ADVERTISEMENT

ಉಡುಪಿ: ಪ್ರಜಾಪ್ರಭುತ್ವ ಹಬ್ಬದಲ್ಲಿ ಮತ ಬಹಿಷ್ಕಾರದ ಅಪಸ್ವರ !

ಆಡಳಿತ ವ್ಯವಸ್ಥೆ ವಿರುದ್ಧ ರೊಚ್ಚಿಗೆದ್ದ ಮತದಾರರು

ಎಚ್.ಬಾಲಚಂದ್ರ
Published 15 ಏಪ್ರಿಲ್ 2024, 5:03 IST
Last Updated 15 ಏಪ್ರಿಲ್ 2024, 5:03 IST
ಕಾವಾಡಿ–ವಡ್ಡರ್ಸೆ ಹೊಳೆಯ ಹೂಳೆತ್ತದ್ದಕ್ಕೆ ಚುನಾವಣೆ ಬಹಿಷ್ಕಾರ ಮಾಡಿರುವ ಗ್ರಾಮಸ್ಥರು
ಕಾವಾಡಿ–ವಡ್ಡರ್ಸೆ ಹೊಳೆಯ ಹೂಳೆತ್ತದ್ದಕ್ಕೆ ಚುನಾವಣೆ ಬಹಿಷ್ಕಾರ ಮಾಡಿರುವ ಗ್ರಾಮಸ್ಥರು   

ಉಡುಪಿ: ಪ್ರಜಾಪ್ರಭುತ್ವದ ಹಬ್ಬ ಎಂದೇ ಬಿಂಬಿತವಾಗಿರುವ ಲೋಕಸಭಾ ಚುನಾವಣೆಗೆ ಭರದ ಸಿದ್ಧತೆಗಳು ನಡೆಯುತ್ತಿರುವಾಗಲೇ ಜಿಲ್ಲೆಯ ಹಲವೆಡೆ ಚುನಾವಣಾ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ. ಆರಿಸಿ ಕಳಿಸಿದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ವ್ಯವಸ್ಥೆಯ ಧೋರಣೆಗೆ ಬೇಸತ್ತು ಮತದಾರರು ಮತ ಬಹಿಷ್ಕಾರ ಮಾಡಿದ್ದಾರೆ.

ಎಲ್ಲೆಲ್ಲಿ ಮತದಾನ ಬಹಿಷ್ಕಾರ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ಬಡಾವಣೆ ಹಾಗೂ ಏಕ ನಿವೇಶನ ವಿನ್ಯಾಸ ಹಗರಣದ ಸಂತ್ರಸ್ತರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.

ಸಮಸ್ಯೆಗಳೇನು: ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ ಸ್ವತಂತ್ರ ಜಿಲ್ಲೆಯಾದ ಬಳಿಕ ನಗರಾಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ರಿಯಲ್‌ ಎಸ್ಟೇಟ್‌ ಚಟುವಟಿಕೆಗಳು ಬಿರುಸುಗೊಂಡವು. ಕೃಷಿ ಭೂಮಿಗಳು ಜನವಸತಿ ಬಡಾವಣೆಗಳಾಗಿ ಬದಲಾಗುತ್ತಾ ಹೋದವು. ಈ ಅವಧಿಯಲ್ಲಿ ಸಾವಿರಾರು ಮಂದಿ ಜೀವನಪೂರ್ತಿ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಿಂದ ನಿವೇಶನ ಖರೀದಿ ಮಾಡಿದರು.

ADVERTISEMENT

ಸಕ್ರಮ ನಿವೇಶನಗಳನ್ನು ಖರೀದಿಸಿದ್ದೇವೆ ಎಂದು ನಂಬಿದ್ದ ನಿವೇಶನದಾರರು ಮನೆ ಕಟ್ಟಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಅಕ್ರಮ ನಿವೇಶನ ಎಂಬ ಉತ್ತರ ನೀಡಿದಾಗ ಸಂತ್ರಸ್ತರಿಗೆ ಬರ ಸಿಡಿಲು ಬಡಿದಂತಾಗಿತ್ತು. ಶಿವಳ್ಳಿ ಅಲೆವೂರು, ಬಡಗಬೆಟ್ಟು, ಉದ್ಯಾವರ, ಕೊಡವೂರು, ಬಡಾನಿಡಿಯೂರು ಭಾಗಗಳಲ್ಲಿ ಮನೆ ಕಟ್ಟಿಕೊಳ್ಳಲು 5 ರಿಂದ 10 ಸೆಂಟ್ಸ್‌ ಜಾಗ ಖರೀದಿ ಮಾಡಿದವರು ಎರಡು ದಶಕಗಳಿಂದ ಮನೆ ಕಟ್ಟಿಕೊಳ್ಳಲಾಗದೆ ಪರದಾಡುತ್ತಿದ್ದಾರೆ.

