ADVERTISEMENT

ಕಲ್ಲು ಗಣಿಗಾರಿಕೆ ತಡೆಗೆ ಗ್ರಾಮಸ್ಥರ ಒತ್ತಾಯ

ಜಿಲ್ಲಾಧಿಕಾರಿ ನಕುಲ್‌ಗೆ ಹನೇಹಳ್ಳಿ ಜನರ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 5:28 IST
Last Updated 10 ಜನವರಿ 2017, 5:28 IST
ಕಾರವಾರ: ಗಣಿಗಾರಿಕೆ ಸ್ಥಗಿತಗೊಳಿಸ­ಬೇಕೆಂದು ಆಗ್ರಹಿಸಿ ಹನೇಹಳ್ಳಿ ಗ್ರಾಮ ಪಂಚಾಯ್ತಿ ಕೆಲ ಸದಸ್ಯರು, ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಎಸ್.ಎಸ್.­ನಕುಲ್‌ ಅವರಿಗೆ ಮನವಿ ಸಲ್ಲಿಸಿದರು.
 
ಕುಮಟಾ ತಾಲ್ಲೂಕಿನ ಹನೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ವೆ ನಂ.345, 346 ಹಾಗೂ 340ರಲ್ಲಿ ನಡೆಯುತ್ತಿರುವ ಶಿಲೆಕಲ್ಲು ಗಣಿಗಾರಿಕೆ­ಯಿಂದ ಸುತ್ತಲು ವಾಸಿ­ಸುತ್ತಿರುವ ಜನರಿಗೆ, ಕಾಡುಪ್ರಾಣಿಗಳಿಗೆ ತೊಂದರೆ­ಯಾಗುತ್ತಿದೆ.  ಹನೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಸ.ನಂ. 345ರಲ್ಲಿ ವಿಜಯಲಕ್ಷ್ಮೀ ಗಜಾನನ ನಾಯಕ, ಸ.ನಂ.346ರಲ್ಲಿ ಶಾಂತ ನಾಯಕ ಹಾಗೂ ಸ.ನಂ.340ರಲ್ಲಿ ಜನಾರ್ದನ ಕೃಷ್ಣ ಹೆಗಡೆ ಅವರು ಹಲವಾರು ವರ್ಷಗಳಿಂದ ನಿರಂತರವಾಗಿ ಶಿಲೆಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶ ಜನ­ವಸತಿಯಿಂದ ಕೂಡಿದ್ದು, ಗಣಿಸ್ಫೋಟ­ದಿಂದ ಅನೇಕ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಅಪಾಯದ ಮಟ್ಟಕ್ಕೆ ತಲುಪಿವೆ. ಕುಡಿ­ಯುವ ನೀರಿನ ಬಾವಿಗಳು ಕಲುಷಿತ­ಗೊಂಡಿವೆ. ತೆರೆದ ಬಾವಿಗಳು ಬಿರುಕು ಬಿಟ್ಟು ಕುಸಿದು ಬೀಳುವ ಹಂತದಲ್ಲಿದೆ ಎಂದು ಮನವಿಯಲ್ಲಿ ವಿವರಿಸಿದರು.
 
ಇಲ್ಲಿನ ಕೃಷಿ ಭೂಮಿಯು ಶಿಲೆಕಲ್ಲಿನ ಚೂರು ಹಾಗೂ ದೂಳಿನಿಂದ ಆವೃತಗೊಂಡಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆಯಲ್ಲದೇ ಬೆಳೆಗಳನ್ನು ಬೆಳೆಯಲು ತೊಂದರೆಯಾಗಿದೆ. ಕಲ್ಲು­ಕ್ವಾರಿಯ ಪಕ್ಕದಲ್ಲೇ ಅರಣ್ಯ ಪ್ರದೇಶ­ವಿದ್ದು, ಗಣಿಸ್ಫೋಟದಿಂದ ಕಾಡುಪ್ರಾಣಿ­ಗಳು, ಪಕ್ಷಿಗಳು ಅಳಿವಿನಂಚಿಗೆ ತಲುಪಿದೆ. ಇದಲ್ಲದೇ ಒಡೆದ ಕಲ್ಲುಗಳನ್ನು ಸಾಗಿಸಲು ರಸ್ತೆ ನಿರ್ಮಿಸಿದ್ದರಿಂದಾಗಿ ಬೆಳೆಯ ರಕ್ಷಣೆಗೆ ನಿರ್ಮಿಸಿದ ಬೇಲಿಗಳು ನಾಶವಾಗಿದ್ದು, ಪ್ರಾಣಿಗಳು ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯುಂಟು ಮಾಡುತ್ತಿದೆ. ಸ್ಫೋಟದಿಂದ ಉಂಟಾಗುವ ದೂಳು ಹಾಗೂ ಕರ್ಕಶ ಶಬ್ದದಿಂದ ಗ್ರಾಮದ ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ಹಲವಾರು ಸಮಸ್ಯೆ ಎದುರಿಸು­ವಂತಾಗಿದೆ ಎಂದು ದೂರಿದ್ದಾರೆ.   ಈ ಬಗ್ಗೆ ಕ್ರಮ ಕೈಗೊಂಡು ಗಣಿಕಾರಿಕೆ ಸ್ಥಗಿತಗೊಳಿಸಬೇಕು ಮತ್ತು ಗಣಿಸ್ಫೋಟ ­ದಿಂದ ಹಾನಿ­ಗೊಳ­ಗಾದ­ವರಿಗೆ ಸರ್ಕಾರ­ದಿಂದ  ಪರಿಹಾರ ದೊರಕಿಸಿ ­ಕೊಡಬೇಕೆಂದು ಆಗ್ರಹಿಸಿದರು.
 
ಹನೇಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾದ ಜೈವಂತ ಪಿ.ನಾಯ್ಕ, ಉಷಾ ಸಂತೋಷ ನಾಯ್ಕ, ದೇವು ಆಗೇರ, ದೇವಕಿ ಶಾಂತಾರಾಮ ನಾಯ್ಕ, ಗಂಗೆ ಆನಂದು ಗೌಡ, ಗ್ರಾಮಸ್ಥರಾದ ರೋಹಿದಾಸ ಜನ್ನು, ಸಿ.ಡಿ.ನಾಯ್ಕ, ಎನ್.ಎನ್.ನಾಯ್ಕ, ವೆಂಕಟೇಶ ಗೌಡ, ಶಾಂತಾರಾಮ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.