ADVERTISEMENT

‘ಅಂಗವಿಕಲರ ಕ್ರೀಡೆ ಸ್ವಾಭಿಮಾನದ ಸಂಕೇತ’

ರಾಜ್ಯ ಮಟ್ಟದ ಅಂಗವಿಕಲರ ಕಬಡ್ಡಿ ಪಂದ್ಯಕ್ಕೆ ಸೂರಜ್ ನಾಯ್ಕ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:56 IST
Last Updated 18 ಫೆಬ್ರುವರಿ 2017, 10:56 IST
ಕುಮಟಾ: ‘ಕರಾವಳಿ ಉತ್ಸವಕ್ಕೆ ₹ 60 ಲಕ್ಷ, ಕುಮಟಾ ಉತ್ಸವಕ್ಕೆ ₹ 20 ಲಕ್ಷ  ನೀಡುವ ರಾಜ್ಯ ಸರ್ಕಾರ ಅಂಗವಿಕಲರು ನಡೆಸುವ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ₹ 2 ಲಕ್ಷವನ್ನು ನೀಡದೇ ಇರುವುದು ನಾಚಿಕೆಗೇಡಿನ ಸಂಗತಿ’ ಎಂದು ಬಿ.ಜೆ.ಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಕಬಡ್ಡಿ ಅಮೆಚೂರ್‌ ಅಸೋಸಿಯೇಶನ್ ಉಪಾಧ್ಯಕ್ಷ ಸೂರಜ್ ನಾಯ್ಕ ಹೇಳಿದರು.
 
ಕುಮಟಾದಲ್ಲಿ ನಡೆದ ಅಂಗವಿಕಲರ ರಾಜ್ಯಮಟ್ಟದ ಕಬಡ್ಡಿ  ಪಂದ್ಯಾವಳಿಯಲ್ಲಿ ಅಂಗವಿಕಲರ ಸಂಘದ ಹಸ್ತಪ್ರತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
 
‘ಅಂಗವಿಕಲರು ರಾಜ್ಯ ಮಟ್ಟದ ಕಬಡ್ಡಿ  ಪಂದ್ಯಾವಳಿ ನಡೆಸುತ್ತಿರುವುದು ಅವರ ಸ್ವಾಭಿಮಾನದ ಸಂಕೇತ. ತಾವು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ಅವರು ಇಂಥ ಸಂಘಟನೆಯ ಮೂಲಕ ತೋರಿಸಿಕೊಡುತ್ತಿದ್ದಾರೆ’ ಎಂದರು.
 
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ,‘ಅಂಗವಿಕಲರು ರಾಜ್ಯಮಟ್ಟದ ಪಂದ್ಯಾವಳಿ ಸಂಘಟಿಸಲು ಪಟ್ಟಂಥ ನೋವನ್ನು ಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕಾಗಿದೆ. ಅಂಗವಿಕಲರಿಗಾಗಿ ಮೀಸಲಿದ್ದ ₹ 7.2 ಲಕ್ಷ  ಜಿಲ್ಲಾ ಪಂಚಾಯ್ತಿ ನಿಧಿಯನ್ನು ಎಲ್ಲ ತಾಲ್ಲೂಕುಗಳಲ್ಲಿ ಅವರಿಗೆ ವಾಹನ ವಿತರಿಸಲು ನೀಡಲಾಗಿದೆ’ ಎಂದರು.  
 
ಕಬಡ್ಡಿ ಮೈದಾನ ಉದ್ಘಾಟಿಸಿ ಸ್ಥಳೀಯ ಸಿಂಡಿಕೇಟ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಹಾಗೂ ಕಾಮನ್ ವೆಲ್ತ್ ಕ್ರೀಡಾಕೂಟದ ಭಾರ ಎತ್ತುವ ಸ್ಫರ್ಧೆಯಲ್ಲಿ ಪದಕ ವಿಜೇತ ಅಂತರರಾಷ್ಟ್ರೀಯ ಕ್ರೀಡಾಪಟು ಪುಷ್ಪರಾಜ ಹೆಗ್ಡೆ ಮಾತನಾಡಿದರು. 
 
ಕ್ರೀಡಾ ತರಬೇತುದಾರ ಜಿ.ಡಿ.ಭಟ್ಟ, ಅಂಗವಿಕಲರ ಕಬಡ್ಡಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಶೇಖರ ಕಾಕಣಿಕೆ, ಅಧ್ಯಕ್ಷತೆ ವಹಿಸಿದ್ದ  ಕಾರವಾರದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯ್ಕ ಮಾತನಾಡಿದರು.
 
ಜಿಲ್ಲಾ ಪಂಚಾಯ್ತಿ ಸದಸ್ಯೆ ವೀಣಾ ನಾಯ್ಕ, ಉದ್ಯಮಿ ಮನೀಶ್ ನಾಯ್ಕ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣಕುಮಾರ ಶೇಟ್ ಸ್ವಾಗತಿಸಿದರು. ಚಂದ್ರಶೇಖರ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.