ADVERTISEMENT

ಉತ್ತರಕನ್ನಡ: ಬಾಲ್ಯ ವಿವಾಹ ನಿರ್ಮೂಲನೆಯತ್ತ ದಾಪುಗಾಲು

ದೇವರಾಜ ನಾಯ್ಕ
Published 21 ಮಾರ್ಚ್ 2018, 10:51 IST
Last Updated 21 ಮಾರ್ಚ್ 2018, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಬಾಲ್ಯವಿವಾಹದ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಗಣನೀಯ ಇಳಿಕೆಯಾಗಿದ್ದು, ಬಾಲ್ಯವಿವಾಹ ಮುಕ್ತ ಜಿಲ್ಲೆಯಾಗಿ ಪರಿವರ್ತನೆಗೊಳ್ಳುವತ್ತ ದಾಪುಗಾಲು ಇಡುತ್ತಿದೆ.

21 ವರ್ಷದ ಒಳಗಿನ ಬಾಲಕ, 18 ವರ್ಷದ ಒಳಗಿನ ಬಾಲಕಿಯ ನಡುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನ ಒಳಗಿದ್ದರೂ ಅವರಿಗೆ ಮದುವೆ ಮಾಡಿಸುವ ಪದ್ಧತಿ ಜಿಲ್ಲೆಯಿಂದ ಕ್ರಮೇಣ ದೂರವಾಗುತ್ತಿದೆ. 2015ಕ್ಕೆ ಇದ್ದ 35 ಪ್ರಕರಣಗಳು ದಾಖಲಾಗಿದ್ದವು. 2017ರಲ್ಲಿ 5 ಮಾತ್ರ ದಾಖಲಾಗಿವೆ.  2020ರಲ್ಲಿ ಇಂಥ ಪ್ರಕರಣಗಳೇ ಇಲ್ಲವಾಗುತ್ತವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಗ್ರಾಮೀಣದಲ್ಲೇ ಹೆಚ್ಚಿದ್ದವು: ನಗರ ಪ್ರದೇಶಕ್ಕೆ ಹೋಲಿಸಿದರೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೇ ಪ್ರಕರಣಗಳು ಹೆಚ್ಚಿದ್ದವು. ಕರಾವಳಿ ತಾಲ್ಲೂಕುಗಳಿಗೆ ಹೋಲಿಸಿದರೆ ಘಟ್ಟದ ಮೇಲಿನ ಹಳಿಯಾಳ, ಮುಂಡಗೋಡ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿದ್ದವು.

ADVERTISEMENT

ಕಾರಣವೇನಿತ್ತು?: ಒಂದೆಡೆ ಆರ್ಥಿಕ ಸಂಕಷ್ಟ ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣವಾದರೆ ಇನ್ನೊಂದೆಡೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರೆ ಸಾಕು ಎನ್ನುವ ಮನಸ್ಥಿತಿಯಿಂದ ವಯಸ್ಸಾಗುವ ಮುನ್ನವೇ ಮದುವೆ ಮಾಡಿಕೊಡಲಾಗುತ್ತಿತ್ತು. ಜತೆಗೆ ಕೌಟುಂಬಿಕ ಬಾಂಧವ್ಯದ ಗಂಟಿಗೆ ಬಿದ್ದು ಕೂಡ ಹಲವರು ಮಕ್ಕಳನ್ನು ಮದುವೆ ಮಾಡಿಕೊಡಲು ಮುಂದಾಗುತ್ತಿದ್ದರು. ಇನ್ನು ಕೆಲವೆಡೆ ಮೂಢನಂಬಿಕೆಯೂ ಇದಕ್ಕೆ ಕಾರಣವಾಗುತ್ತಿತ್ತು ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್.

ತಿಳಿವಳಿಕೆ ಇಲ್ಲದಿರುವುದೂ ಕಾರಣ: ‘ಗ್ರಾಮೀಣ ಜನರಲ್ಲಿ ತಿಳಿವಳಿಕೆಯ ಕೊರತೆ ಇದೆ. ಮೇಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳು ಸಹ ಇಂಥ ವಿವಾಹಕ್ಕೆ ಮುಖ್ಯ ಕಾರಣವಾಗುತ್ತಿದ್ದವು. ಮಗಳು ಹೆಚ್ಚು ದಿನ ಮನೆಯಲ್ಲಿದ್ದು ಮುಂದೆ ಈ ರೀತಿಯ ಅನಾಹುತಗಳು ನಡೆದರೆ ಆಗ ನಮಗೇ ಕಷ್ಟ ಎಂಬ ಭಾವನೆ ಪಾಲಕರಲ್ಲಿ ಬರುವುದರಿಂದ ಈ ವಿವಾಹಗಳು ನಡೆಯುತ್ತಿದ್ದವು’ ಎನ್ನುತ್ತಾರೆ ಅವರು.

