ADVERTISEMENT

ಅರ್ಬನ್ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ

ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆ: ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಾಳೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಮೇ 2017, 11:48 IST
Last Updated 12 ಮೇ 2017, 11:48 IST
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆಯ ಶಿರಸಿ ಅರ್ಬನ್‌ ಸಹಕಾರಿ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವದ ಸಂಭ್ರಮದಲ್ಲಿದೆ. ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಇದೇ 13ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಭಾಗವಹಿಸುವರು. 
 
ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಅಧ್ಯಕ್ಷ ವಿ.ಎಸ್.ಸೋಂದೆ ಈ ಕುರಿತು ಮಾಹಿತಿ ನೀಡಿದರು. ರಾವ್‌ಬಹಾದ್ದೂರ್ ಪುಂಡಲೀಕ್ ನಾರಾಯಣ ಪಂಡಿತ್ ಅವರು ಸಮಾನಮನಸ್ಕ 12 ಜನರೊಂದಿಗೆ ಸೇರಿ ಶಿರಸಿ ರೂರಲ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಎಂಬ ಸಂಸ್ಥೆಯನ್ನು ಸಹಕಾರ ಕಾನೂನು 1904ರ ಅಡಿಯಲ್ಲಿ ನೋಂದಣಿ ಮಾಡಿಸಿದರು.
 
ಶೇಷಗಿರಿ ನಾರಾಯಣ ಕೇಶವೈನ್ ಅವರ ಶ್ರಮದಿಂದ ಈ ಸಂಸ್ಥೆ 1913 ಏಪ್ರಿಲ್‌ನಲ್ಲಿ ಶಿರಸಿ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ಆಗಿ ಪರಿವರ್ತನೆ ಗೊಂಡಿತು. ಆಗ ಸಂಸ್ಥೆಯಲ್ಲಿ ಇದ್ದ ಸದಸ್ಯರ ಸಂಖ್ಯೆ 19. ಈಗ ಇದೇ ಸಂಸ್ಥೆ 39359 ಶೇರುದಾರ ಸದಸ್ಯರನ್ನು ಹೊಂದಿದೆ ಎಂದರು. 
 
₹13.74 ಕೋಟಿ ಶೇರು, ಬಂಡವಾಳ, ₹ 580. 64 ಕೋಟಿ ಠೇವು, ₹ 670 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಬ್ಯಾಂಕ್ ₹ 3.33 ಕೋಟಿ ನಿವ್ವಳ ಲಾಭಗಳಿಸಿದೆ. ಶೇರುದಾರ ಸದಸ್ಯರಿಗೆ ಶೇ 9 ಲಾಭಾಂಶ ವಿತರಿಸಲು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
 
16 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಪ್ರಮುಖ ಆರು ಶಾಖೆಗಳಲ್ಲಿ ಎಟಿಎಂ ತೆರೆಯಲು ಮುಂದಾಗಿದೆ. ಕರ್ನಾಟಕದ 266 ಪಟ್ಟಣ ಸಹಕಾರಿ ಬ್ಯಾಂಕ್‌ಗಳಲ್ಲಿ ಪ್ರಥಮ 10ರಲ್ಲಿ ಅರ್ಬನ್ ಬ್ಯಾಂಕ್ ತನ್ನ ಸ್ಥಾನ ಉಳಿಸಿಕೊಂಡಿದೆ.
 
ಬೆಳಗಾವಿ ವಿಭಾಗದಲ್ಲಿ ನಿರಂತರವಾಗಿ ಪ್ರಥಮ ಸ್ಥಾನ ಉಳಿಸಿಕೊಂಡು ಕರ್ನಾಟಕ ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕುಗಳ ಮಹಾಮಂಡಳದ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹೇಳಿದರು. 
 
ಆರ್ಥಿಕವಾಗಿ ಸಬಲವಾಗಿರುವ ಬ್ಯಾಂಕ್ ಸಾಮಾಜಿಕ ಚಟುವಟಿಕೆಯಲ್ಲೂ ಸಕ್ರಿಯವಾಗಿದೆ. ಇಲ್ಲಿನ ಎಂ.ಎಂ. ಕಾಲೇಜು, ನಗರದ ಪ್ರಾಥಮಿಕ ಶಾಲೆಗಳು, ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆ, ರೋಟರಿ ಆಸ್ಪತ್ರೆ, ದೇಶಕ್ಕಾಗಿ ಹೋರಾಟ ಮಾಡಿದ ಸೈನಿಕರಿಗೆ ನೆರವನ್ನು ಬ್ಯಾಂಕ್ ವತಿಯಿಂದ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
 
ವ್ಯವಸ್ಥಾಪಕ ನಿರ್ದೇಶಕ ಪಾಂಡು ರಂಗ ಪೈ ಮಾತನಾಡಿ ‘ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ರೂಪೆ ಕಾರ್ಡ್,ಭಿಮ್ ಅಪ್ಲಿಕೇಷನ್ ಬಳಸಲು ಬಳಸಲು ಸಹಾಯವಾಗುವ ಲಿಂಕ್ ಅನ್ನು ಸಧ್ಯದಲ್ಲಿಯೇ ನೀಡಲಿದೆ.
 
ನೆಫ್ಟ್, ಆರ್‌ಟಿಜಿಎಸ್, ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿದೆ’ ಎಂದರು. ಬ್ಯಾಂಕಿನ ನಿರ್ದೇಶಕರಾದ ಮಿಲಿಂದ ಪಂಡಿತ, ಜಯದೇವ ನಿಲೇಕಣಿ, ರಾಘವೇಂದ್ರ ಪೈ,ಪ್ರಮುಖ ರಾದ ಆರತಿ ಶೆಟ್ಟರ್, ವಿಠ್ಠಲ ನಾಯಕ, ಶ್ರೀಪತಿ ಭಟ್ ಉಪಸ್ಥಿತರಿದ್ದರು.
 
ಕಾರ್ಯಕ್ರಮದ ಉದ್ಘಾಟನೆ: ಇದೇ 13ರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಬನ್ ಬ್ಯಾಂಕ್ ಅಧ್ಯಕ್ಷ ವಿ.ಎಸ್. ಸೋಂದೆ ವಹಿಸುವರು. ಜಿಲ್ಲಾ ಉಸ್ತು ವಾರಿ ಸಚಿವ ಆರ್.ವಿ. ದೇಶ ಪಾಂಡೆ, ಪಂಚಾಯತ್‌ರಾಜ್ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಮತ್ತು ಸಹಕಾರ ಸಂಘಗಳ ನಿಬಂಧಕ ಎಂ.ಕೆ. ಅಯ್ಯಪ್ಪ, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುವರು.
 
ಸಂಜೆ 6 ಗಂಟೆಯಿಂದ ಶಿವಮೊಗ್ಗದ ಸಪ್ತಸ್ವರ ತಂಡದ ರಸಮಂಜರಿ, ಸರಿಗಮ ಕಾರ್ಯಕ್ರಮದ ಶ್ರೀರಕ್ಷಾ, ಗಾಯಕಿ ಸಾನ್ವಿ ಶೆಟ್ಟಿ, ಮಿಮಿಕ್ರಿ ಗೋಪಿ ಹಾಗೂ ಮಂಗಳೂರಿನ ಹೆಜ್ಜೆನಾದ ತಂಡದಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.