ADVERTISEMENT

ಅಳಿವಿನ ಅಂಚಿನಲ್ಲಿ ಮೇದಿನಿಯ ‘ಪರಿಮಳ ಸಣ್ಣಕ್ಕಿ’ !

ಮುಷ್ಟಿ ಮೇದಿನಿ ಸಣ್ಣಕ್ಕಿ ಬೆರೆಸಿದರೆ ಅನ್ನಕ್ಕೆ ವಿಶೇಷ ಪರಿಮಳ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:43 IST
Last Updated 20 ಫೆಬ್ರುವರಿ 2017, 6:43 IST

ಕುಮಟಾ: ನಾಗರಿಕ ಸೌಲಭ್ಯಗಳು ತೀರಾ ಕಡಿಮೆ ಇರುವ ತಾಲ್ಲೂಕಿನ ಅತ್ಯಂತ ಹಿಂದುಳಿದ ಹಾಗೂ ಭೌಗೋಳಿಕವಾಗಿ ಅತಿ ಎತ್ತರದ ಪ್ರದೇಶದಲ್ಲಿರುವ ಮೇದಿನಿಯಲ್ಲಿ ಬೆಳೆಯುವ ವಿಶೇಷ ಪರಿಮಳದ ಸಣ್ಣಕ್ಕಿ ಸ್ಥಳೀಯರ ಅಜ್ಞಾನ, ಕೃಷಿ ಇಲಾಖೆಯ ನಿರ್ಲಕ್ಷ್ಯದಿಂದ ಇಂದು ಅಳಿವಿನ ಅಂಚಿನಲ್ಲಿದೆ.

ಯಾವುದೇ ಮಿಶ್ರ ತಳಿಯಲ್ಲದ ತನ್ನ ಅಪ್ಪಟ ಸಹಜತೆಯಿಂದಾಗಿಯೇ ಮೇದಿನಿ ಸಣ್ಣಕ್ಕಿ ವಿಶೇಷ ಪರಿಮಳ ಹೊಂದಿದೆ. ಮೇದಿನಿ ಸಣ್ಣಕ್ಕಿಯ ಪಾಯಸ, ಕೇಸರಿಬಾತ್ ಗೆ ತನ್ನದೇ ವಿಶಿಷ್ಟ ರುಚಿ, ಪರಿಮಳ ಇರುತ್ತದೆ. ವಿಶೇಷ ಅಡುಗೆ ಸಂದರ್ಭದಲ್ಲಿ ಅನ್ನ ಮಾಡುವಾಗ ಒಂದು ಮುಷ್ಟಿ ಮೇದಿನಿ ಸಣ್ಣಕ್ಕಿಯನ್ನು ಬೆರೆಸಿದರೆ ಎಲ್ಲ ಅನ್ನಕ್ಕೆ ವಿಶೇಷ ಪರಿಮಳ ಬರುತ್ತದೆ. ಇದು ಮೇದಿನಿ ಸಣ್ಣಕ್ಕಿ ವಿಶೇಷತೆ.

ತಾಲ್ಲೂಕಿನ ಸೊಪ್ಪಿನಹೊಸಳ್ಳಿ ಪಂಚಾಯ್ತಿಗೆ ಸೇರುವ ಮೇದಿನಿ ಗ್ರಾಮ ಅತಿ ಎತ್ತರದ ಪ್ರದೇಶದಲ್ಲಿರುವ ಕಾರಣ ದಿಂದ ರಸ್ತೆ, ವಿದ್ಯುತ್, ಪಂಚಾಯ್ತಿ ಕಚೇರಿ, ಆಸ್ಪತ್ರೆ ಮುಂತಾದ  ತೀರಾ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ಮೇದಿನಿ ಗ್ರಾಮಕ್ಕೆ ಪ್ರಯಾಣ ಬೆಳೆಸುವುದು ಸುಲಭವಲ್ಲ. ಗಟ್ಟಿ ಮುಟ್ಟಾದ ಜೀಪು ಮಾತ್ರ ಮೇದಿನಿ ರಸ್ತೆ ಘಟ್ಟದ ರಸ್ತೆಯಲ್ಲಿ ಪ್ರಯಾಣಿಸಲು ಸಾಧ್ಯ. 

