ADVERTISEMENT

ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 6:36 IST
Last Updated 18 ಏಪ್ರಿಲ್ 2017, 6:36 IST
ಕುಮಟಾ–ಹೊನ್ನಾವರ ಅವಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ  ಮರಾಕಲ್ ಯೋಜನೆ ಸಮೀಪ ಬೇಸಿಗೆಯಲ್ಲಿ ನೀರು ಸಂಗ್ರಹವಾಗಲು ಅಘನಾಶಿನಿ ನದಿಗೆ ಶಾಶ್ವತ ಒಡ್ಡು ನಿರ್ಮಿಸಿರವುದು
ಕುಮಟಾ–ಹೊನ್ನಾವರ ಅವಳಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮರಾಕಲ್ ಯೋಜನೆ ಸಮೀಪ ಬೇಸಿಗೆಯಲ್ಲಿ ನೀರು ಸಂಗ್ರಹವಾಗಲು ಅಘನಾಶಿನಿ ನದಿಗೆ ಶಾಶ್ವತ ಒಡ್ಡು ನಿರ್ಮಿಸಿರವುದು   

ಕುಮಟಾ: ಕಳೆದ ವರ್ಷದ ಬೇಸಿಗೆಯಲ್ಲಿ ಕುಮಟಾ–ಹೊನ್ನಾವರ ಪಟ್ಟಣಕ್ಕೆ ಕುಡಿ­ಯುವ ನೀರು ಪೂರೈಕೆ ಮಾಡಲು ಸ್ಥಳೀಯ ಪುರಸಭೆ ನಡೆಸಿದ ಪ್ರಯತ್ನದ ಜೊತೆಗೆ ತುರ್ತಾಗಿ ಕೈಕೊಂಡ ಮುನ್ನೆ­ಚ್ಚರಿಕೆ ಕ್ರಮದಿಂದ ಈ ವರ್ಷ ಕುಡಿ­ಯುವ ನೀರಿನ ಸಮಸ್ಯೆ ಇಲ್ಲದಂತಾಗಿದೆ.ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿಯೇ ಮರಾಕಲ್ ಕುಡಿಯುವ ನೀರಿನ ಯೋಜ­ನೆಯ ಅಘನಾಶಿನಿ ನದಿ ಪ್ರದೇಶದಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿತ್ತು. ಪುರಸಭೆ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಸೇರಿ ಸಮೀಕ್ಷೆ ನಡೆಸಿದಾಗ ನದಿಗೆ ಅನಧಿಕೃತವಾಗಿ ನೂರಾರು ರೈತರು ಪಂಪ್ ಸೆಟ್ ಹಾಕಿ ಹಗಲು–ರಾತ್ರಿ ನೀರು ಬಳಕೆ ಮಾಡು­ತ್ತಿರುವುದು ಗೊತ್ತಾಯಿತು. ಜಿಲ್ಲಾಧಿಕಾರಿ ಆದೇಶದಂತೆ ನದಿಯಂಚಿನ ಪ್ರದೇಶದ ಎಲ್ಲ ಗ್ರಾಮಗಳ ತ್ರಿಫೇಸ್ ವಿದ್ಯುತ್ ಪೂರೈಕೆ ಅವಧಿಯನ್ನು ಕಡಿತಗೊಳಿಸಿ ಅನಧಿಕೃತ ಪಂಪ್‌ಸೆಟ್‌ಗಳನ್ನು ಕಿತ್ತು ಹಾಕಲಾಗಿತ್ತು.