ಕೃಷಿ ಇಡುವಳಿ ಭೂಪರಿವರ್ತನೆಯಾಗಿದೆ, ಗಡಿ ಗುರುತು ಮಾಡಲಾಗಿದೆ, ಕಂದಾಯ ಇಲಾಖೆಯು ಶುಲ್ಕ ಪಡೆದು ನೋಂದಣಿ ಮಾಡಿಕೊಟ್ಟಿದ್ದರೂ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ, ಖಾಸಗಿ ಬಡಾವಣೆಗಳು ನಿಯಮ ಉಲ್ಲಂಘಿಸಿದ್ದರೆ ಕಂದಾಯ ಇಲಾಖೆ ನೋಂದಣಿ ಮಾಡಿಸಿಕೊಂಡಿದ್ದು ಏಕೆ, ಮರು ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದು ಏಕೆ, ಅಕ್ರಮ ಬಡಾವಣೆ ಎಂದು ಮೊದಲೇ ತಿಳಿದಿದ್ದರೆ ಪ್ರಾಧಿಕಾರ ಮೌನವಾಗಿದ್ದು ಏಕೆ ಎಂದು ಪ್ರಶ್ನಿಸುತ್ತಾರೆ ಸಂತ್ರಸ್ತರು.

ಬೆಂಗಳೂರಿನ ಬಿಡಿಎ ಹಗರಣಕ್ಕೆ ಉಡುಪಿಯ ಪ್ರಕರಣವನ್ನು ತಳಕು ಹಾಕಲಾಗಿದ್ದು ಸಮಸ್ಯೆ ಜಟಿಲವಾಗಿದೆ. ಸಮಸ್ಯೆಗೆ ಸ್ಪಂದಿಸುವಂತೆ ಅಧಿಕಾರಿಗಳು, ಶಾಸಕರು, ಸಚಿವರು, ಮುಖ್ಯಮಂತ್ರಿಗಳಿಗೆ ಪರಿಯಾಗಿ ಬೇಡಿಕೊಂಡು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಪಂದನೆ ದೊರೆತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಸಂತ್ರಸ್ತರು.

ನಮ್ಮ ಅಳಲಿಗೆ ಕಿವಿಗೊಡದವರಿಗೆ, ಸಂಕಷ್ಟವನ್ನು ಹೀಯಾಳಿಸಿದವರಿಗೆ ಮತ ಕೇಳುವ, ಮತ ಹಾಕಿ ಎಂದು ಹೇಳುವ ನೈತಿಕತೆ ಇಲ್ಲ. ಮತದಾನ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುವುದಿಲ್ಲ. ಮತಕ್ಕಾಗಿ ಯಾರೂ ಮನೆಯ ಹತ್ತಿರ ಬರುವ ಅವಶ್ಯಕತೆ ಇಲ್ಲ ಎಂದು ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.

ಹೊಳೆ ಹೂಳೆತ್ತಿದರೆ ಮಾತ್ರ ಮತ: ಬ್ರಹ್ಮಾವರ ತಾಲ್ಲೂಕಿನ ಕಾವಾಡಿ ಹಾಗೂ ವಡ್ಡರ್ಸೆಯ ಮುನ್ನೂರು ಕುಟುಂಬಗಳು ಮತ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಕಾವಾಡಿ ಹಾಗೂ ವಡ್ಡರ್ಸೆ ಮಧ್ಯೆ ಹರಿಯುವ ಹೊಳೆಯಲ್ಲಿ ತುಂಬಿರುವ ಹೂಳೆತ್ತುವಂತೆ ದಶಕಗಳಿಂದಲೂ ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ ಎಂದು ದೂರುತ್ತಾರೆ ಸ್ಥಳೀಯರು.

