ADVERTISEMENT

ಎಲ್ಲ ತಾಲ್ಲೂಕು ಬಸ್‌ ನಿಲ್ದಾಣಗಳು ಹೈಟೆಕ್‌

ಮಾದರಿ ಬಸ್‌ ನಿಲ್ದಾಣ ಶಂಕುಸ್ಥಾಪನೆ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:19 IST
Last Updated 12 ಜುಲೈ 2017, 6:19 IST

ಹಳಿಯಾಳ: ‘ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳ ರಾಜ್ಯ ರಸ್ತೆ ಸಾರಿಗೆ ನಿಲ್ದಾಣಗಳನ್ನು ಹೈಟೆಕ್ ಮಾದರಿ ಬಸ್ ನಿಲ್ದಾಣಗಳನ್ನಾಗಿ ಮಾರ್ಪಡಿಸಿ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಳಿಯಾಳದಲ್ಲಿ ಸುಮಾರು ₹4.50 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ನವೀನ ಮಾದರಿಯ ಬಸ್ ನಿಲ್ದಾಣದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಸಾರಿಗೆ ಅಭಿವೃದ್ದಿ ಸಾಕಷ್ಟು ಮಾಡಲಾಗಿದೆ. ಹಂತಹಂತವಾಗಿ ಗ್ರಾಮೀಣ ಭಾಗದಲ್ಲಿಯೂ ಕೂಡ ಅಗತ್ಯಕತೆಗೆ ತಕ್ಕಂತೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗುವುದು’ ಎಂದರು.

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ ‘ಹಳಿಯಾಳ ತಾಲ್ಲೂಕು ರಾಜ್ಯದಲ್ಲಿಯೇ ಪ್ರಗತಿ ಪರವಾದ ತಾಲ್ಲೂಕಾಗಿದೆ. ರಾಜ್ಯ ರಸ್ತೆ ಸಾರಿಗೆ ಪ್ರಯಾಣಿಕರ ಸೇವಾ ಮನೋಭಾವನೆಯಿಂದ ಕಾರ್ಯ ಮಾಡುತ್ತಿದೆ, ಲಾಭಕ್ಕಾಗಿ ಅಲ್ಲ. ಪಟ್ಟಣದ ಸಾರಿಗೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ರಸ್ತೆ ವಿಸ್ತರಣೆಯ ವೇಳೆಯಲ್ಲಿ ತೆರವುಗೊಳಿಸಿದ್ದು, ಶೀಘ್ರದಲ್ಲಿಯೇ ತೆರವು ಮಾಡಿದ  ಅಂಗಡಿಕಾರರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದರು.

‘ಕಾಳಿನದಿಯಿಂದ ತಾಲ್ಲೂಕಿನ ಕೆರೆ ಬಾಂದಾರಗಳಿಗೆ ನೀರು ತುಂಬಿಸುವ ನೀರಾವರಿ ಯೋಜನೆಯ ಕಾಮಗಾರಿಯ ಟೆಂಡರ್‌ ಜುಲೈ ಕೊನೆಯ ವಾರದೊಳಗಾಗಿ ಪೂರ್ಣಗೊಂಡು ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇದರಿಂದ 15 ಸಾವಿರ ಹೆಕ್ಟೇರ್‌ ಜಮೀನು ನೀರಾವರಿಯಾಗಲಿದೆ. ರಾಜ್ಯ ಸರ್ಕಾರ ರೈತರ ₹ 50 ಸಾವಿರ ಸಾಲ ಮನ್ನಾ ಮಾಡಿದೆ.

ಕೇಂದ್ರ ಸರ್ಕಾರ ರಾಷ್ಟ್ರಿಕೃತ ಬ್ಯಾಂಕುಗಳಲ್ಲಿನ ಸಾಲವನ್ನು ಮನ್ನಾ ಮಾಡಲಿ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಈ ವರೆಗೆ ಸ್ಪಂದನೆ ಇಲ್ಲ’ ಎಂದರು.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ (ಸಿಎಸ್ಆರ್) ಯೋಜನೆಯಡಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ನಿರ್ಮಿಸಿದ ಬಸ್ ತಂಗುದಾಣಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಅಧ್ಯಕ್ಷ ಸದಾನಂದ ಡಂಗನವರ, ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯ ಕೃಷ್ಣಾ ಪಾಟೀಲ, ಲಕ್ಷ್ಮಿ ಕೊರ್ವೆಕರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುಭಾಷ ಕೋರ್ವೆಕರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.