ADVERTISEMENT

ಕುಮಟಾದಲ್ಲಿ ಕೃಷಿ ಪದವಿ ಕಾಲೇಜಿಗೆ ಆಗ್ರಹ

ಕರಾವಳಿ ಕೃಷಿ ಅಭಿವೃದ್ಧಿ ಚಿಂತನಾ ಸಮಿತಿ ಅಧ್ಯಕ್ಷ ಮುರಳಿಧರ ಪ್ರಭು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 11:56 IST
Last Updated 11 ಮಾರ್ಚ್ 2017, 11:56 IST
ಕುಮಟಾ : ‘ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಕೃಷಿ ಪದವಿ ಕಾಲೇಜು ಆರಂಭಿಸುವ ಬಗ್ಗೆ ಸರ್ಕಾರ ಈ ವರ್ಷದ ಆಯ–ವ್ಯಯದಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಇಲ್ಲಿಯ ಕರಾವಳಿ ಕೃಷಿ ಅಭಿವೃದ್ಧಿ ಚಿಂತನಾ ಸಮಿತಿ ಅಧ್ಯಕ್ಷ ಮುರಳಿಧರ ಪ್ರಭು ಹೇಳಿದರು.
 
ಶುಕ್ರವಾರ ಪಟ್ಟಣದಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘  ಜಿಲ್ಲೆಯಲ್ಲಿ ಪ್ರತೀ ವರ್ಷ ಸುಮಾರು 5 ಸಾವಿರ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಪಾಸಾಗುತ್ತಿದ್ದಾರೆ. ಅವರಲ್ಲಿ ಕೆಲವರು ಮಾತ್ರ  ಕೃಷಿ ಪದವಿ ಅಭ್ಯಾಸ ಮಾಡುವ ಆಸಕ್ತಿ ಹೊಂದಿದ್ದಾರೆ.
 
ಆದರೆ ಜಿಲ್ಲೆಯಲ್ಲಿ ಎಲ್ಲಿಯೂ ಕೃಷಿ ಪದವಿ ಕಾಲೇಜು ಇಲ್ಲವಾಗಿದೆ. ಕುಮಟಾದಲ್ಲಿ ಅಂಥ ಅವಕಾಶ ಲಭಿಸಿದರೆ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸುತ್ತದೆ. ಸ್ಥಳೀಯ ವೈವಿಧ್ಯಮಯ ಕೃಷಿ ಅಭಿವೃದ್ಧಿ ಹೊಂದುವುದರ ಜೊತೆಗೆ ಕೃಷಿ ಭೂಮಿ ಭೂ ಮಾಫಿಯಾಗಳ ಪಾಲಾಗುವುದನ್ನು ತಪ್ಪಿಸುವುದು ಸಮಿತಿಯ ದೂರಗಾಮಿ ಉದ್ದೇಶವಾಗಿದೆ’ ಎಂದರು.
 
‘ವೈಜ್ಞಾನಿಕ ಕೃಷಿಗೆ ಚಾಲನೆ ದೊರೆಯಬೇಕಾದರೆ ಕೃಷಿ ಸಂಶೋಧನಾ ಕೇಂದ್ರ, ಕೃಷಿ ಕಾಲೇಜುಗಳು ಅಗತ್ಯ. ಈ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಕೃಷಿ ಪದವಿ ಕಾಲೇಜಿಗೆ ಸರ್ಕಾರ ಅನುಮತಿ ನೀಡಿದರೂ ಅಲ್ಲಿ ಮೂಲ ಸೌಕರ್ಯ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿದೆ. 1917ರಲ್ಲಿ ಇಲ್ಲಿ ಆರಂಭವಾದ ಕೃಷಿ ಪಾಠ ಶಾಲೆಗೆ ಈಗ ಶತಮಾನೋತ್ಸವದ ಸಮಯ. 1974 ರಲ್ಲಿ ಅದರ ಬೆಳ್ಳಿ ಹಬ್ಬೆಕ್ಕೆ ಅಂದಿನ ಮುಖ್ಯಂತ್ರಿ ದಿವಂಗತ ದೇವರಾಜ ಅರಸು ಬಂದಿದ್ದರು. 
 
