ADVERTISEMENT

ಕೊಪ್ಪನ ಕೆರೆ ಹೂಳೆತ್ತಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:52 IST
Last Updated 19 ಏಪ್ರಿಲ್ 2017, 5:52 IST

ಸಿದ್ದಾಪುರ: ತಾಲ್ಲೂಕಿನಲ್ಲಿಯೂ ಬರದ ಪರಿಸ್ಥಿತಿ ಭೀಕರವಾಗಿದ್ದು, ಈ ನಿಟ್ಟಿನಲ್ಲಿ ಜನ ಜಾಗೃತಿ  ಮೂಡಿಸುವ ಉದ್ದೇಶದಿಂದ ಶ್ರಮದಾನದ ಮೂಲಕ ಕೆರೆಯೊಂದರ ಹೂಳೆತ್ತಲು ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಘಟಕ  ನಿರ್ಧರಿಸಿದೆ.ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಧುರೀಣ ಶಶಿಭೂಷಣ ಹೆಗಡೆ ದೊಡ್ಮನೆ ಈ ವಿಷಯ ತಿಳಿಸಿದರು.

ಮೇ 1ರಂದು ತಾಲ್ಲೂಕಿನ ಹಣ­ಜೀರಿ ಸಮೀಪದ ಕೊಪ್ಪನ ಕೆರೆಯ ಹೂಳೆ­ತ್ತುವ ಕೆಲಸ ನಡೆಯಲಿದ್ದು, ಪಕ್ಷದ ನೂರಾರು  ಕಾರ್ಯಕರ್ತರು ಈ ಶ್ರಮ­ದಾನ ಕಾರ್ಯದಲ್ಲಿ ಭಾಗಿಯಾ­ಗುವರು. ಶಿರಸಿಯ ಜೀವ ಜಲ ಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮತ್ತು ಇತರ ಸದಸ್ಯರು ಕೂಡ ಭಾಗವಹಿಸುವರು.  ಈ ಕಾರ್ಯದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.

ಈ ಬಾರಿ ತಾಲ್ಲೂಕಿನ ಅಘನಾಶಿನಿ ನದಿಯ ಹರಿವು ಹಲವು ಕಡೆ ನಿಂತಿದ್ದು, ಶಿರಸಿಯ ಶಾಲ್ಮಲಾ ನದಿ ಕೂಡ ಒಣಗುತ್ತಿದೆ. ತಾಲ್ಲೂಕಿನಾದ್ಯಂತ ಕೆರೆ–ಕಟ್ಟೆಗಳು ಒಣಗುತ್ತಿವೆ. ಬರದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಲ್ಲಿ ಪೂರ್ವ ಸಿದ್ಧತೆಯ ಕೊರತೆ ಕಾಣುತ್ತಿದೆ. ಸರ್ಕಾರ ಈ ನಿಟ್ಟಿನಲ್ಲಿ ವಿಶೇಷ ಪ್ಯಾಕೇಜ್‌ ಮಾಡಬೇಕಾಗಿತ್ತು ಎಂದರು.

ADVERTISEMENT

ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ನೀರಿನ ಕೊರತೆ ತೀವ್ರವಾಗಿ ಉಂಟಾಗುವ ಸಾಧ್ಯತೆ ಕಂಡುಬರುತ್ತಿದೆ. ಈ ಕಾರಣದಿಂದ ಹಾರೆಕೊಪ್ಪ ಮತ್ತು ಹಣಜೀರಿ ಗ್ರಾಮಗಳ ಮಧ್ಯೆ ಇರುವ ಕೆರೆಯನ್ನು ಹೂಳೆತ್ತುವ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿದ್ದೇವೆ.  ನೀರಿಂಗಿಸುವ ಮತ್ತು ನೀರಿನ ಕುರಿತು ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.

ಅಂದು ಕಾರ್ಮಿಕ ದಿನ ಆಗಿರುವ ಕಾರಣದಿಂದ ಅಂದೇ ಕೆರೆಯ ಹೂಳೆತ್ತುವ ಕಾರ್ಯ ನಡೆಸಲಾಗುತ್ತಿದೆ. ಜೆಡಿಎಸ್ ಪಕ್ಷ ಲೋಹಿಯಾ ಅವರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟ ಪಕ್ಷವಾಗಿದ್ದು, ರೈತರು, ಕಾರ್ಮಿಕರು, ಕೂಲಿಕಾರರ ಪರವಾಗಿರುವ ಪಕ್ಷ ನಮ್ಮದು ಎಂದರು.ಜಿಲ್ಲಾಡಳಿತ, ತಾಲ್ಲೂಕು ಆಡಳಿತ,ಶಾಸನ ಸಭೆಯ ಸದಸ್ಯರ ನಿರ್ಲಕ್ಷ್ಯಕ್ಕೆ ಬೇಸತ್ತು ಈ ಕೆಲಸವನ್ನು ನಾವು ಮಾಡುತ್ತಿದ್ದು, ಇದು ಎಲ್ಲರ ಕಣ್ತೆರೆಸುವ ಕಾರ್ಯವಾಗಿದೆ. ಯಾವುದೇ ರಾಜಕೀಯ ಉದ್ದೇಶದಿಂದ ಈ ಕೆಲಸಕ್ಕೆ ಕೈಹಾಕಿಲ್ಲ. ಆದರೆ ರಾಜಕೀಯ ಪಕ್ಷವೊಂದು ಶ್ರಮದಾನದ ಮೂಲಕ ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈಹಾಕಿದ ಉದಾಹರಣೆ ಇದೇ ಮೊದಲಾಗಿರಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಹೆಗ್ಗಾರಕೈ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ.ನಾಯ್ಕ ಕಡಕೇರಿ, ಶಿರಸಿ ನಗರ ಘಟಕದ ಅಧ್ಯಕ್ಷ ಜುಬೇರ ಜುಕಾಕೋ,ಪ್ರಧಾನ ಕಾರ್ಯದರ್ಶಿ ಶೇಖರ ಪೂಜಾರಿ, ಪಕ್ಷದ ಪ್ರಮುಖರಾದ ಕೆ.ಬಿ.ನಾಯ್ಕ, ಪರಮೇಶ್ವರ ಮಡಿವಾಳ, ಎಂ.ಎಸ್.ನಾಯ್ಕ, ವಿಜಯಕುಮಾರ್, ಜುಲ್ಪೀಕರ ಗುರ್ಕಾರ, ಮಲ್ಲಿಕಾರ್ಜುನ ಗೌಡ, ಎನ್‌.ಟಿ.ನಾಯ್ಕ, ಭೂತಪ್ಪ ಹಣಜೀರಿ ಮತ್ತು ಮಂಜಪ್ಪ ಹಣಜೀರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.