ADVERTISEMENT

ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಿ

ತೋಟಗಾರಿಕಾ ಬೆಳೆಗಳಿಗೆ ಚಳಿಗಾಲದ ರೋಗ ಬಾಧೆ; ಹಾರ್ಟಿ ಕ್ಲಿನಿಕ್‌ ವಿಷಯ ತಜ್ಞರಿಂದ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:30 IST
Last Updated 9 ಜನವರಿ 2017, 8:30 IST
ಶಿರಸಿ ಸಮೀಪದ ಮಾವಿನ ತೋಟದ ಮರದಲ್ಲಿ ಹೂ ಬಿಟ್ಟಿರುವುದು
ಶಿರಸಿ ಸಮೀಪದ ಮಾವಿನ ತೋಟದ ಮರದಲ್ಲಿ ಹೂ ಬಿಟ್ಟಿರುವುದು   
ಶಿರಸಿ: ತೋಟಗಾರಿಕೆ ಬೆಳೆಗಳಿಗೆ ಚಳಿಗಾಲದಲ್ಲಿ ಕಂಡು ಬರುತ್ತಿರುವ ಕಡಿಮೆ ಉಷ್ಣಾಂಶದ ವಾತಾವರಣದಲ್ಲಿ ಕೆಲವು  ರೋಗ ಮತ್ತು ಕೀಟಗಳು ಉಲ್ಬಣವಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ರೈತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಾರ್ಟಿ ಕ್ಲಿನಿಕ್‌ ವಿಷಯ ತಜ್ಞರು ಸಲಹೆ ನೀಡಿದ್ದಾರೆ. 
 
ತೋಟಗಾರಿಕೆ ಬೆಳೆಗಳಲ್ಲಿ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಾದುದು ಅಗತ್ಯವಾಗಿದೆ. ಇದೀಗ ಮಾವಿನಲ್ಲಿ ಹೂ ಹೊರಟಿದ್ದು, ಜಿಗಿ ಹುಳ ಮತ್ತು ಬೂದಿ ರೋಗ ಕಂಡು ಬಂದಲ್ಲಿ ಅವುಗಳ ನಿಯಂತ್ರಣಕ್ಕೆ ಇಮಿಡಾಕ್ಲೋಪ್ರಿಡ್ 0.25 ಮಿ.ಲೀ. ಮತ್ತು ಕಾರ್ಬೆಂಡೆಂಜಿಂ 1 ಗ್ರಾಂ. ಅಥವಾ ನೀರಿನಲ್ಲಿ ಕರಗುವ ಗಂಧಕ 3 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣವನ್ನು ಸಿಂಪಡಿಸಬೇಕು ಎಂದು  ಎಂದು ವಿಷಯ ತಜ್ಞ ವಿ.ಎಂ.ಹೆಗಡೆ ಸಲಹೆ ನೀಡಿದ್ದಾರೆ. 
 
ಗೇರು ಗಿಡಗಳಲ್ಲಿ ಟೀ ಸೊಳ್ಳೆ ಕೀಟದ ನಿಯಂತ್ರಣಕ್ಕೆ ಕ್ಲೋರೋಫೈರಿಫಾಸ್ 2.5 ಮಿ.ಲೀ ಅಥವಾ ಕ್ವಿನಾಲಫಾಸ್ 2 ಮಿ.ಲೀ ಪ್ರತಿ ಲೀ. ನೀರಿಗೆ ಬೆರೆಸಿದ ದ್ರಾವಣ ಸಿಂಪಡಿಸಬೇಕು. ಕಲ್ಲಂಗಡಿ ಬೆಳೆಗೆ ಕಂಡು ಬರುವ ಥ್ರಿಪ್ಸ್ ನುಶಿ ಮತ್ತು ಎಲೆ ಸುರಂಗ ಕೀಟ ನಿಯಂತ್ರಣಕ್ಕೆ ಇಮಿಡಾಕ್ಲೋಪ್ರಿಡ್ 0.3 ಮಿಲಿ ಅಥವಾ ಅಸಿಫೇಟ್ 1ಗ್ರಾಂ ಪ್ರತಿ ಲೀ. ನೀರಿಗೆ ಸೇರಿಸಿ ಸಿಂಪಡಿಸಬೇಕು. 
 
