ADVERTISEMENT

ತ್ರಿವಳಿ ತಲಾಖ್ ಮಸೂದೆ ವಿರುದ್ಧ ಪ್ರತಿಭಟನೆ

ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮಹಿಳೆಯರ ಮನವಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:17 IST
Last Updated 23 ಮಾರ್ಚ್ 2018, 11:17 IST

ಭಟ್ಕಳ: ಲೋಕಸಭೆಯಲ್ಲಿ ಮಂಡನೆಯಾಗಿರುವ ತ್ರಿವಳಿ ತಲಾಖ್ ಮಸೂದೆಯ ವಿರುದ್ಧ ಪಟ್ಟಣದಲ್ಲಿ ಸಾವಿರಾರು ಮುಸ್ಲಿಮ್ ಮಹಿಳೆಯರು ಬುಧವಾರ ಸಂಜೆ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಂಯೋಜಕಿ ಡಾ.ಆಸೀಫಾ ನಿಸಾರ್, ‘ಸರ್ಕಾರ ಮುಸ್ಲಿಮರ ವೈಯಕ್ತಿಕ ಕಾನೂನಿನಲ್ಲಿ ಮೂಗು ತೂರಿಸುತ್ತಿರುವುದು ಸರಿಯಲ್ಲ. ನಮಗೆ ಷರಿಯತ್ ಕಾನೂನಿನಲ್ಲಿ ರಕ್ಷಣೆಯಿದೆ. ಸಂವಿಧಾನಕ್ಕೆ ವಿರುದ್ಧವಾಗಿರುವ ಇಂತಹ ಕಾನೂನಿಂದ ಮುಸ್ಲಿಮ್ ಮಹಿಳೆಯರಿಗೆ ಯಾವುದೇ ಲಾಭವಾಗುವುದಿಲ್ಲ. ಈ ಮಸೂದೆಯಿಂದ ತೊಂದರೆಗಳೇ ಹೆಚ್ಚಾಗುತ್ತಿದ್ದು ಕೂಡಲೇ ರದ್ದುಗೊಳಿಸಬೇಕು’ ಎಂದು ಅವರು ಆಗ್ರಹಿಸಿದರು.

ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡುವುದಕ್ಕೂ ಪೂರ್ವದಲ್ಲಿ ಯಾವುದೇ ಮುಸ್ಲಿಮ್ ವಿದ್ವಾಂಸರೊಂದಿಗೆ ಚರ್ಚಿಸಿಲ್ಲ. ಮನಸೋ ಇಚ್ಛೆ ಕಾನೂನು ರೂಪಿಸಲಾಗಿದೆ. ಸುಪ್ರೀಂಕೋರ್ಟ್ ಸಹ ಈ ಕಾನೂನು ಜಾರಿಗೆ ತರುವ ಅವಶ್ಯಕತೆಯಿಲ್ಲ ಎಂಬ ನಿರ್ಣಯವನ್ನು ನೀಡಿದ್ದರೂ ಇದನ್ನು ಲೋಕಸಭೆಯಲ್ಲಿ ಮಂಡನೆ ಮಾಡಿರುವುದು ಸಂವಿಧಾನ ಬಾಹಿರವಾಗಿದೆ ಎಂದು ಆರೋಪಿಸಿದರು.

ADVERTISEMENT

ಇದು ಮಹಿಳೆಯರು ಮತ್ತು ಮಕ್ಕಳ ವಿರುದ್ಧವಾಗಿದೆ. ಮುಸ್ಲಿಮರ ಭಾವನೆಗಳೊಂದಿಗೆ ಕೇಂದ್ರ ಸರ್ಕಾರ ಆಟ ಆಡುತ್ತಿದ್ದು ಯಾವುದೇ ರೀತಿಯ ಧಕ್ಕೆ ಬಾರದಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.

ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯೆ ತಸ್ನೀಮ್ ಶಾಹಜಹಾನ್ ಮಾತನಾಡಿದರು. ಝರೀನಾ ಕೋಲಾ ಮನವಿ ಪತ್ರ ಓದಿದರು. ಝೀನತ್ ರುಕ್ನುದ್ದೀನ್, ನಸೀಮಾ, ಫರ್ಹತ್, ಗುಲ್ ಅಫ್ರೋಝ್, ಸಬಿಹಾ ಫಾರೂಖ್, ನಾಝಿಮಾ, ತಬಸ್ಸುಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.