ADVERTISEMENT

ದಡಾರ, ರುಬೆಲ್ಲಾ ಲಸಿಕಾ ಅಭಿಯಾನ

ದೇಶದಾದ್ಯಂತ ಏಕಕಾಲಕ್ಕೆ ಕಾರ್ಯಾರಂಭ; ಫೆ. 28ರ ವರೆಗೆ ಜಿಲ್ಲೆಯಲ್ಲಿ ಜನಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 6:44 IST
Last Updated 6 ಫೆಬ್ರುವರಿ 2017, 6:44 IST
-ಎಸ್‌.ಎಸ್‌.ನಕುಲ್‌, ಜಿಲ್ಲಾಧಿಕಾರಿ
-ಎಸ್‌.ಎಸ್‌.ನಕುಲ್‌, ಜಿಲ್ಲಾಧಿಕಾರಿ   

ಕಾರವಾರ: ದಡಾರ ಹಾಗೂ ರುಬೆಲ್ಲಾ ವೈರಸ್ ಸೋಂಕಿನಿಂದ ರಕ್ಷಿಸಲು 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವ ಅಭಿಯಾನ ಇದೇ 7ರಿಂದ ಆರಂಭವಾಗಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯು ಸಕಲ ರೀತಿಯಲ್ಲಿ ಸನ್ನದ್ಧುಗೊಂಡಿದೆ.

ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್ ಅವರು ದಡಾರ ಹಾಗೂ ರುಬೆಲ್ಲಾ ಲಸಿಕಾ ಅಭಿಯಾನದ ಪೂರ್ವಭಾವಿ ಸಭೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ಫೆಬ್ರುವರಿ 7 ರಿಂದ 28ರವರೆಗೆ ದೇಶದಾದ್ಯಂತ ಅಭಿಯಾನ ಏಕಕಾಲದಲ್ಲಿ ನಡೆಯಲಿದೆ.

ಒಟ್ಟು ನಾಲ್ಕು ವಾರಗಳ ಅವಧಿಯಲ್ಲಿ ಮೊದಲ ವಾರ ಶಾಲೆ ಹಾಗೂ ಅಂಗನವಾಡಿಗಳನ್ನು ಕೇಂದ್ರೀಕರಿಸಬೇಕು. ಇನ್ನುಳಿದ ಅವಧಿಯಲ್ಲಿ ಬಿಟ್ಟು ಹೋದ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಅಭಿಯಾನದ ಅವಧಿಯಲ್ಲಿ ಲಸಿಕೆ ಹಾಕಬೇಕು ಎಂದು ಅವರು ಸೂಚಿಸಿದ್ದಾರೆ.

3.13 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ: ಜಿಲ್ಲೆಯಲ್ಲಿ ಒಟ್ಟು 3,13,355 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಒಟ್ಟು 2,033 ಶಾಲೆಗಳನ್ನು ಗುರುತಿಸಲಾಗಿದ್ದು, 599 ಲಸಿಕೆ ನೀಡುವ ತಜ್ಞರು ಅಭಿಯಾನದಲ್ಲಿ ಭಾಗವಹಿಸುವರು. ಇವರಿಗೆ ನೆರವು ನೀಡಲು 3,988 ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, 262 ಮೇಲುಸ್ತುವಾರಿ ನೋಡಿಕೊಳ್ಳುವವರನ್ನು ನೇಮಕ ಮಾಡಲಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಅಶೋಕಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಡಾರ ಮತ್ತು ರುಬೆಲ್ಲಾ ಕಾಯಿಲೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಲಸಿಕಾ ಅಭಿಯಾನ ಆಯೋಜಿಸಲು ಸೂಕ್ತವಾದ ಸ್ಥಳ ಮತ್ತು ಸೌಲಭ್ಯವನ್ನು ವ್ಯವಸ್ಥೆ ಮಾಡಬೇಕು. ಶಾಲೆಯಲ್ಲಿ ಅಭಿಯಾನದ ಅವಧಿಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಲಸಿಕೆ ಪಡೆದ ನಂತರ ತಾಳೆ ಶೀಟ್‌ನಲ್ಲಿ ಮತ್ತು ಮಕ್ಕಳ ಹೆಬ್ಬೆರಳ ಮೇಲೆ ಗುರುತು ಹಾಕಬೇಕು. ಒಂದು ವೇಳೆ ಯಾವುದಾದರೂ ಅಡ್ಡ ಪರಿಣಾಮ ಕಂಡು ಬಂದರೆ ಅಗತ್ಯ ಚಿಕಿತ್ಸೆ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್‌.ನಕುಲ್‌ ಸೂಚಿಸಿದ್ದಾರೆ.

ಮಾರಣಾಂತಿಕ ಕಾಯಿಲೆ
ದಡಾರ ಮಾರಣಾಂತಿಕ ಕಾಯಿಲೆಯಾಗಿದ್ದು, ವಿಪರೀತ ಕೆಮ್ಮು, ನೆಗಡಿ, ಕೆಂಗಣ್ಣು ದಡಾರದ ಮುಖ್ಯ ಲಕ್ಷಣಗಳು. ಇದರಿಂದಾಗಿ ಮಕ್ಕಳು ನ್ಯುಮೋನಿಯಾ, ಅತಿಸಾರ ಭೇದಿ, ಮಿದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ರುಬೆಲ್ಲಾ ವೈರಸ್ ಗರ್ಭಿಣಿ ಸ್ತ್ರೀಯರಲ್ಲಿ ಗರ್ಭಪಾತಕ್ಕೆ ಕಾರಣವಾಗಬಹುದು. ಹುಟ್ಟುವ ಮಕ್ಕಳಲ್ಲಿ ಕಣ್ಣಿನ ಪೊರೆ, ಮಿದುಳು ಜ್ವರ, ಮಾನಸಿಕ ಅಸ್ವಸ್ಥತೆ, ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಡಿಎಚ್‌ಒ ಡಾ. ಅಶೋಕಕುಮಾರ್‌ ತಿಳಿಸಿದ್ದಾರೆ.

ADVERTISEMENT

*
ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆಯನ್ನು ಹಾಕಿಸುವ ಮೂಲಕ ಮಾರಕ ರೋಗದಿಂದ ಮಕ್ಕಳನ್ನು ರಕ್ಷಿಸಲು ಗಮನ ನೀಡಬೇಕು.
-ಎಸ್‌.ಎಸ್‌.ನಕುಲ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.