ಹೊಳೆಯಲ್ಲಿ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ನೆರೆ ಬಂದು ಕೃಷಿ ಭೂಮಿ ಜಲಾವೃತವಾಗುತ್ತಿದೆ. ಬೇಸಾಯ ಮಾಡಲು ಸಾಧ್ಯವಾಗದೆ ಮಳೆಗಾಲದ ಬೆಳೆಯನ್ನೂ ಮಾಡಲಾಗದೆ ಹಡಿಲು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಪ್ರದಾನ ರಾಷ್ಟ್ರದಲ್ಲಿ ಕೃಷಿಗೆ ಪೂರಕ ವಾತಾವರಣ ನಿರ್ಮಾಣ ಮಾಡದಿರುವುದು ಬೇಸರದ ಸಂಗತಿ.

ಹಿಂದೆ ಸಮೃದ್ಧವಾಗಿ ಕೃಷಿ ಮಾಡುತ್ತಿದ್ದವರೆಲ್ಲ ಪ್ರಸ್ತುತ ಹಣ ಕೊಟ್ಟು ಅಕ್ಕಿ ಖರೀದಿಸಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ದನಕರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮುಂದೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಬರಬಹುದು ಎನ್ನುತ್ತಾರೆ ಗ್ರಾಮಸ್ಥರಾದ ಪ್ರೀತಿ.

ಕೃಷಿಗಾಗಿ, ನೀರಿಗಾಗಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು ಒಕ್ಕೊರಲಿನಿಂದ ಗ್ರಾಮಸ್ಥರೆಲ್ಲರೂ ಚುನಾವಣಾ ಬಹಿಷ್ಕಾರ ನಿರ್ಧಾರ ಮಾಡಿದ್ದೇವೆ. ಹೊಳೆ ಹೂಳೆತ್ತಿ ಈ ಭಾಗದ ಕೃಷಿಕರ ಸಂಕಷ್ಟ ನಿವಾರಿಸಿದರೆ ಮಾತ್ರ ಮತ ಹಾಕುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.

ಸಮಸ್ಯೆ ಬಗೆಹರಿಸುವಂತೆ ಈಚೆಗೆ ಉಡುಪಿಗೆ ಭೇಟಿನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸುತ್ತಿರುವ ನಿವೇಶನ ಸಂತ್ರಸ್ತರು

ಕೃಷಿಕರ ಹೊಟ್ಟೆಯ ಮೇಲೆ ಬರೆ ಎಳೆದ ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕಾಗಿ ಮತ ಹಾಕಬೇಕು? ದಯವಿಟ್ಟು ರಾಜಕೀಯ ಪಕ್ಷಗಳ ನಾಯಕರು ಮತ ಕೇಳಲು ಬರಬೇಡಿ ಮತ ಕೇಳುವ ನೈತಿಕ ಹಕ್ಕೂ ನಿಮಗಿಲ್ಲ.

ಕಾವಡಿ-ಕೊತ್ತಾಡಿ- ವಡ್ಡರ್ಸೆ ಕೃಷಿಕರು

‌2013ರಲ್ಲಿ ಜಾಗ ಖರೀದಿ ಮಾಡಿದ್ದೇನೆ ಬಳಿಕ ಮನೆ ಕಟ್ಟಲು ಸಿಂಗಲ್‌ ಲೇಔಟ್‌ ಕನ್‌ವರ್ಷನ್‌ಗೆ ಅನುಮತಿ ಸಿಗುತ್ತಿಲ್ಲ. ಸ್ವಂತ ನಿವೇಶನದಲ್ಲಿ ಸೂರು ಕಟ್ಟಿಕೊಳ್ಳಲಾಗದೆ ಅಸಹಾಯಕರಾಗಿದ್ದೇವೆ.

