ADVERTISEMENT

ಗುರಿ ಮೀರಿ ಮದ್ಯ ಮಾರಾಟ!

ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟ ಮಾರಾಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:10 IST
Last Updated 23 ಏಪ್ರಿಲ್ 2018, 10:10 IST

ಕಾರವಾರ: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2017– 18ನೇ ಸಾಲಿನ ಜನವರಿಯಿಂದ ಮಾರ್ಚ್‌ವರೆಗೆ ಅಬಕಾರಿ ಇಲಾಖೆ ಗುರಿ ಮೀರಿ ಮದ್ಯದ ಸಂಗ್ರಹಣೆ ಹಾಗೂ ಮಾರಾಟ ನಡೆದಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಹೌದು, ವಿಧಾನಸಭೆ ಚುನಾವಣೆಯಲ್ಲಿ ಆಮಿಷಗಳನ್ನು ಒಡ್ಡಲು ಅಭ್ಯರ್ಥಿಗಳು ಮದ್ಯವನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಇಲಾಖೆ ಹಾಗೂ ಚುನಾವಣೆ ಆಯೋಗ ಅವುಗಳ ಸಾಗಾಟದ ಮೇಲೆ ಹದ್ದಿನ ಕಣ್ಣಿಟ್ಟಿದೆ. ಗೋವಾ ರಾಜ್ಯದಿಂದ ಕಡಿಮೆ ಬೆಲೆಯಲ್ಲಿ ಸಿಗುವ ಮದ್ಯವನ್ನು ಇಲ್ಲಿಗೆ ತಂದು, ಮತದಾರರನ್ನು ಸೆಳೆಯಲು ಕೂಡ ಅದನ್ನು ಬಳಕೆ ಮಾಡಿಕೊಳ್ಳಲೂಬಹುದು ಎಂದು ಗಡಿಯಲ್ಲಿ ಚೆಕ್‌ಪೋಸ್ಟ್‌ಗಳು ದಿನನಿತ್ಯ ಕಾರ್ಯನಿರ್ವಹಿಸುತ್ತಿವೆ. ಆದರೆ, ಅಬಕಾರಿ ಇಲಾಖೆಯ ಈ ವರದಿಯ ಪ್ರಕಾರ ಮೂರು ತಿಂಗಳ ಹಿಂದೆಯೇ ಸಾಕಷ್ಟು ಮದ್ಯ ಖರೀದಿ ಮಾಡಿ ಸಂಗ್ರಹಿಸಿಟ್ಟುಕೊಳ್ಳಲಾಗಿದೆಯೇ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಶೇ 10ರಷ್ಟು ಮಾರಾಟ ಹೆಚ್ಚಳ: ಇಲಾಖೆ ನೀಡಿದ ಗುರಿಯ ಅನ್ವಯ 2015– 16ರ ಜನವರಿಯಲ್ಲಿ ಶೇ 92, ಫೆಬ್ರುವರಿಯಲ್ಲಿ ಶೇ 91 ಹಾಗೂ ಮಾರ್ಚ್‌ನಲ್ಲಿ ಶೇ 104ರಷ್ಟು ಮಾರಾಟವಾಗಿವೆ. 2016– 17ರ ಜನವರಿಯಲ್ಲಿ ಶೇ 91, ಫೆಬ್ರುವರಿಯಲ್ಲಿ ಶೇ 88, ಮಾರ್ಚ್‌ನಲ್ಲಿ ಶೇ 90 ಗುರಿ ಸಾಧಿಸಲಾಗಿದೆ. ಆದರೆ 2017-– 18ರ ಪ್ರಸಕ್ತ ಸಾಲಿನ ಜನವರಿಯಲ್ಲಿ ಶೇ 101.43, ಫೆಬ್ರುವರಿಯಲ್ಲಿ ಶೇ 105.15 ಹಾಗೂ ಮಾರ್ಚ್‌ನಲ್ಲಿ ಶೇ 104.43ರಷ್ಟು ಮದ್ಯ ಮಾರಾಟವಾಗಿದೆ. ಅಂದರೆ, ಇಲಾಖೆಯ ಗುರಿ ಮೀರಿ ಸಾಧನೆಯಾಗಿದೆ. ಈ ಹಿಂದಿನ ವರ್ಷಗಳಿಗೆ ಹೊಲಿಸಿದರೆ ಶೇ 8 ರಿಂದ 10ರಷ್ಟು ಹೆಚ್ಚು ಮದ್ಯ ಮಾರಾಟವಾಗಿದೆ.

ADVERTISEMENT

12 ಬಾರ್ ಹಾಗೂ ವೈನ್‌ಶಾಪ್‌ಗಳಿಗೆ ಬೀಗ: ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಮದ್ಯ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕಿನ 12 ಬಾರ್ ಹಾಗೂ ಮದ್ಯದ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಅವರ ಪರವಾನಗಿಯನ್ನು ಅಮಾನತ್ತಿನಲ್ಲಿಡಲಾಗಿದೆ. ಅಲ್ಲದೆ, ಸುಮಾರು 25 ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ

– ದೇವರಾಜ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.