 ಜಿಲ್ಲೆಯ ಕರಾವಳಿ ಭಾಗದಲ್ಲಿ ಕೃಷಿಯಿಂದ ಜನರು ವಿಮುಖ ರಾಗಿದ್ದರಿಂದ ಕೃಷಿ ಭೂಮಿ ಬಳಕೆಯಾಗದೇ ಹಾಗೇ ಬಿದ್ದಿದೆ.  ಔದ್ಯಮಿಕ ಮದರಿಯ ವೈಜ್ಞಾನಿಕ ಕೃಷಿ ಪದ್ಧತಿ ಅನುಷ್ಠಾನಕ್ಕೆ ಬಂದರೆ ವಿದ್ಯಾವಂತ ಯುವಕರನ್ನು ಮತ್ತೆ ಕೃಷಿಯತ್ತ ಆಕರ್ಷಿಸಲು ಸಾಧ್ಯ ಎನ್ನವುದು ಸಮಿತಿ ಸಂಬಿಕೆ. ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾಸಕಿ ಶಾರದಾ ಶೆಟ್ಟಿ  ಸಮಿತಿ ಗೌರವಾಧ್ಯಕ್ಷರಾಗಿದ್ದು, ಈ ಸಲದ ಆಯವ್ಯವದಲ್ಲಿ ಈ ವಿಷಯಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಅವರಿಗೂ ಮನವಿ ಸಲ್ಲಿಸಲಾಗಿದೆ’ ಎಂದರು.
 
ಸಮಿತಿ ಕಾರ್ಯದರ್ಶಿ ಹಾಗೂ ನಿವೃತ್ತ ಕೃಷಿ ಅಧಿಕಾರಿ ಎಸ್‌.ವಿ. ಹೆಗಡೆ ಮಾತನಾಡಿ,  ‘ಜಿಲ್ಲೆಗೊಂದು ಕೃಷಿ ಕಾಲೇಜು ಇರಬೇಕು ಎನ್ನುವ ಸರ್ಕಾರದ ನೀತಿ ಇದ್ದರೂ ಮೂರು ಜಿಲ್ಲೆಗಳನ್ನೊಳಗೊಂಡ ಕರಾವಳಿ ವಲಯಕ್ಕೆ ಒಂದೂ ಕೃಷಿ ಕಾಲೇಜು ಇಲ್ಲವಾಗಿದೆ’ ಎಂದರು.    
 
 ಉಪಾಧ್ಯಕ್ಷ ಡಾ. ಸುರೇಶ ಹೆಗಡೆ ಮಾತನಾಡಿ,  ‘ ಅಘನಾಶಿನಿ ಹಿನ್ನೀರು ಪ್ರದೇಶದ ಉಪ್ಪು ನೀರಿನಲ್ಲೂ ಬೆಳೆಯುವ ಕಗ್ಗ ಭತ್ತ, ಅಳ್ವೆಕೋಡಿಯಲ್ಲಿ ಮಾತ್ರ ಬೆಳೆಯುವ ಸಿಹಿ ಈರುಳ್ಳಿ, ಭಟ್ಕಳದ ಮಲ್ಲಿಗೆ, ಮೇದನಿಯ ಪರಿಮಳ ಸಣ್ಣಕ್ಕಿ, ಅಂಕೋಲಾ ಕರಿ ಈಶಾಡು ಮಾವು ಮುಂತಾದ ಅಪರೂಪದ ತಳಿಗಳು ಅಭಿವೃದ್ಧಿ ಹೊಂದಬೇಕಾದರೆ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾಗುವ ಅಗತ್ಯವಿದೆ’ ಎಂದರು. 
 
  ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಆನಂದ ನಾಯ್ಕ, ಎಸ್.ಜಿ. ನಾಯ್ಕ, ಗೋಪಾಲಕೃಷ್ಣ ನಾಯ್ಕ,  ನಿವೃತ್ತ ಪಶುವೈದ್ಯ ಡಾ. ವಿ.ಜಿ. ಶೆಟ್ಟಿ, ಪ್ರಗತಿಪರ ಕೃಷಿಕ ಎಸ್‌.ವಿ. ಹೆಗಡೆ ನಂದಯ್ಯನ್, ಅಳ್ವೆಕೋಡಿ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ತಿಮ್ಮು ಮುಕ್ರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.