT

ಆರೋಪಿ ಫ್ಲೋರಿನ್ ಅವರಿಂದ ₹ 13 ಲಕ್ಷದಷ್ಟು ಸಾಲ ಪಡೆದಿದ್ದು ಅದನ್ನು ಆಕೆ ಬಡ್ಡಿಗಾಗಿ ವಿನಿಯೋಗಿಸಿದ್ದಳು ಎನ್ನಲಾಗಿದೆ. ಪಡೆದ ಸಾಲವನ್ನು ಫ್ಲೋರಿನ್ ಮರುಪಾವತಿ ಮಾಡದ ಕಾರಣ ಇಬ್ಬರ ನಡುವೆ ಸಾಕಷ್ಟು ಬಾರಿ ಜಗಳ ನಡೆದಿತ್ತು. ಶನಿವಾರ ರಾತ್ರಿ ಆತ ಮತ್ತೆ ಫ್ಲೋರಿನ್ ಮನೆಗೆ ಹಣ ವಸೂಲಿಗಾಗಿ ಬಂದಿದ್ದ. ಹಣ ನೀಡದೇ ಇದ್ದಾಗ ಆಕೆಯನ್ನು ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ಇದಾದ ನಂತರ ಬೆಳಗ್ಗೆ 11 ಗಂಟೆಯ ವರೆಗೂ ಮೊಹಮ್ಮದ್ ರಿಯಾಜ್ ಆಕೆಯ ಮನೆಯಲ್ಲಿದ್ದು ಅಲ್ಲಿಂದ ಆಕೆಯ ಚಿನ್ನಾಭರಣ, ನಗದು, ಮೊಬೈಲ್ ಹಾಗೂ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದ.

ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು, ಮೊಬೈಲ್ ನೆಟ್‌ವರ್ಕ್ ಆಧಾರದಲ್ಲಿ ಆತ ಅಜ್ಮೀರ್‌ದಲ್ಲಿರುವ ಪತ್ತೆ ಮಾಡಿದರು. ರೈಲ್ವೆ ನಿಲ್ದಾಣದಲ್ಲಿ ಮಾಹಿತಿ ಕಲೆ ಹಾಕಿದ ಪೊಲೀಸರು, ಆತ ಅಹಮದಾಬಾದ್‌ನಿಂದ ಮುಂಬೈ ಮೂಲಕ ಮಂಗಳೂರಿಗೆ ರೈಲಿನಲ್ಲಿ ಬರುತ್ತಿರುವ ಖಚಿತ ಮಾಹಿತಿ ಪಡೆದು ಪನ್ವೇಲ್ ನಿಲ್ದಾಣದಲ್ಲಿ ಆತನನ್ನು ಬಂಧನ ಮಾಡಲಾಗಿದೆ.

ಪೊಲೀಸರು ಈತನಿಂದ ಹತ್ಯೆಗೆ ಬಳಸಿದ ಚಾಕು ಹಾಗೂ ಸ್ಕೂಟರ್‌ ವಶಪಡಿಸಿಕೊಂಡಿದ್ದು, ಮಂಗಳವಾರ ಆರೋಪಿಯನ್ನು ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ. 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಜೋಯ್ ಅಂತೋಜಿ ನೇತೃತ್ವದ ತಂಡದಲ್ಲಿ ಅಜೆಕಾರು ಪಿಎಸ್‌ಐ ರೋಜಾರಿಯೋ ಡಿಸೋಜ, ಹೆಡ್‌ಕಾನ್‌ಸ್ಟೇಬಲ್‌ ರಾಮು ಹೆಗ್ಡೆ, ರಾಜೇಶ್, ಪ್ರಕಾಶ್ ಹಾಗೂ ನಗರ ಠಾಣಾ ಪಿಸಿ ರಾಘವೇಂದ್ರ ಮತ್ತು ಡಿಸಿಐಬಿ ಪೊಲೀಸರು ಸಹಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.