ಚುನಾವಣಾ ಮತದಾನ ಸೇರಿದಂತೆ ಎಲ್ಲ ಅಗತ್ಯಗಳಿಗೂ ಸ್ಥಳೀಯರು ಎಳೆಂಟು ಕಿಲೋ ಮೀಟರ್ ಘಟ್ಟ ಇಳಿದು ಸಂತೆ  ಗುಳಿಗೆ ಬರಬೇಕು.  ಪರಿಮಳ ಸಣ್ಣಕ್ಕಿ ಜತೆ ಇಲ್ಲಿಯ ರೈತರು ಬೇರೆ ತಳಿಯ ಭತ್ತವನ್ನೂ ಬೆಳೆಯುತ್ತಾರೆ. ಪರಿಮಳ ಸಣ್ಣಕ್ಕಿ ಇಳುವರಿ ತೀರಾ ಕಡಿಮೆ ಇರುವು ದರಿಂದ ಅಷ್ಟು ಆಸಕ್ತಿ ವಹಿಸುತ್ತಿಲ್ಲ.

‘ಒಟ್ಟೂ ಕ್ಷೇತ್ರಗಳ ಪೈಕಿ ಎರಡು–ಮೂರು ಎಕರೆಯಲ್ಲಿ ಮಾತ್ರ ಈಗ ಹತ್ತಾರು ರೈತರು ಪರಿಮಳ ಸಣ್ಣಕ್ಕಿ ಬೆಳೆ ಯುತ್ತಾರೆ. ಉಳಿದ ಭತ್ತಕ್ಕೆ  ಹೋಲಿಸಿ ದರೆ ಅದರ ಇಳುವರಿ ಅರ್ಧಕ್ಕಿಂತಲೂ ಕಡಿಮೆ ಇರುವುದರಿಂದ ಅದರ ಬೆಲೆ ಕಿಲೋಗೆ ನೂರು ರೂಪಾಯಿ ಆಗುತ್ತದೆ. ನಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಒಂದೆರಡು ಕಿಲೋ ಅಕ್ಕಿಯನ್ನು ಪ್ರೀತಿ ಯಿಂದ ಕೊಡಲು ಮಾತ್ರ ಅದನ್ನು ಬೆಳೆಯಲಾಗುತ್ತದೆ. ಪರಿಮಳ ಸಣ್ಣಕ್ಕಿಗೆ  ರಾಸಾಯನಿಕ ಗೊಬ್ಬರ ಬದಲು ನೈಸ ರ್ಗಿಕ ಗೊಬ್ಬರ ಬಳಸಿದರೆ ಅದಕ್ಕೆ ಜಾಸ್ತಿ ಪರಿಮಳ, ರುಚಿ ಜಾಸ್ತಿ’ ಎಂದು ಮೇದಿನಿಯ ರೈತರಾದ ರಾಮ ಗೌಡ, ಗಣಪು ಗೌಡ ತಿಳಿಸುತ್ತಾರೆ.

ಮೇದಿನಿಯಂಥ ಎತ್ತರದ ಪ್ರದೇ ಶದ ವಿಶೇಷ ಹವಾಮಾನ, ಮಣ್ಣಿನ ಗುಣದಿಂದಾಗಿಯೇ ಅಲ್ಲಿಯ ಸಣ್ಣಕ್ಕಿಗೆ ಪರಿಮಳದ ಗುಣ ಇದೆ.  ಕಳೆದ ಹಲವು ವರ್ಷಗಳಿಗೆ ಹೋಲಿಸಿ ನೋಡಿದರೆ ಮೇದಿನಿಯಲ್ಲಿ ಸಣ್ಣಕ್ಕಿ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.