ಕಲ್ಲಂಗಡಿ ಬೆಳೆಯಲ್ಲಿ ಬೂದಿ ರೋಗದ ನಿಯಂತ್ರಣಕ್ಕೆ ಕಾರ್ಬೆಂಡೆಂಜಿಂ 1 ಗ್ರಾಂ ಪ್ರತಿ ಲೀ. ನೀರಿಗೆ ಸೇರಿಸಿ ಸಿಂಪಡಣೆ ಮಾಡಬೇಕು. ಈ ಬೆಳೆಗೆ ಗಂಧಕಯುಕ್ತ ಶಿಲೀಂದ್ರನಾಶಕಗಳನ್ನು ಬಳಸಬಾರದು. ಹೆಚ್ಚು ಇಳುವರಿ ಹೊಂದಿರುವ ಕಾಳು ಮೆಣಸಿನ ಪೋಷಕಾಂಶಗಳ ಕೊರತೆಯಿಂದ ಹಳದಿಯಾಗುವ ಮತ್ತು ಸೊರಗುವ ಸಾಧ್ಯತೆಯಿದ್ದು ಅದನ್ನು ನಿವಾರಿಸಲು ಬಳ್ಳಿಗಳಿಗೆ, ನೀರಿನಲ್ಲಿ ಕರಗುವ 19:19:19 ಮತ್ತು 13:0:45 ಪ್ರತಿ ಗೊಬ್ಬರವನ್ನು 5 ಗ್ರಾಂ ಪ್ರತಿ ಲೀ. ನೀರಿಗೆ ಸೇರಿಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರತಿ ಬಳ್ಳಿಗೆ 1,5-20 ಲೀ. ನೀರು ಒದಗಿಸಬೇಕು. ಸಾವಯವ ವಸ್ತು­ಗಳಿಂದ ಬುಡಕ್ಕೆ ಮುಚ್ಚಿಗೆ ಮಾಡಬೇಕು ಎಂದು ಹೇಳಿದ್ದಾರೆ.
 
ಈರುಳ್ಳಿ ಬೆಳೆಯಲ್ಲಿ ಕಂಡು ಬರುವ ಸುರುಳಿ ತಿರುಪು ರೋಗ ಬಾಧೆ ನಿಯಂತ್ರಣಕ್ಕೆ ನಾಟಿ ಮಾಡಿದ ನಂತರ ಜಮೀನಿಗೆ ಎಕರೆಯೊಂದಕ್ಕೆ ಒಂದು ಕ್ವಿಂಟಲ್‌ನಷ್ಟು ಬೇವಿನ ಹಿಂಡಿ ಮತ್ತು ಎರೆ ಗೊಬ್ಬರ ಹಾಕಿ ಮೇಲು ಗೊಬ್ಬರವಾಗಿ ಅಮೋನಿಯಂ ನೈಟ್ರೇಟ್ ಮತ್ತು ಸಲ್ಫೇಟ್ ಆಪ್ ಪೊಟ್ಯಾಷ್ ಮಿಶ್ರಣ ನೀಡಿ, ನಂತರ 1.0 ಮಿ.ಲೀ. ಹೆಕ್ಸಾಕೊನಾಝೋಲ್ ಅಥವಾ 2.0 ಗ್ರಾಂ ಮ್ಯಾಂಕೋಜೆಬ್ ಶಿಲೀಂದ್ರ ನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು  
 
***
ಕಡಿಮೆ ಉಷ್ಣಾಂಶದ ಕಾರಣ­ದಿಂದ ತೋಟಗಾರಿಕೆ ಬೆಳೆಗಳಿಗೆ ರೋಗ ಭೀತಿ ಉಂಟಾಗಿದೆ. ರೈತರು ಈ ಸಂದರ್ಭದಲ್ಲಿ ಆತಂಕಕ್ಕೊಳಗಾಗದೆ ಅಗತ್ಯ ಕ್ರಮ ಕೈಗೊಳ್ಳಬೇಕು.
-ವಿ.ಎಂ.ಹೆಗಡೆ 
ವಿಷಯ ತಜ್ಞ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.