ADVERTISEMENT

ಉದ್ಯೋಗ ಆಕಾಂಕ್ಷಿಗಳಿಗೆ ಹೊಸ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 6:41 IST
Last Updated 16 ಮೇ 2017, 6:41 IST

ಶಿರಸಿ: ಪಿಯುಸಿ ಹಾಗೂ ಇದಕ್ಕಿಂತ ಮೇಲ್ಪಟ್ಟ ವಿದ್ಯಾರ್ಹತೆ ಪಡೆದಿರುವ ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮ ತಾಲ್ಲೂಕಿನಲ್ಲಿ ಪ್ರಾರಂಭವಾಗಿದೆ. ತಾಲ್ಲೂಕು ಪಂಚಾಯ್ತಿ ಆವರಣ ಮತ್ತು ಎಂಇಎಸ್ ಕಾಲೇಜಿನ ವಾಚನಾಲಯದಲ್ಲಿ ಇದೇ 22ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ನಿರುದ್ಯೋಗಿ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮಕ್ಕೆ ಸೋಮವಾರ ಇಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಹತೆ ಹೊಂದಿದ್ದರೂ ಅನೇಕ ಯುವಜನರು ಅರಿವಿನ ಕೊರತೆಯಿಂದ ಉದ್ಯೋಗ ನೋಂದಣಿ ಮಾಡಿಸಿರುವುದಿಲ್ಲ. 

ಅದಕ್ಕಾಗಿ ರಾಜ್ಯ ಸರ್ಕಾರವೇ ನೇರವಾಗಿ ಈ ಕಾರ್ಯ ಕೈಗೆತ್ತಿಕೊಂಡು ಯುವಜನರಿಗೆ ನೆರವಾಗಲು ಮುಂದಾಗಿದೆ. ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಬೇಕು ಎಂದರು.

ADVERTISEMENT

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮಾಹಿತಿ ನೀಡಿ ‘ರಾಜ್ಯದಲ್ಲಿ ಪ್ರತಿವರ್ಷ ಸುಮಾರು 6.80 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, 3.5 ಲಕ್ಷ ವಿದ್ಯಾರ್ಥಿಗಳು ಪಿಯುಸಿ ಹಾಗೂ 3.4 ಲಕ್ಷ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರೈಸಿ ಹೊರಬರುತ್ತಾರೆ.

ನಗರ ಪ್ರದೇಶಗಳಲ್ಲಿ ಸಾಕಷ್ಟು ಉದ್ಯೋಗಾವ ಕಾಶಗಳು ಸಿಗುವುದರಿಂದ ನಗರವಾಸಿಗಳು ಕೆಲಸ ದೊರಕಿಸಿಕೊಳ್ಳಬಹುದು. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶಿಕ್ಷಣದ ನಂತರ ಮುಂದೇನು ಎಂಬ ಗೊಂದಲ ಕಾಡುತ್ತದೆ. ಈ ಕಾರಣಕ್ಕಾಗಿ ಸರ್ಕಾರವೇ ಮುಂದಾಗಿ ಉದ್ಯೋಗಾಕಾಂಕ್ಷಿಗಳ ನೋಂದಣಿ ಮಾಡಿಸುತ್ತಿದೆ’ ಎಂದರು.

ಅನೇಕರು ಅರ್ಹತೆ ಇದ್ದರೂ ಅಗತ್ಯ ನೈಪುಣ್ಯತೆಯ ಕೊರತೆಯಿಂದ ಉದ್ಯೋಗ ಪಡೆಯಲು ವಿಫಲರಾಗು ತ್ತಾರೆ.  ಈ ನೈಪುಣ್ಯತೆಯನ್ನು ಯುವ ಜನರಿಗೆ ಒದಗಿಸಲು ರಾಜ್ಯ ಸರ್ಕಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಅಂತರ್ಜಾಲ ತಾಣ ಅಭಿವೃದ್ಧಿಪಡಿಸಿದೆ.

ತರಬೇತಿ ಪಡೆಯಲು ಯುವ ಜನರು ಇಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದು. ಮೊಬೈಲ್‌ನಲ್ಲಿ ಸಹ www.kaushalkar.com ವೆಬ್‌ಸೈಟ್‌ ಅನ್ನು ತೆರೆದು ನೋಂದಣಿ ಮಾಡಿ ಕೊಳ್ಳಬಹುದು. ಗ್ರಾಮ ಪಂಚಾಯ್ತಿ ಗಳಲ್ಲೂ ನೋಂದಣಿಗೆ ಅವಕಾಶವಿದೆ. ಒಂದು ವಾರದ ನಂತರ ಜಿಲ್ಲಾ ಕೇಂದ್ರದಲ್ಲಿ ನೋಂದಣಿ ಮಾಡಬಹುದು ಎಂದು ಅವರು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರ ಮನೆ ಮಾತನಾಡಿ, ಈ ಕಾರ್ಯಕ್ರಮವು ಯುವಜನರಿಗೆ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ ‘ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಕಾಲೇಜಿನಿಂದ ಹೊರ ಹೋಗುವಾಗಲೇ ನೋಂದಣಿ ಮಾಡಿದರೆ ಇದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮ ಮಾಡುವುದು ತಪ್ಪುತ್ತದೆ’ ಎಂದರು. ತಹಶೀಲ್ದಾರ್ ಬಸಪ್ಪ ಪೂಜಾರಿ ಸ್ವಾಗತಿಸಿದರು.

ಒಂದು ತಾಸು ವಿಳಂಬ
‘ತಾಲ್ಲೂಕು ಪಂಚಾಯ್ತಿ ಸಂಘಟಿಸಿರುವ ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಬದಲಾಗಿ ನಗರಸಭೆ ಅಧ್ಯಕ್ಷರ ಹೆಸರನ್ನು ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನಕ್ಕೆ ಹಾಕಲಾಗಿದೆ.

ನಿಯಮ ಪಾಲನೆ ಮಾಡಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಆರೋಪಿಸಿದರು. ಇದೇ ಕಾರಣಕ್ಕಾಗಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿ ತಮ್ಮ ಕಚೇರಿಯಲ್ಲಿಯೇ ಕುಳಿತಿದ್ದರು. ಹೀಗಾಗಿ ಕಾರ್ಯಕ್ರಮ ಒಂದು ತಾಸು ವಿಳಂಬವಾಗಿ ಆರಂಭವಾಯಿತು.

*

ಕೌಶಲಾಭಿವೃದ್ಧಿ, ಉದ್ಯಮ ಶೀಲತೆ, ಜೀವನೋಪಾಯ ಇಲಾಖೆಯ ವಿಶೇಷ ಕೌಶಲ ತರಬೇತಿ ನೈಪುಣ್ಯ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು.
ಬಸಪ್ಪ ಪೂಜಾರಿ
ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.