ADVERTISEMENT

‘ನಮ್ಮ ಮನೋಭಾವದಿಂದಲೇ ಕನ್ನಡಕ್ಕೆ ಕುತ್ತು’

​ಪ್ರಜಾವಾಣಿ ವಾರ್ತೆ
Published 1 ಮೇ 2017, 8:15 IST
Last Updated 1 ಮೇ 2017, 8:15 IST

ದಿ.ಗೋಪಾಲಕೃಷ್ಣ ಪಿ. ನಾಯಕ ವೇದಿಕೆ (ತೇರಗಾಂವ್‌, ಹಳಿಯಾಳ):  ‘ಇಂಗ್ಲಿಷ್‍ ಅಥವಾ ಇನ್ನಾವುದೇ ಭಾಷೆಯಿಂದ ಕನ್ನಡಕ್ಕೆ ಕುತ್ತು ಬಂದಿಲ್ಲ. ಆದರೆ ಆ ಸ್ಥಿತಿಗೆ ನಮ್ಮ ಮನೋಭಾವವೇ ಕಾರಣ’ ಎಂದು ಗೌರೀಶ ನಾಯಕ ಶಿರಗುಂಜಿ ಹೇಳಿದರು.

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ನಡೆದ ‘ಐಸಿಯುನಲ್ಲಿ ಕನ್ನಡ ಶಾಲೆಗಳು’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕನ್ನಡ ಶಾಲೆಗಳ ಅಭಿವೃದ್ಧಿಗೆ ಸರ್ವ ಶಿಕ್ಷಣ ಅಭಿಯಾನ, ಚಿನ್ನರ ಅಂಗಳ, ಮರಳಿ ಬಾ ಶಾಲೆಗೆ, ಒಂದನೇ ತರಗತಿಯಿಂದ ಇಂಗ್ಲಿಷ್‌ ಕಲಿಕೆ ಇಂಥ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಬಿಸಿಯೂಟ, ಸಮವಸ್ತ್ರದಂಥ ಅನೇಕ ಸೌಕರ್ಯವನ್ನು ಕಲ್ಪಿಸಿದ್ದರೂ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಅಲ್ಲದೇ ಇರುವ ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ. ನಮ್ಮ ಕನ್ನಡ ಶಾಲೆಗಳು ತೀವ್ರ ನಿಗಾ ಘಟಕದಲ್ಲಿರುವ ಬಗ್ಗೆ ಚಿಂತನೆ ಮಾಡಬೇಕಾದುದು ಸಕಾಲಿಕವಾಗಿದೆ’ ಎಂದು ಹೇಳಿದರು.

‘ವಿನಾಶದಂಚಿನಲ್ಲಿರುವ ಅನೇಕ ಭಾಷೆಗಳಲ್ಲಿ ಕನ್ನಡವೂ ಒಂದು. ಮಾತೃಭಾಷೆಯೇ ಹೃದಯ ಭಾಷೆಯಾಗಿದ್ದು, ಅದರಲ್ಲಿ ಕಲಿತರೇ ಮಾತ್ರ ಹೆಚ್ಚು ಅರ್ಥ ಮಾಡಿಕೊಳ್ಳಲು ಸಾಧ್ಯ. ಇಂಗ್ಲಿಷ್‌ ಅನ್ನ ನೀಡುವ ಭಾಷೆ ಎಂದು ತಿಳಿದು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಮುಂದಾಗುತ್ತಿದ್ದು, ಇದುವೇ ಕನ್ನಡ ಶಾಲೆಗಳು ಸೊರಗಲು ಕಾರಣವಾಗಿದೆ’ ಎಂದರು.

ಕಸಾಪ ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಶ್ರೀಧರ ಉಪ್ಪಿನಂಗಡಿ ಮಾತನಾಡಿ, ‘ಶಾಲೆ ಅಂಗಳದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗಿಯಾಗದೇ ಇರುವುದು ದುರ್ದೈವದ ಸಂಗತಿ. ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಜಿಲ್ಲೆಯಲ್ಲಿ 3,500 ಮಕ್ಕಳು ಖಾಸಗಿ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಅವರ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಇದು ಸಹ ಕನ್ನಡ ಶಾಲೆಗಳ ಅಳವಿಗೆ ಕಾರಣವಾಗಿದೆ.

ಜನಪ್ರತಿನಿಧಿಗಳು, ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಹಾಕುವಂತೆ ಆಗಬೇಕು. ಆಗ ಮಾತ್ರ ನಮ್ಮ ಕನ್ನಡ ಶಾಲೆಗಳ ಉನ್ನತಿ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಕಸಾಪ ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಮಾತನಾಡಿ, ‘ಖಾಸಗಿ ಶಾಲೆಗಳನ್ನು ರಾಷ್ಟ್ರೀಕರಣ ಗೊಳಿಸಬೇಕು. ಅಲ್ಲದೇ ಈ ಶಾಲೆಗಳನ್ನು ಸರ್ಕಾರವೇ ತನ್ನ ಸುಪರ್ದಿಗೆ ಪಡೆದು ನಡೆಸಬೇಕು. ತರಗತಿಗೊಂದರಂತೆ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಕೊರತೆ ಇರುವ ಕಡೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷ್ಣಮೂರ್ತಿ ಹೆಬ್ಬಾರ, ಇಂದು ಶಿಕ್ಷಿತರೇ ಬಹಳಷ್ಟು ಶೋಷಿತರಾಗುತ್ತಿದ್ದಾರೆ. ಶಿಕ್ಷಣವು ಜೀವನೋಪಾಯ ಕಲಿಸುತ್ತದೆ. ಐಸಿಯುನಲ್ಲಿ ಕನ್ನಡ ಶಾಲೆಗಳು ಯಾವತ್ತೂ ಉಳಿಯುವುದಿಲ್ಲ. ಕನ್ನಡ ಭಾಷೆ ಕಟ್ಟಿ, ಬೆಳೆಸಲು ಎಲ್ಲರೂ ಒಟ್ಟಾಗಿ ದನಿಗೂಡಿಸಬೇಕು’ ಎಂದು ಹೇಳಿದರು. ಸುಧಾ ಎಸ್‌.ಸಾಳುಂಕೆ, ಕಲ್ಪನಾ ಹುದ್ದಾರ, ವಿಠ್ಠಲ ಕೊರ್ವೆಕರ ತಮ್ಮ ಪ್ರತಿಕ್ರಿಯೆ ಹಂಚಿಕೊಂಡರು.

*
ಸಮುದಾಯದ ಸಹಭಾಗಿತ್ವದ ಮೂಲಕ ನಮ್ಮ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕು.
–ಗೌರೀಶ್‌ ಶಿರಗುಂಜಿ,
ಸಾಹಿತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.