ADVERTISEMENT

ಜೇನುರಟ್ಟಿನ ತುಪ್ಪ ಸವಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 6:47 IST
Last Updated 21 ಏಪ್ರಿಲ್ 2014, 6:47 IST

ಶಿರಸಿ: ಜೇನು ಸಂತತಿ ಸಂರಕ್ಷಿಸುವ, ಯುವ ಜನರಲ್ಲಿ ಜೇನು ಕೃಷಿ ಆಸಕ್ತಿ ಮೂಡಿಸುವ ಆಶಯದೊಂದಿಗೆ ಇಲ್ಲಿನ ಪರಿಸರ ಸಂರಕ್ಷಣಾ ಕೇಂದ್ರ ನಡೆಸುತ್ತಿರುವ ಸರಣಿ ಕಾರ್ಯಕ್ರಮದ ಭಾಗವಾಗಿ ತಾಲ್ಲೂಕಿನ ಹೊಳೆ ಕೆಶಿನ್ಮನೆಯಲ್ಲಿ ಜೇನು ಹಬ್ಬ ನಡೆಯಿತು.

ಹತ್ತಾರು ಮಕ್ಕಳು, ಯುವಕರು, ಮಹಿಳೆಯರು ಜೇನು ಸಾಕಣೆಯ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಅಡಿಕೆ ತೋಟದ ಸಮೀಪದ ಬೆಟ್ಟದಲ್ಲಿ ಅಲ್ಲಲ್ಲಿ ಇಟ್ಟಿರುವ ಜೇನು ಪೆಟ್ಟಿಗೆಯ ಬಳಿ ಗುಂಪುಗುಂಪಾಗಿ ನಿಂತು ವಿವರಣೆ ಪಡೆದರು. ತಜ್ಞರು ಮೂರು ಪ್ರತ್ಯೇಕ ಗುಂಪಿನಲ್ಲಿ ಮಾಹಿತಿ ನೀಡಿದರು. ಮಕ್ಕಳು ಜೇನು ಹುಳಗಳನ್ನು ಕೈಯಲ್ಲಿ ಹಿಡಿದು ಸಂಭ್ರಮಿಸಿದರು. ಜೇನುರಟ್ಟಿನಲ್ಲಿದ್ದ ಪರಿಶುದ್ಧ ಜೇನುತುಪ್ಪ ಸವಿದ ಮಕ್ಕಳು ಬಾಯಿ ಚಪ್ಪರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪರಿಸರ ಸಂರಕ್ಷಣಾ ಕೇಂದ್ರದ ಪಾಂಡುರಂಗ ಹೆಗಡೆ, ‘ಪರಾಗಸ್ಪರ್ಶ, ಪರಿಸರ ಸಂರಕ್ಷಣೆಯಲ್ಲಿ ಜೇನಿನ ಕೊಡುಗೆ ಮಹತ್ವದ್ದಾಗಿದೆ. ಜೇನು ಸಂತತಿ ಉಳಿವಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 20 ವರ್ಷಗಳಿಂದ ಜೇನು ಹಬ್ಬ ಆಚರಿಸಲಾಗುತ್ತಿದೆ’ ಎಂದರು.

‘ಜೇನು ಹಬ್ಬದಿಂದ ಮಕ್ಕಳಲ್ಲಿ ಜೇನಿನ ಬಗೆಗೆ ಆಸಕ್ತಿ ಮೂಡಿದೆ. ಜೇನು ಹಬ್ಬದಿಂದ ಪ್ರೇರಿತರಾದ ಅನೇಕ ಯುವಕರು ಜೇನು ಕೃಷಿಯಲ್ಲಿ ತೊಡಗಿದ್ದಾರೆ’ ಎಂದು ಅವರು ಅನುಭವ ಹೇಳಿದರು.

ಜೇನು ಕೃಷಿಕರಾದ ಬಾಲಚಂದ್ರ ಸಾಲ್ಕಣಿ, ಆರ್‌.ಪಿ.ಹೆಗಡೆ ಗೋರ್ನಮನೆ, ಸತ್ಯನಾರಾಯಣ ಮಾಹಿತಿ ನೀಡಿದರು. ಹುಲೇಕಲ್ ವಲಯ ಅರಣ್ಯಾಧಿಕಾರಿ ಮುನಿತಿಮ್ಮ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವೃತ್ತಿಯಲ್ಲಿ ಉದ್ಯೋಗಿಯಾಗಿ ಪ್ರವೃತ್ತಿಯಲ್ಲಿ ಜೇನು ಸಾಕಣೆ ಮಾಡುತ್ತಿರುವ ಹೊಳೆ ಕೆಶಿನ್ಮನೆಯ ಕೃಷ್ಣಮೂರ್ತಿ ಹೆಗಡೆ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.