ADVERTISEMENT

ಕದಂಬೋತ್ಸವಕ್ಕೆ ಸಿಂಗಾರಗೊಂಡ ಬನವಾಸಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಪಸ್ಥಿತಿ, ಚಾಲನೆ ನೀಡಲಿರುವ ಸಚಿವ ಆರ್‌.ವಿ. ದೇಶಪಾಂಡೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 10:55 IST
Last Updated 18 ಫೆಬ್ರುವರಿ 2017, 10:55 IST
ಶಿರಸಿ: ಕನ್ನಡ ಸಾಹಿತ್ಯ ಲೋಕದ ಜ್ಞಾನಪೀಠ ಎಂದೇ ಕರೆಯಿಸಿಕೊಳ್ಳುವ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ತಾಲ್ಲೂಕಿನ ಬನವಾಸಿಯಲ್ಲಿ ಇಂದಿನಿಂದ (ಫೆ.18) ಎರಡು ದಿನಗಳ ಕಾಲ ನಡೆಯುವ ಕದಂಬೋತ್ಸವದಲ್ಲಿ ನಡೆಯಲಿದೆ. 
 
ಬರಗಾಲದ ಕಾರಣ ಕಳೆದ ವರ್ಷ ಕದಂಬೋತ್ಸವವನ್ನು ರಾಜ್ಯ ಸರ್ಕಾರ ಆಚರಣೆ ಮಾಡಿರಲಿಲ್ಲ. ಇದೇ ಕಾರಣಕ್ಕಾಗಿ ಈ ಬಾರಿ 2015 ಮತ್ತು 2016ನೇ ಸಾಲಿನ ಪಂಪ ಪ್ರಶಸ್ತಿಯನ್ನು ಕದಂಬೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಹಿರಿಯ ಸಾಹಿತಿಗಳಾದ ಬಿ.ಎ. ಸನದಿ ಹಾಗೂ ಹಂ.ಪ. ನಾಗರಾಜಯ್ಯ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಉಮಾಶ್ರೀ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಪ್ರದಾನ ಮಾಡುವರು. 
 
ಈ ಅಪೂರ್ವ ಕ್ಷಣಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಸಹಸ್ರಾರು ಜನರು ಸಾಕ್ಷಿಯಾಗಲಿದ್ದಾರೆ. ಜಿಲ್ಲೆ, ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರು, ಗಣ್ಯರನ್ನು ಸ್ವಾಗತಿಸಲು ಬನವಾಸಿಯ ಬೀದಿಗಳು ಶೃಂಗಾರ ಗೊಂಡಿವೆ. ಐತಿಹಾಸಿಕ ಮಧುಕೇಶ್ವರ ದೇವಾಲಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. 
 
‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಬನವಾಸಿಯ ಬಗ್ಗೆ ಹೆಮ್ಮೆ ಹೊಂದಿದ್ದ ಪಂಪನ ಹೆಸರಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಂಪ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಮೊದಲು ರಾಜ್ಯದ ರಾಜಧಾನಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿತ್ತು. ಬನವಾಸಿಯಲ್ಲಿ ಕದಂಬೋತ್ಸವ ಆರಂಭಗೊಂಡ ಮೇಲೆ ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಪ್ರತಿವರ್ಷ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.