ADVERTISEMENT

ಅಘನಾಶಿನಿಗೆ ಮೂರು ಸೇತುವೆ ನಿರ್ಮಾಣ

ಕಾರ್ಲ್ಯಾಂಡ್ ದುರಸ್ತಿಗೆ ₹ 25 ಕೋಟಿ, ಪ್ರವಾಹ ತಡೆಗೋಡೆಗೆ ₹ 4.5 ಕೋಟಿ ಮಂಜೂರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2017, 6:26 IST
Last Updated 13 ಜನವರಿ 2017, 6:26 IST
ಕುಮಟಾ: ‘ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ತಾಲ್ಲೂಕಿನಲ್ಲಿ ಹರಿಯುವ ಅಘನಾಶಿನಿ ನದಿಗೆ ಮೂರು ಕಡೆ ಸೇತುವೆ ನಿರ್ಮಾಣಕ್ಕಾಗಿ ಒಟ್ಟೂ ₹ 75 ಕೋಟಿ ಮಂಜೂರಾಗಿದೆ’ ಎಂದು ಶಾಸಕಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಶಾಸಕಿ ಶಾರದಾ ಶೆಟ್ಟಿ ಹೇಳಿದರು.
 
ಪಟ್ಟಣದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಅಳಕೋಡ ಹಾಗೂ ಕಲ್ಲಬ್ಬೆ ಪಂಚಾಯ್ತಿ ವ್ಯಾಪ್ತಿಯ ಬೊಗರಿಬೈಲ ಹಾಗೂ ಉಪ್ಪಿನಪಟ್ಟಣ ಧಕ್ಕೆ ನಡುವೆ ಹಿಂದಿನ ಮಂಕಿ ಎತ್ತಿಗಾಡಿ ಖ್ಯಾತಿಯ ಹೊನ್ನಾವ–ಕತಗಾಲ ರಸ್ತೆಯ ಅಘನಾಶಿನಿ ನದಿಗೆ ₹ 35 ಕೋಟಿ  ವೆಚ್ಚದಲ್ಲಿ ಒಂದು ಸೇತುವೆ ನಿರ್ಮಿಸಲಾಗುವುದು. ಕೊಡಕಣಿ ಪಂಚಾಯ್ತಿ ವ್ಯಾಪ್ತಿಯ ಕೊಡಕಣಿ ಹಾಗೂ ಐಗಳಕುರ್ವೆ ದ್ವೀಪ ಗ್ರಾಮದ ನಡುವೆ ₹ 10 ಕೋಟಿ ವೆಚ್ಚದಲ್ಲಿ ಮತ್ತು ಅಂಕೋಲಾ ಹಾಗೂ ಕುಮಟಾ ತಾಲ್ಲೂಕುಗಳ ಗಂಗಾವಳಿ ಹಾಗೂ ಮಂಜಗುಣಿ ನಡುವೆ ₹ 30 ಕೋಟಿ ವೆಚ್ಚದಲ್ಲಿ ಮೂರನೇ ಸೇತುವೆ ನಿರ್ಮಾಣವಾಗಲಿದೆ ಎಂದರು.
 
ಈ ಮೂರು ಸೇತುವೆಗಳು ಸಾರ್ವಜನಿಕರಿಗೆ ತೀರಾ ಅಗತ್ಯವಿದ್ದು, ಕಳೆದ ಹಲವಾರು ವರ್ಷಗಳಿಂದ ಸ್ಥಳೀಯರು ದೋಣಿ ಹಾಗೂ ಬಾರ್ಜ್  ಮೂಲಕ ನದಿ ದಾಟುತ್ತಿದ್ದರು. ಗಂಗಾವಳಿ– ಮಂಜಗುಣಿ ನಡುವೆ ಇದಕ್ಕೂ ಮೊದಲು  ಕೆಲ ತಿಂಗಳ ಹಿಂದೆ ಬಾರ್ಜ್  ಸೌಲಭ್ಯ ಕೂಡ ಒದಗಿಸಲಾಗಿತ್ತು. ಮುಂದೆ ಈ ಬಾರ್ಜ್ ಅನ್ನು ಅಘನಾಶಿನಿ– ತಡದಿ ಬಳಿ ನದಿ ದಾಟಲು  ಬಳಕೆ ಮಾಡಲಾಗುವುದು. ಅಘನಾಶಿನಿ– ತಡದಿ ನಡುವೆ ಸೇತುವೆ ಗಾಗಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ₹ 60 ಕೋಟಿ  ಪ್ರಸ್ತಾವನೆ ಕಳಿಸಲಾಗಿದೆ. ಐಗಳಕುರ್ವೆ ಬಳಿ ಅಘನಾಶಿನಿ ನದಿಗೆ ತೂಗು ಸೇತುವೆ ನಿರ್ಮಾಣಕ್ಕೆ ಮೊದಲು ಒಲವು ತೋರ ಲಾಗಿತ್ತು.  ಆದರೆ, ಸ್ಥಳೀಯರು ಸೇತುವೆ ಯನ್ನು  ತಮ್ಮ ನಿತ್ಯದ ಉದ್ದೇಶಕ್ಕಾಗಿ  ಹೆಚ್ಚು ಪ್ರಮಾಣ ದಲ್ಲಿ ಬಳಕೆ ಮಾಡಬೇಕಾಗಿರು ವುದರಿಂದ ಸಿಮೆಂಟ್ ಸೇತುವೆಗೇ ಆದ್ಯತೆ ನೀಡಲಾಯಿತು.’ ಎಂದರು.
 
