ADVERTISEMENT

ಅರ್ಜಿಗಳ ಗಣಕೀಕರಣಕ್ಕೆ ಹೊಸ ತಂತ್ರಾಂಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:32 IST
Last Updated 21 ಜುಲೈ 2017, 7:32 IST

ಕಾರವಾರ: ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳು ಹಾಗೂ ದಾಖಲೆಗಳ ಗಣಕೀಕರಣಕ್ಕೆ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್‌ಐಸಿ) ‘ಅರಣ್ಯ ಹಕ್ಕುಗಳ ಮೇಲ್ವಿಚಾರಣಾ ವ್ಯವಸ್ಥೆ’ ಎಂಬ ಹೊಸ ತಂತ್ರಾಂಶವನ್ನು ರೂಪಿಸಿದ್ದು, ಕಾಯ್ದೆ ಅನುಷ್ಠಾನ ವಿಷಯದಲ್ಲಿ ಉತ್ತರ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ.

ಭೂಮಿ ಹಕ್ಕು ಪಡೆಯಲು ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿಗಳು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಯಲು ಅರ್ಜಿದಾರರು ಹರಸಾಹಸ ಪಡಬೇಕಾಗಿತ್ತು. ಅವರು ಸಲ್ಲಿಸಿದ ದಾಖಲೆಯು ಸಮಿತಿಯ ಮುಂದೆ ಸರಿಯಾಗಿ ಪರಿಶೀಲನೆಗೊಳ್ಳದೆಯೇ ಅಥವಾ ನಾನಾ ಕಾರಣಗಳಿಂದ ಅರ್ಜಿ ಇತ್ಯರ್ಥಗೊಳ್ಳುವುದು ವಿಳಂಬ ಆಗುತ್ತಿತ್ತು.

ಇದನ್ನು ಮನಗಂಡ ಜಿಲ್ಲಾಡಳಿತವು, ಅರ್ಜಿದಾರರ ದಾಖಲೆ ಗಳನ್ನು ಗಣಕೀರಣ ಮಾಡುವುದರಿಂದ ಈ ವಿಳಂಬವನ್ನು ತಪ್ಪಿಸಬಹುದು ಮತ್ತು ಅರ್ಜಿದಾರರಿಗೆ ಹಕ್ಕು ದೊರಕಿಸಿ ಶೀಘ್ರ ನ್ಯಾಯ ಒದಗಿಸಬಹುದೆಂದು ಅರಣ್ಯ ಹಕ್ಕು ಕಾಯ್ದೆಗೆ ಪ್ರತ್ಯೇಕ ತಂತ್ರಾಂಶವನ್ನು ಎನ್‍ಐಸಿ ಸಹಕಾರದಲ್ಲಿ ರೂಪಿಸಿದೆ.

ADVERTISEMENT

‘ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ವೇಗ ಮತ್ತು ಸ್ಪಷ್ಟತೆ ಹಾಗೂ ಅರ್ಜಿದಾರರಿಗೆ ನಿಖರತೆ ಒದಗಿಸುವುದು ‘ಫಾರೆಸ್ಟ್‌ ರೈಟ್ಸ್‌ ಮಾನಿಟರಿಂಗ್‌ ಸಿಸ್ಟಮ್‌’ ತಂತ್ರಾಂಶದ ಮುಖ್ಯ ಉದ್ದೇಶವಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಗ್ರಾಮ ಅರಣ್ಯ ಹಕ್ಕು ಸಮಿತಿಗೆ ಬಂದ ಅರ್ಜಿಗಳನ್ನು ಗ್ರಾಮಸಭೆಯಲ್ಲಿ ಪರಿಶೀಲಿಸಿ ಅಲ್ಲಿಂದ ನೇರವಾಗಿ ವಿಭಾಗ ಮಟ್ಟದ ಕಚೇರಿಗೆ ಕಳಿಸಿ ಅಲ್ಲಿರುವ ಡಾಟಾ ಎಂಟ್ರಿ ಆಪರೇಟರ್ ಮೂಲಕ ಅರ್ಜಿದಾರರ ಸಂಪೂರ್ಣ ದಾಖಲೆ ಗಳನ್ನು ಗಣಕೀಕರಣಗೊಳಿಸಲಾಗುತ್ತದೆ.

ವಿಭಾಗ ಮಟ್ಟದಲ್ಲಿಯೇ ಕಾರ್ಯದರ್ಶಿ ಯಾಗಿರುವ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆ ಅರ್ಜಿಯನ್ನು ಪರಿಶೀಲಿಸಿ, ಅರ್ಜಿದಾರರಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ಹಿಂಬರಹವಾಗಿ ನೀಡುತ್ತಾರೆ. ನಂತರ ವಿಭಾಗಮಟ್ಟದಲ್ಲಿ ಅನುಮೋದನೆಗೆ ಕಳುಹಿಸಲಾಗುತ್ತದೆ.

‘ಅಲ್ಲಿಂದ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಯ ಅನುಮೋದನೆ ಪಡೆದು ನೇರವಾಗಿ ಭೂಮಿ ತಂತ್ರಾಂಶಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅರ್ಜಿದಾರರಿಗೆ ತಮ್ಮ ಭೂಮಿಯ ಪಟ್ಟಾ ಮತ್ತು ಪಹಣಿ ಮುದ್ರಿತ ಪ್ರತಿ ಸಿಗುತ್ತದೆ. ಈ ಎಲ್ಲ ಪ್ರಕ್ರಿಯೆಯನ್ನು ಅರ್ಜಿದಾರರು ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಾಲ್ಲೂಕು ಮಟ್ಟದಲ್ಲಿ ನೀಡಲಾಗುವ ವಿಶಿಷ್ಟ ಸಂಖ್ಯೆಯಿಂದ ಎಲ್ಲಿಂದಲೂ ನೋಡಲು ಅವಕಾಶವಿದೆ ಮತ್ತು ತಮ್ಮ ಅರ್ಜಿಯ ಎಲ್ಲ ದಾಖಲೆಗಳೂ ಗಣಕೀಕರಣ ಗೊಳ್ಳುವುದರಿಂದ ಮುಂದಿನ ಹಂತದಲ್ಲಿ ತಮ್ಮ ದಾಖಲೆಗಳು ಕೈತಪ್ಪುತ್ತವೆ ಎಂಬ ಆತಂಕವೂ ಇರುವುದಿಲ್ಲ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.