ADVERTISEMENT

ಟಿಎಸ್‌ಎಸ್‌ನಲ್ಲಿ ಜನೌಷಧ ಕೇಂದ್ರ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 5:19 IST
Last Updated 10 ಸೆಪ್ಟೆಂಬರ್ 2017, 5:19 IST
ಶಿರಸಿಯ ಟಿಎಸ್‌ಎಸ್ ಸೂಪರ್ ಮಾರ್ಕೆಟ್ ಆವರಣದಲ್ಲಿ ಪ್ರಾರಂಭವಾಗಿರುವ ಜನೌಷಧ ಕೇಂದ್ರವನ್ನು ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ ಶನಿವಾರ ಉದ್ಘಾಟಿಸಿದರು
ಶಿರಸಿಯ ಟಿಎಸ್‌ಎಸ್ ಸೂಪರ್ ಮಾರ್ಕೆಟ್ ಆವರಣದಲ್ಲಿ ಪ್ರಾರಂಭವಾಗಿರುವ ಜನೌಷಧ ಕೇಂದ್ರವನ್ನು ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ ಶನಿವಾರ ಉದ್ಘಾಟಿಸಿದರು   

ಶಿರಸಿ: ಅತಿ ಕಡಿಮೆ ದರದಲ್ಲಿ ಔಷಧ ಲಭ್ಯವಾಗುವ ಕೇಂದ್ರ ಸರ್ಕಾರದ ಜನೌಷಧ ಕೇಂದ್ರವು ಇಲ್ಲಿನ ಟಿಎಸ್‌ಎಸ್ ಸೂಪರ್ ಮಾರ್ಕೆಟ್‌ನಲ್ಲಿ ಶನಿವಾರದಿಂದ ಕಾರ್ಯಾರಂಭ ಮಾಡಿದೆ. ಈ ಮೂಲಕ ಟಿಎಸ್ಎಸ್ ಸಹಕಾರಿ ಕ್ಷೇತ್ರದಲ್ಲಿ ಮತ್ತೊಂದು ಹೆಜ್ಜೆಯಿಟ್ಟಿದೆ. ಟಿಎಸ್‌ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಈ ಕೇಂದ್ರದ ಉದ್ಘಾಟನೆ ನೆರವೇರಿಸಿದರು.

‘ರಕ್ತದೊತ್ತಡ, ಮಧುಮೇಹ ಹಾಗೂ ಇನ್ನಿತರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ವರ್ಷಪೂರ್ತಿ ಔಷಧ- ಸೇವಿಸುವವರಿಗೆ ಆರೋಗ್ಯದ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ದೇಶದಾದ್ಯಂತ ಜನೌಷಧ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ಭಾಗದ ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಪರ್ ಮಾರ್ಕೆಟ್‌ನಲ್ಲಿ ಈ ಔಷಧ ಕೇಂದ್ರ ತೆರೆಯಲಾಗಿದೆ. ಜೆನೆರಿಕ್ ಔಷಧಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕಲಿವೆ’ ಎಂದರು. 

‘ದುಬಾರಿ ಔಷಧದಲ್ಲಿ ಮಾತ್ರ ಉತ್ತಮ ಗುಣವಿದೆ ಎಂಬ ತಪ್ಪು ಭಾವನೆಯನ್ನು ಹೋಗಲಾಡಿಸಿ ಜೆನೆರಿಕ್ ಔಷಧಗಳು ಸಹ ಉತ್ತಮವಾಗಿ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಬೇಕಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಬಡವರ ಅನುಕೂಲಕ್ಕಾಗಿ ವೈದ್ಯರು ಜೆನೆರಿಕ್ ಹೆಸರು ಬರೆಯುವುದು ಕಡ್ಡಾಯವಾಗಿದೆ’ ಎಂದು ತಿಳಿಸಿದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಸಂಘದ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಹಾಜರಿದ್ದರು.

ADVERTISEMENT

* * 

ಜೆನೆರಿಕ್ ಔಷಧ ಸಹ ಕಾಯಿಲೆಗಳನ್ನು ಗುಣಪಡಿಸುತ್ತವೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಬೇಕಾಗಿದೆ. ವೈದ್ಯರು ಜೆನೆರಿಕ್ ಹೆಸರು ಬರೆಯುವುದು ಕಡ್ಡಾಯ
ಶಾಂತಾರಾಮ ಹೆಗಡೆ
ಟಿಎಸ್‌ಎಸ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.