ADVERTISEMENT

ನಗರೋತ್ಥಾನ ಕಾಮಗಾರಿ:ಸ್ಥಳ ಪರಿಶೀಲನೆ

ಜಾಲಿ ಪ.ಪಂ.ಗೆ ₹ 5 ಕೋಟಿ ಮಂಜೂರು: ಸಿಮೆಂಟ್‌ ರಸ್ತೆ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 5:33 IST
Last Updated 30 ಜನವರಿ 2017, 5:33 IST
ಭಟ್ಕಳ: ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದ ಜಾಲಿ ಪಟ್ಟಣ ಪಂಚಾಯ್ತಿಗೆ ನಗರೋತ್ಥಾನ ಯೋಜನೆಯಡಿ ₹ 5 ಕೋಟಿ ಮಂಜೂರಾಗಿದ್ದು ಶಾಸಕ ಮಂಕಾಳ ವೈದ್ಯ ಶನಿವಾರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಚರಿಸಿ ಕಾಮಗಾರಿಗಾಗಿ ಸ್ಥಳ ಪರಿಶೀಲನೆ ನಡೆಸಿದರು.
 
ಕುಡಿಯುವ ನೀರು, ರಸ್ತೆ, ಗಟಾರ, ಒಳಚರಂಡಿ ಹಾಗೂ ಸಮುದಾಯ ಭವನಕ್ಕಾಗಿ ಹಣ ಮಂಜೂರಾಗಿದೆ. ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವೆಂಕಟಾಪುರ ಕಾರ್ಗದ್ದೆ ಮುಂತಾದೆಡೆ ತೆರಳಿದ ಶಾಸಕರು ಸ್ಥಳೀಯ ಜನರಿಂದ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಅವರ ಅಹವಾಲನ್ನು ಆಲಿಸಿದರು. ವೆಂಕಟಾಪುರದಲ್ಲಿ ಇರುವ ಪುರಸಭೆಯ ಒಳಚರಂಡಿ ನೀರು ಶುದ್ಧೀಕರಣ ಘಟಕದ ಪಂಪ್‌ನ್ನು ದುರಸ್ತಿಪಡಿಸಿ ಈ ಭಾಗದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲು ಈ ಭಾಗದ ಜನರು ಆಗ್ರಹಿಸಿದರು.
 
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಂಕಾಳ ವೈದ್ಯ, ಮಂಜೂರಾದ ₹5ಕೋಟಿ ಅನುದಾನದಲ್ಲಿ ಅಗತ್ಯ ಕಾಮಗಾರಿಗಳನ್ನು ಮಾಡಲಾಗುವುದು. ಅಗತ್ಯವಿದ್ದರೆ ಪಟ್ಟಣ ಪಂಚಾಯ್ತಿ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರಲಾಗುವುದು ಎಂದರು. 
 
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅಬ್ದುಲ್ ರಹೀಮ್ ಮಾತನಾಡಿ, ಶಾಸಕರು ಆಸಕ್ತಿ ವಹಿಸಿ ಹೆಚ್ಚಿನ ರೀತಿಯಲ್ಲಿ ಅನುದಾನ ಒದಗಿಸಿದ್ದಾರೆ. ನಗರೋತ್ಥಾನ ಅಲ್ಲದೇ ಇನ್ನೂ ₹ 2 ಕೋಟಿ ಅನುದಾನ ಬಂದಿದೆ.
 
ಜಾಲಿಯ ಸಮಗ್ರ ಅಭಿವೃದ್ದಿ ನಮ್ಮ ಗುರಿಯಾಗಿದೆ ಎಂದರು. ಪಟ್ಟಣ ಪಂಚಾಯ್ತು ಉಪಾಧ್ಯಕ್ಷೆ ಲಕ್ಷ್ಮೀ ಮಾದೇವ ನಾಯ್ಕ, ಮುಖ್ಯಾಧಿಕಾರಿ ವೆಂಕಟೇಶ ನಾವುಡ, ಎಂಜಿನಿಯರ್ ಸದಾನಂದ ಸೇರಿದಂತೆ ಪಟ್ಟಣ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.
 
ಕುಡಿಯುವ ನೀರಿನ ಘಟಕ ದೇಣಿಗೆ
ಗಣರಾಜ್ಯೋತ್ಸವದ ನಿಮಿತ್ತ ಮುರ್ಡೇಶ್ವರದ ಲಯನ್ಸ್ ಕ್ಲಬ್‌ನಿಂದ ಸರ್ಕಾರಿ ಪ್ರೌಢಶಾಲೆ ತೆರ್ನಮಕ್ಕಿಗೆ ₹15 ಸಾವಿರ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು ದೇಣಿಗೆಯಾಗಿ ನೀಡಲಾಯಿತು.
 
ಕಾಯ್ಕಿಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶಾಂತಾ ಮೇರಿ ಲೋಬೋ ನೀರಿನ ಘಟಕವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ವಾದಿರಾಜ ಭಟ್, ಸದಸ್ಯರಾದ ಮೋಹನ ನಾಯ್ಕ, ಎ. ಎನ್ ಶೆಟ್ಟಿ, ಮಂಜುನಾಥ ದೇವಾಡಿಗ, ಜೈನ ಜಟಗೇಶ್ವರ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಹಾಗೂ ಶಿಕ್ಷಕವೃಂದದವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಪ್ರಶಾಂತ ಪಟಗಾರ್ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.