ಮರಾಕಲ್ ಯೋಜನೆಯ ಜಾಕ್‌­ವೆಲ್ ಪ್ರದೇಶದ ನದಿಯ ಭಾಗದಲ್ಲಿ ಜೆಸಿಬಿಯಿಂದ ಉಸುಕಿನ ದಿಬ್ಬಗಳನ್ನು ಸೀಳಿ ಮೇಲ್ಭಾಗದ ನೀರು ಜಾಕ್‌ವೆಲ್ ಪ್ರದೇಶಕ್ಕೆ ಹರಿದು ಬರು­ವಂತೆ ಮಾಡ­ಲಾಗಿತ್ತು. ಈ ನಡುವೆ ಕುಮಟಾ–ಹೊನ್ನಾವರ ಪಟ್ಟಣಕ್ಕೆ 15 ದಿನಗಳ ಕಾಲ ನೀರು ಪೂರೈಕೆ ಇಲ್ಲದೆ ಹಾಹಾಕಾರ ಉಂಟಾಗಿತ್ತು. ಅದೇ ಸಮಯದಲ್ಲಿ ಒಣಗಿ ಹೋಗಿದ್ದ ನದಿ ಮಧ್ಯೆ ಸುಮಾರು 70 ಮೀಟರ್ ಉದ್ದ,  5 ಅಡಿ ಅಗಲ, 5 ಅಡಿ ಎತ್ತರದ ಭದ್ರವಾದ ಸಿಮೆಂಟ್ ಒಡ್ಡು ನಿರ್ಮಿಸಿ ಹೊಸ ಪ್ರಯೋಗ  ನಡೆಸಲಾಗಿತ್ತು. ಈ ಕಾರ್ಯದಿಂದಾಗಿ ವರ್ಷ ಕುಮಟಾ–ಹೊನ್ನಾವರ ಪಟ್ಟಣಗಳಿಗೆ ಬೇಸಿಗೆಯಲ್ಲಿ  ಪೂರೈಕೆ ಸಾಧ್ಯವಾಗುವಷ್ಟು ನೀರು ಸಂಗ್ರಹಗೊಂಡಿದೆ.

‘ಕಳೆದ ಬೇಸಿಗೆಯಲ್ಲಿ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಮರಾ­ಕಲ್ ಯೋಜನೆಯ ವಿದ್ಯುತ್ ಮೋಟಾ­ರ್ ಮುಂತಾದ ಯಂತ್ರೋಪಕ­ರಣ­ಗಳು ಕೈಕೊಟ್ಟಿದ್ದವು. ಈ ವರ್ಷ ಸುಸ್ಥಿ­ಯಲ್ಲಿರುವ ಮೂರು ನೀರೆತ್ತುವ ಯಂತ್ರ ಅಳವಡಿಸಲಾಗಿದ್ದು, ಪ್ರತಿ 15 ದಿನ­ಕ್ಕೊಮ್ಮೆ ಯಂತ್ರ ಬದಲಾಯಿಸ­ಲಾಗು­ತ್ತದೆ. ಇದರಿಂದ ಯಂತ್ರ ಕೆಡುವ ಸಾಧ್ಯತೆ ತೀರಾ ಕಡಿಮೆ’ ಎಂದು ಪುರ­ಸಭೆ ಅಧ್ಯಕ್ಷ ಸಂತೋಷ ನಾಯ್ಕ ತಿಳಿಸಿದರು.

ADVERTISEMENT

ಮುಖ್ಯಾಧಿಕಾರಿ ಎಂ.ಕೆ. ಸುರೇಶ, ‘ ನದಿಗೆ ಅನಧಿಕೃತವಾಗಿ ಅಳವಡಿಸಿರುವ ಪಂಪ್‌ಸೆಟ್‌ ತೆರವುಗೊಳಿಸುವ ಕಾರ್ಯ ಕೈಕೊಳ್ಳಲಾಗುವುದು. ನೀರೆತ್ತಲು  ತೊಂದ­ರೆಯಾಗದಂತೆ ಹೆಚ್ಚುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕೂಡ ಅಳ­ವಡಿಸಲಾಗಿದೆ. ಯೋಜನೆ ಪ್ರದೇಶದಲ್ಲಿ ಸಿಬ್ಬಂದಿ ಕಾರ್ಯನಿರ್ವಹಣೆ ವೀಕ್ಷಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದರು. ಸದಸ್ಯರಾದ ಪ್ರಶಾಂತ ನಾಯ್ಕ,  ಪ್ರಶಾಂತ ರೇವಣಕರ್, ಹೇಮಚಂದ್ರ ನಾಯ್ಕ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.