ADVERTISEMENT

ಕಂಪ್ಯೂಟರ್‌, ಪೀಠೋಪಕರಣ ಬೆಂಕಿಗಾಹುತಿ

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೊಠಡಿಯಲ್ಲಿ ಶಾರ್ಟ್‌ ಸರ್ಕಿಟ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 11:36 IST
Last Updated 9 ಮಾರ್ಚ್ 2017, 11:36 IST
ಕಾರವಾರ: ಇಲ್ಲಿನ ಜಿಲ್ಲಾ ಪಂಚಾಯ್ತಿ ಕಚೇರಿಯ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ (ಸಿಇಓ) ಕೊಠಡಿಯಲ್ಲಿ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡು ಒಳಗಿದ್ದ ಕಂಪ್ಯೂಟರ್‌, ಟಿ.ವಿ., ಪೀಠೋಪಕರಣ ಹಾಗೂ ಕೆಲ ಕಡತಗಳು ಸುಟ್ಟು ಕರಕಲಾದ ಘಟನೆ ಬುಧವಾರ ಬೆಳಿಗ್ಗೆ ನಡೆಯಿತು.
 
ವಿಷಯ ತಿಳಿಯುತ್ತಿದ್ದಂತೆ ಕಚೇರಿಯಲ್ಲಿನ ಸಿಬ್ಬಂದಿ ಕೂಗಿಕೊಂಡು ಕಟ್ಟಡದಿಂದ ಹೊರಗೆ ಬಂದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯು ಬೆಂಕಿಯ ಜ್ವಾಲೆ ಇತರೆ ಕೊಠಡಿಗಳಿಗೆ ವ್ಯಾಪಿಸದಂತೆ ಅಗ್ನಿಯನ್ನು ನಂದಿಸಿದರು. ಸುಟ್ಟುಕರಕಲಾಗಿದ್ದ ಪೀಠೋಪಕರಣ ಹಾಗೂ ಇತರೆ ಸಾಮಗ್ರಿಗಳನ್ನು ಸಿಬ್ಬಂದಿ ನೆರವಿನಿಂದ ಹೊರಗೆ ಸ್ಥಳಾಂತರಿಸ ಲಾಯಿತು. ಘಟನೆಯಿಂದ ₹ 4 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. 
 
ಘಟನೆಯ ವಿವರ:  ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿಇಓ ಎಲ್‌.ಚಂದ್ರಶೇಖರ ನಾಯಕ ಅವರು ಬೆಳಿಗ್ಗೆ 10.15ಕ್ಕೆ ಕೊಠಡಿಯಿಂದ ತೆರಳಿದ್ದರು. ಬಳಿಕ 10.30ರ ಸುಮಾರಿಗೆ ಹವಾನಿಯಂತ್ರಿತ ಯಂತ್ರದಲ್ಲಿ ಕಾಣಿಸಿಕೊಂಡ ಬೆಂಕಿ ಕೊಠಡಿಯೊಳಗೆ ವ್ಯಾಪಿಸಿದೆ. ಕೊಠಡಿಯಿಂದ ಸುಟ್ಟು ವಾಸನೆ ಬರುವುದನ್ನು ಗ್ರಹಿಸಿ ಹೊರಗಿದ್ದ ಗುಮಾಸ್ತ ಬಾಗಿಲು ತೆರೆದಾಗ ಬೆಂಕಿ ಹೊತ್ತಿರುವುದು ಕಂಡುಬಂದಿದೆ. 
 
‘ಕೊಠಡಿಯ ಬಾಗಿಲ ಬಳಿಯಲ್ಲಿ ಹೊಗೆಯಾಡುತ್ತಿರುವುದನ್ನು ಕಂಡು ಬಾಗಿಲು ತೆರೆದೆ. ಒಮ್ಮೆಲೆ ಬೆಂಕಿ ಕಿಡಿಗಳು ಹೊರಗೆ ಬಂದವು. ಒಳಗಿನ ಪೀಠೋ ಪಕರಣ ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳು ದಗ ದಗ ಉರಿಯುತ್ತಿತ್ತು. ಕೂಡಲೇ ಕೂಗಿಕೊಂಡು ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗೆ ವಿಷಯ ಮುಟ್ಟಿಸಿದೆ’ ಎಂದು ಗುಮಾಸ್ತ ಸುರೇಶ್‌ ಹೊನ್ನಾವರ ಅವರು ಘಟನೆ ಕುರಿತು ಮಾಹಿತಿ ನೀಡಿದರು. 
 
‘ಶಾರ್ಟ್‌ ಸರ್ಕಿಟ್‌ನಿಂದಲೇ ಬೆಂಕಿ ಹೊತ್ತಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕೊಠಡಿಯಲ್ಲಿ ಯಾವುದೇ ಮಹತ್ವದ ದಾಖಲೆಗಳು ಇರಲಿಲ್ಲ. ಟೇಬಲ್‌ ಮೇಲಿದ್ದ ಒಂದೆರಡು ಕಡತಗಳಿಗೆ ಬೆಂಕಿ ತಗುಲಿದೆ. ಇನ್ನೂ ಕಂಪ್ಯೂಟರ್‌ನಲ್ಲಿದ್ದ ಡೇಟಾಗಳ ಬ್ಯಾಕ್‌ಅಪ್‌ ಇದೆ. ಕಟ್ಟಡದಲ್ಲಿರುವ ಈಗಿನ ವಿದ್ಯುತ್‌ ವ್ಯವಸ್ಥೆಯನ್ನು ಪರಿ ಶೀಲಿಸಿ, ಮುಂದೆ ಈ ರೀತಿ ಘಟನೆಗಳು ಆಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.