–ಮರುಳಿ ಕೃಷ್ಣ ಸಂತ್ರಸ್ತ

‌ಬೆಂಗಳೂರಿನಲ್ಲಿದ್ದ ಸ್ವಂತ ಫ್ಲಾಟ್‌ ಮಾರಾಟ ಮಾಡಿ ನಿವೃತ್ತ ಜೀವನವನ್ನು ಉಡುಪಿಯಲ್ಲಿ ಕಳೆಯಲು 2010ರಲ್ಲಿ ನಿವೇಶನ ಖರೀದಿ ಮಾಡಿದೆ. ಬಳಿಕ ಮನೆ ಕಟ್ಟಲು ಯೋಚಿಸಿದಾಗ ಅಕ್ರಮ ನಿವೇಶನ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

–ರವಿ ಸಂತ್ರಸ್ತ

ಹೂಳೆತ್ತಲು ಅನುದಾನದ ಕೊರತೆ

ಹೊಳೆ ಹೂಳೆತ್ತುವ ಸಂಬಂಧ ಪಂಚಾಯಿತಿಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡರೂ ಜಿಲ್ಲಾ ಪಂಚಾಯಿತಿಯಲ್ಲಿ ಅನುದಾನದ ಕೊರತೆ ಕಾರಣಕ್ಕೆ ಪ್ರಸ್ತಾವಕ್ಕೆ ಬೆಲೆ ಸಿಗದಂತಾಗಿದೆ. ಹೊಳೆ ಹೂಳೆತ್ತಿದರೆ ಕೃಷಿಕರ ಬದುಕು ಹಸನಾಗುವುದರ ಜತೆಗೆ ಎರಡೂ ಗ್ರಾಮಗಳ ಕೆರೆಗಳು ಬಾವಿಗಳು ತುಂಬುತ್ತವೆ. ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎನ್ನುತ್ತಾರೆ ಕಾವಾಡಿ ವಡ್ಡರ್ಸೆ ಗ್ರಾಮಸ್ಥರು.

ಕಟ್ಟಿಂಗೇರಿಯಲ್ಲೂ ಅಪಸ್ವರ

ಶಿರ್ವ ಸಮೀಪದ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮಸ್ಥರು ಕೂಡ ಚುನಾವಣೆ ಬಹಿಷ್ಕಾರ ನಿಟ್ಟಿನಲ್ಲಿ ಕಟ್ಟಿಂಗೇರಿ ಚಿಂತಿಸಿದ್ದಾರೆ. ಕಟ್ಟಿಂಗೇರಿಯಲ್ಲಿ ರಸ್ತೆ ಸೇತುವೆ ಬೀದಿ ದೀಪ ಬಸ್ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳೇ ಇಲ್ಲ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ನಡೆಸಿ ಅಹವಾಲು ಆಲಿಸಿದರೂ ಪ್ರಯೋಜನವಾಗಿಲ್ಲ ಕಟ್ಟಿಂಗೇರಿ ವಾರ್ಡ್‌ನಲ್ಲಿ 1 ಸಾವಿರ ಅರ್ಹ ಮತದಾರರಿದ್ದು ಮತದಾನ ಬಹಿಷ್ಕಾರ ಮಾಡಲು ಚಿಂತಿಸಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಮೂವರು ಸಂತ್ರಸ್ತರು ಸಾವು’

ನಿವೇಶನ ಸಂತ್ರಸ್ತರ ಪೈಕಿ ಶೇ 95ರಷ್ಟು ಮಂದಿ ಹಿರಿಯ ನಾಗರಿಕರಾಗಿದ್ದಾರೆ. ನಿವೃತ್ತಿ ಬಳಿಕ ಬಂದ ಹಣದಿಂದ ನಿವೇಶನ ಖರೀದಿಸಿ ಮನೆ ಕಟ್ಟಿಕೊಳ್ಳಲಾಗದೆ ಕೈಕಟ್ಟಿ ಕೂರುವಂತಾಗಿದೆ. ಇದೇ ಚಿಂತೆಯಲ್ಲಿ ಮೂವರು ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ. ಸಮಸ್ಯೆ ಬಗೆಹರಿಸುವಂತೆ 60 ರಿಂದ 70 ಮಂದಿ ರಾಜಕೀಯ ನಾಯಕರನ್ನು ಭೇಟಿಯಾಗಿ ಮನವಿ ನೀಡಿದ್ದರೂ ಸ್ಪಂದನೆ ಸಿಗುತ್ತಿಲ್ಲ. ದಾರಿಕಾಣದೆ ಬೇಸತ್ತು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದೇವೆ ಎಂದು ಸಂತ್ರಸ್ತ ವಾಸುದೇವ್‌ ಗಡಿಯಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.