ADVERTISEMENT

ಅಬ್ಬರಿಸುತ್ತಿವೆ ಅರಬ್ಬಿ ಸಮುದ್ರದ ಅಲೆಗಳು

ರಭಸದ ಗಾಳಿ; ಇನ್ನೂ ನಾಲ್ಕು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 13:22 IST
Last Updated 27 ಮೇ 2018, 13:22 IST
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಶನಿವಾರ ಜೋರಾಗಿ ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳು
ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರಕ್ಕೆ ಶನಿವಾರ ಜೋರಾಗಿ ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳು   

ಕಾರವಾರ: ಸಾಮಾನ್ಯವಾಗಿ ಶಾಂತವಾಗಿರುವ ಇಲ್ಲಿನ ಪ್ರಮುಖ ಪ್ರವಾಸಿ ಆಕರ್ಷಣೆ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಅರಬ್ಬಿ ಸಮುದ್ರವು ಎರಡು ದಿನಗಳಿಂದ ಭೋರ್ಗರೆಯುತ್ತಿದೆ. ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಕಡಲಕಿನಾರೆಯಲ್ಲಿ ನಿಲ್ಲಲು ಕಷ್ಟವಾಗುವಷ್ಟು ರಭಸದಲ್ಲಿ ಗಾಳಿ ಬೀಸುತ್ತಿದೆ.

ಸಮುದ್ರದಲ್ಲಿ ವಾಯವ್ಯ ಭಾಗದಿಂದ ಸುಮಾರು 30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಇನ್ನೂ ನಾಲ್ಕು ದಿನ ಸಮುದ್ರಕ್ಕೆ ಇಳಿಯದಿರುವುದು ಸೂಕ್ತ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ್ ಕೊಪ್ಪದ ಸಲಹೆ ನೀಡಿದ್ದಾರೆ.

ರಭಸದ ಗಾಳಿ ಬೀಸಲು ‘ಮೆಕುನು’ ಚಂಡಮಾರುತ ಕಾರಣವೇ ಅಥವಾ ಮುಂಗಾರು ಮಾರುತ ಹತ್ತಿರ ಬರುತ್ತಿರು
ವುದರಿಂದಲೇ ಎಂದು ಸ್ಪಷ್ಟವಾಗಿ ತಿಳಿ
ಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

ಜಿಲ್ಲೆಯ ಕರಾವಳಿ ಭಾಗದಲ್ಲಿ ಎರಡು ದಿನಗಳಿಂದ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಜೋರು ಮಳೆಯಾಗಿಲ್ಲ. ಆದರೆ, ಗಾಳಿಯಲ್ಲಿ ತೇವಾಂಶ ಹೆಚ್ಚಿರುವುದು ಮೇಲ್ನೋಟಕ್ಕೇ ಅರಿವಿಗೆ ಬರುತ್ತಿದೆ.

ಪ್ರವಾಸಿಗರ ಸಂಖ್ಯೆ ಇಳಿಕೆ: ಟ್ಯಾಗೋರ್ ಕಡಲ ತೀರವು ಸಮುದ್ರ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ. ಮೋಟಾರ್ ಗ್ಲೈಡಿಂಗ್, ಪ್ಯಾರಾ ಗ್ಲೈಡಿಂಗ್ ಮುಂತಾದ ಸಾಹಸ ಕ್ರೀಡೆಗಳು ಇಲ್ಲಿ ನಡೆಯುತ್ತಿರುತ್ತವೆ.

ಆದರೆ, ಸಮುದ್ರದಲ್ಲಿ ಮೂರರಿಂದ ಮೂರೂವರೆ ಮೀಟರ್‌ಗಳಷ್ಟು ಎತ್ತರದ ಅಲೆಗಳು ಏಳುತ್ತಿವೆ. ಶುಕ್ರವಾರ ರಾತ್ರಿ ಸಮುದ್ರದ ಅಲೆಗಳು ತಟದ ಮೇಲಿನವರೆಗೂ ಅಪ್ಪಳಿಸಿದ್ದವು. ಹೀಗಾಗಿ ಕ್ರೀಡಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಡಲ ತೀರದಲ್ಲಿ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ.

ಆಲ್ಗಿಗಳ ವೃದ್ಧಿ?

‘ಅರಬ್ಬಿ ಸಮುದ್ರ ಮೇಲೆ ಉಂಟಾಗಿರುವ ಒತ್ತಡ, ಅಲ್ಲಿ ವೃದ್ಧಿಯಾಗುತ್ತಿರುವ ಆಲ್ಗಿಗಳು (ಪಾಚಿ) ಹಾಗೂ ಜವಾಬ್ದಾರಿಯುತ ಮೀನುಗಾರಿಕೆ ಕಣ್ಮರೆಯಾಗಿರುವುದು ಮೀನುಗಳ ಕ್ಷೀಣಿಸುವಿಕೆಗೆ ಕಾರಣವಾಗಿವೆ’ ಎನ್ನುತ್ತಾರೆ ಕಡಲ ಜೀವವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ.

‘ಸಮುದ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಸೇರುತ್ತಿದೆ. ಅದರಿಂದ ಆಲ್ಗೆಗಳು ಹೆಚ್ಚಾಗಿ ಬೆಳೆಯುತ್ತಿವೆ. ಇದರಿಂದಾಗಿ ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾಗುತ್ತಿದೆ. ಇದು ಮೀನುಗಳ ನಶಿಸುವಿಕೆಗೂ ಕಾರಣವಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.