ADVERTISEMENT

ಅನ್ನಭಾಗ್ಯ: ಹೆಚ್ಚುವರಿ ಅಕ್ಕಿ ವಿತರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:25 IST
Last Updated 18 ಏಪ್ರಿಲ್ 2017, 6:25 IST

ಕಾರವಾರ: ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಹೆಚ್ಚುವರಿಯಾಗಿ ಎರಡು ಕೆ.ಜಿ. ಅಕ್ಕಿ ವಿತರಿಸುವ ಯೋಜನೆಗೆ ಜಿಲ್ಲಾ ಉಸ್ತು­ವಾರಿ ಸಚಿವ ಆರ್.ವಿ.­ದೇಶಪಾಂಡೆ ಸೋಮವಾರ ಚಾಲನೆ ನೀಡಿದರು.ಹಳಿಯಾಳದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿ ವಿತರಿಸಿ ಮಾತನಾಡಿದ ಅವರು, ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿದಂತೆ ಏಪ್ರಿಲ್ ಒಂದರಿಂದ ಪ್ರತಿಯೊಬ್ಬ ಬಿಪಿಎಲ್ ಸದಸ್ಯನಿಗೆ 2 ಕೆ.ಜಿ. ಹೆಚ್ಚುವರಿ ಸೇರಿದಂತೆ ಒಟ್ಟು 7 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರತಿಯೊಬ್ಬರು ಹೊಟ್ಟೆ ತುಂಬಾ ಉಣ್ಣುವ ಮೂಲಕ ಸ್ವಾವಲಂಬಿ ಹಸಿವು ಮುಕ್ತ ರಾಜ್ಯ ನಿರ್ಮಾಣ ಸರ್ಕಾರದ ಗುರಿ.

ಇನ್ನು ಮುಂದೆ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 7ಕೆ.ಜಿ. ಅಕ್ಕಿ ದೊರೆಯಲಿದೆ. ಅಡುಗೆ ಅನಿಲ ಸಂಪರ್ಕ ಹೊಂದಿದ ಕುಟುಂಬಗಳಿಗೆ ಈ ಹಿಂದೆ ಸೀಮೆಎಣ್ಣೆ ನೀಡಲಾಗುತ್ತಿರಲಿಲ್ಲ. ಈಗ ಪ್ರತಿ ತಿಂಗಳು ಒಂದು ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಬಿ.ರಘುನಾಥ, ಜಿಲ್ಲೆಯಲ್ಲಿ 10,090 ಅಂತ್ಯೋದಯ ಕಾರ್ಡ್‌ಗಳು, 9,64,701 ಬಿಪಿಎಲ್ ಸದಸ್ಯರಿಗೆ 2,50,883 ಬಿಪಿಎಲ್ ಕಾರ್ಡುಗಳು ಮತ್ತು 82,347 ಎಪಿಎಲ್ ಸದಸ್ಯರಿಗೆ 14,435 ಎಪಿಎಲ್ ಕಾರ್ಡುಗಳಿವೆ. ಅಂತ್ಯೋದಯ ಪಡಿತರ ಚೀಟಿಗಳಿಗೆ ತಲಾ 35 ಕೆ.ಜಿ. ಅಕ್ಕಿ ಹಾಗೂ ಬಿಪಿಎಲ್ ಕಾರ್ಡುಗಳ ಸದಸ್ಯರಿಗೆ ತಲಾ 7ಕೆ.ಜಿ. ಅಕ್ಕಿಯನ್ನು ಜಿಲ್ಲೆಯಾದ್ಯಂತ ವಿತರಿಸಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ಶಂಕರ ರೇಣಕೆ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT