ADVERTISEMENT

ನಾಗೇಶ ಹೆಗಡೆಗೆ ಬಿ.ಎಚ್‌.ಶ್ರೀ ಸಾಹಿತ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 5:46 IST
Last Updated 25 ಏಪ್ರಿಲ್ 2017, 5:46 IST

ಶಿರಸಿ: ಹಿರಿಯ ಸಾಹಿತಿ ಬಿ.ಎಚ್‌.ಶ್ರೀಧರರ ಸ್ಮರಣೆಯಲ್ಲಿ ನೀಡುವ ಪ್ರತಿಷ್ಠಿತ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಅವರಿಗೆ ಸೋಮವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾಗೇಶ ಹೆಗಡೆ ಅವರು ‘ಕನ್ನಡದ ಸೊಗಡನ್ನು ಅರ್ಥೈಸಿಕೊಳ್ಳುವ ಜತೆಗೆ ಭಾಷೆಯನ್ನು ದುಡಿಸಿಕೊಂಡು ಆ ಮೂಲಕ ವಿಜ್ಞಾನ, ತಂತ್ರಜ್ಞಾನ, ಪರಿಸರದ ಜ್ಞಾನವನ್ನು ಜನರಿಗೆ ಕೊಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ವಿಜ್ಞಾನ ಬರಹವನ್ನು ರೂಢಿಸಿಕೊಂಡೆ ಎಂದು ಅವರು ತಿಳಿಸಿದರು.

ದೇಶದ ಅನೇಕ ರಾಜ್ಯಗಳ ವಿವಿಧ ಜಿಲ್ಲೆಗಳಿಗಿಂತ ಭಿನ್ನವಾಗಿರುವ ಉತ್ತರ ಕನ್ನಡ ಜಿಲ್ಲೆಯ ಸೆಳೆತ ನನ್ನಲ್ಲಿ ಸದಾ ಇದೆ. ಇದು ಊರಿನ ಜೊತೆಗಿನ ನಂಟನ್ನು ಉಳಿಸಿದೆ. ಕಾಡು, ನದಿ, ಜೀವವೈವಿಧ್ಯ ಹೊಂದಿರುವ ಈ ಜಿಲ್ಲೆಯ ಸಂಪತ್ತಿನ ರಕ್ಷಣೆ ನಮ್ಮ ಜಾಗತಿಕ ಹೊಣೆಗಾರಿಕೆಯಾಗಿದೆ’ ಎಂದು ಅವರು ಹೇಳಿದರು.ಉಳಿದ ಸಾಹಿತ್ಯ ಪ್ರಕಾರಗಳು ತಿರುಚಿಕೊಂಡು ಜನರನ್ನು ಒಡೆದಿವೆ. ಆದರೆ ಶ್ರೇಷ್ಠ ಜಾಗತಿಕ ಕಲ್ಪನೆಯಲ್ಲಿ ವಿಜ್ಞಾನ ಮಾತ್ರ ಇಂದಿಗೂ ಪವಿತ್ರವಾಗಿದೆ. ಈ ಕ್ಷೇತ್ರವನ್ನು ಬರವಣಿಗೆ ಮೂಲಕ ಸೋಸಿದರೆ ಇನ್ನಷ್ಟು ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

‘ಸಹಸ್ರಮಾನದ ತಾತ್ವಿಕ ಚಿಂತನೆಗಳನ್ನು ಸಮಾಜಕ್ಕೆ ಎತ್ತಿ ತೋರುವ ಕೆಲಸವನ್ನು ಬಿ.ಎಚ್. ಶ್ರೀಧರರು ಜ್ಞಾನ ಸಾಹಿತ್ಯದ ಮೂಲಕ ಮಾಡಿದ್ದು, ಇಂದಿನ ಸಾಹಿತ್ಯ ವಲಯ ಇಂತಹ ಜ್ಞಾನ ಸಾಹಿತ್ಯದ ಮಾರ್ಗದಲ್ಲಿ ಸಾಗಬೇಕಾಗಿದೆ’ ಎಂದು ಹೇಳಿದರು.ಧಾರವಾಡ ಸ್ಕೋಪ್ ಸಂಸ್ಥೆ ಮುಖ್ಯಸ್ಥ ಪ್ರಕಾಶ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಗದೀಶ ಭಂಡಾರಿ ಶ್ರೀಧರರ ಗೀತೆ ಹಾಡಿದರು. ವಿಷ್ಣು ಹೆಗಡೆ ಸ್ವಾಗತಿಸಿದರು. ಕಿರಣ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಂ.ಜಿ. ಹೆಗಡೆ ನಾಗೇಶ ಹೆಗಡೆ ಅವರ ಕೃತಿಗಳ ಕುರಿತು ಮಾತನಾಡಿದರು. ಸಿ.ಎನ್. ಹೆಗಡೆ ನಿರೂಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.