ADVERTISEMENT

ಚಂದಾವರದಲ್ಲಿ ಮತ್ತೆ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 11:16 IST
Last Updated 7 ಡಿಸೆಂಬರ್ 2017, 11:16 IST

ಹೊನ್ನಾವರ: (ಉತ್ತರ ಕನ್ನಡ): ಈದ್ ಮಿಲಾದ್ ಮುನ್ನಾ ದಿನದಂದು ಹಿಂದೂ–ಮುಸ್ಲಿಂ ಘರ್ಷಣೆಯಿಂದ ಉದ್ವಿಗ್ನಗೊಂಡಿದ್ದ, ತಾಲ್ಲೂಕಿನ ಚಂದಾವರ ಪಟ್ಟಣದಲ್ಲಿ ಬುಧವಾರ ರಾತ್ರಿ ಮತ್ತೆ ಮಾರಾಮಾರಿ ನಡೆದಿದೆ.

ಇಲ್ಲಿನ ಗುಡ್‌ಲಕ್‌ ಹೋಟೆಲ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಆರಂಭವಾದ ಗಲಾಟೆ, ರಾತ್ರಿ ಹಿಂಸಾರೂಪಕ್ಕೆ ತಿರುಗಿತು. ಕಬ್ಬಿಣದ ರಾಡ್‌ ಹಾಗೂ ಬಾಟಲಿಗಳನ್ನು ಹಿಡಿದಿದ್ದ ಗುಂಪೊಂದು ಆ ಮಾರ್ಗವಾಗಿ ಹೋಗುತ್ತಿದ್ದ ಜನರಿಗೆ ಮನಬಂದಂತೆ ಥಳಿಸಿದೆ.

ಹಲವರು ಗಾಯಗೊಂಡಿದ್ದು, ವಾಹನಗಳು ಜಖಂಗೊಂಡಿವೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

‘ಮುಖ್ಯಮಂತ್ರಿ ಭೇಟಿಯ ಹಿನ್ನೆಲೆಯಲ್ಲಿ ಬಂದೋಬಸ್ತಿಗೆ ಹೆಚ್ಚಿನ ಪೊಲೀಸರು ಬೇರೆಡೆಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಠಾಣೆಯಲ್ಲಿದ್ದ ಮೂರ್ನಾಲ್ಕು ಪೊಲೀಸರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಎಲ್ಲಿ ಏನಾಗುತ್ತಿದೆ ಎಂಬುದು ತಿಳಿಯಲಿಲ್ಲ. ನಂತರ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.