‘ಹೆಣ್ಣು ಮಕ್ಕಳ ಶಿಕ್ಷಣ, ಅವರ ಅಭಿವೃದ್ಧಿಗಾಗಿ ಸರ್ಕಾರದಿಂದ ವಿವಿಧ ಯೋಜನೆಗಳು, ಬಾಲ್ಯ ವಿವಾಹದ ದುಷ್ಪರಿಣಾಮ ಹಾಗೂ ಶಿಕ್ಷೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿರುವುದು ಇದರ ಪ್ರಮಾಣದಲ್ಲಿ ಇಳಿಕೆಯಾಗಲು ಕಾರಣವಾಗಿದೆ’ ಎನ್ನುತ್ತಾರೆ ಅವರು.

ಗುಟ್ಟಾಗಿಯೂ ಆಗುತ್ತಿದೆ: ಈ  ಕುರಿತು ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕೆಲವೆಡೆ ಈಗಲೂ ಗುಟ್ಟಾಗಿ ಬಾಲ್ಯ ವಿವಾಹಗಳು ನಡೆಯುತ್ತಿವೆ. ಇನ್ನು ಕೆಲವರು ಬೇರೆ ಜಿಲ್ಲೆಗೆ ಕರೆದುಕೊಂಡು ಹೋಗಿ ಮದುವೆ ಮಾಡಿಸಿಕೊಂಡು ಬರುತ್ತಾರೆ. ಬಹಳ ಅಪರೂಪ ಎಂಬಂತೆ ರಾತ್ರಿ ಕೂಡ ಮದುವೆ ಮಾಡಿಸಲಾಗುತ್ತದೆ. ಆದರೆ, ಇವೆಲ್ಲವೂ ಗುಟ್ಟಾಗಿಯೇ ಉಳಿಯುತ್ತವೆ. ಅಧಿಕಾರಿಗಳು ಅಥವಾ ಪೊಲೀಸರ ಗಮನಕ್ಕೆ ಬಾರದಂತೆ ತಡೆಯಲಾಗುತ್ತದೆ’ ಎನ್ನುತ್ತಾರೆ

ಬಾಲ್ಯ ವಿವಾಹದಲ್ಲಿ ತಪ್ಪಿತಸ್ಥರು ಯಾರು?

ಬಾಲ್ಯ ವಿವಾಹ ಮಾಡಿಕೊಳ್ಳುವ 18 ವರ್ಷ ವಯಸ್ಸು ಮೀರಿದ ಯುವಕ, ಮಧ್ಯಸ್ಥಿಕೆದಾರರು, ಬಾಲಕ, ಬಾಲಕಿಯರ ಪೋಷಕರು ಇದರಲ್ಲಿ ತಪ್ಪಿತಸ್ಥರಾಗಲಿದ್ದಾರೆ. ಜತೆಗೆ ಈ ವಿವಾಹದಲ್ಲಿ ಪಾಲೊಳ್ಳುವವರನ್ನೂ ತಪ್ಪಿತಸ್ಥರು ಎಂದು ಪರಿಗಣಿಸಿ, ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಇಂಥ ಪ್ರಕರಣಗಳು ಕಂಡು ಬಂದಲ್ಲಿ ‘ಮಕ್ಕಳ ಸಹಾಯವಾಣಿ 1098’ ಅಥವಾ ನೇರವಾಗಿ ಪೊಲೀಸರಿಗೆ ದೂರು ನೀಡಬಹುದಾಗಿದೆ. ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ.

**

ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಿಂದ ಮುಕ್ತಗೊಳಿಸಿ, ಅವರು ಬಾಲ್ಯವನ್ನು ಅನುಭವಿಸುವಂತೆ ಮಾಡಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು
– ರಾಜೇಂದ್ರ ಬೇಕಲ್, ಮಹಿಳಾ , ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.