‘ಮುಖ್ಯಮಂತ್ರಿ ಅವರ ವಿಶೇಷ ನೆರವಿನಿಂದ ತಾಲ್ಲೂಕಿನ ಕಾರ್ಲಾಂಡ್ ಕಟ್ಟೆ ದುರಸ್ತಿಗಾಗಿ ₹ 25 ಕೋಟಿ ಮಂಜೂರಾಗಿದೆ. ಅದನ್ನು ಎಲ್ಲೆಲ್ಲಿ ಹೇಗೆ ಬಳಕೆ ಮಾಡಬೇಕು ಎನ್ನುವ ಕ್ರಿಯಾಯೋಜನೆ ತಯಾರಾಗಬೇಕಿದೆ. ಚಿಕ್ಕಿ ನೀರಾವರಿ ಇಲಾಖೆಯಿಂದ   ಪ್ರವಾಹ ತಡೆಗೋಡೆ ಹಾಗೂ ಬಾಂದರು ನಿರ್ಮಾಣಕ್ಕೆ ಒಟ್ಟೂ ₹ 4.5 ಕೋಟಿ ಮಂಜೂರಾಗಿದೆ. ಅದರಲ್ಲಿ ₹ 60 ಲಕ್ಷ ವೆಚ್ಚದಲ್ಲಿ ತಾಲ್ಲೂಕಿನ ಹೆಗಡೆ ಪಂಚಾಯ್ತಿಯ ಲುಕ್ಕೇರಿ–ಮಾಸೂರು ನಡುವೆ ಕಾರ್ಲ್ಯಾಂಡ್ ಕಟ್ಟೆ ನಿರ್ಮಾಣ, ದೀವಗಿ ಪಂಚಾಯ್ತಿಯ ಮಣಕಿ ಬಳಿ  ₹ 50 ಲಕ್ಷ ವೆಚ್ಚದಲ್ಲಿ ಕಾರಲ್ಯಾಂಡ್ ಕಟ್ಟೆ ನಿರ್ಮಾಣ, ಬಗ್ಗೋಣ ಹತ್ತಿರ ₹ 50 ಲಕ್ಷ ವೆಚ್ಚದಲ್ಲಿ ಕಾರ್ಲ್ಯಾಂಡ್ ಕಟ್ಟೆ ನಿರ್ಮಾಣ ಮಾಡಲಾಗುವುದು’ ಎಂದರು. 
 
ಐಗಳಕುರ್ವೆಗೆ ಸೇತುವೆ ಮಂಜೂ ರಾದ ಸಂತೋಷಕ್ಕೆ ಸ್ಥಳೀಯರು ಶಾಸಕ ರಿಗೆ ಸಿಹಿ ಹಂಚುವ ಮೂಲಕ ತಮ್ಮ ಸಂಭ್ರಮ ವ್ಯಕ್ತಪಡಿಸಿದರು. ಪಂಚಾಯ್ತಿ ಅಧ್ಯಕ್ಷರುಗಳಾದ ಕೃಷ್ಣಾನಂದ ವೆರ್ಣೇಕರ, ಶೋಭಾ ನಾಯ್ಕ,ವಕೀಲ ಜಯಂತ ನಾಯ್ಕ, ರಾಮ ನಾಯ್ಕ, ಸುಬ್ರಾಯ ಪಟಗಾರ,  ಟಿ.ವಿ. ಭಟ್ಟ, ಸಿ.ಜಿ. ಹೆಗಡೆ, ಮೋಹಿನಿ ಗುನಗಾ, ಶಾರದಾ ನಾಯ್ಕ ಮತ್ತಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.