ADVERTISEMENT

‘ನೀತಿ ಸಂಹಿತೆ: ರಾಜಕೀಯೇತರ ಕಾರ್ಯಕ್ರಮಗಳಿಗೆ ತಡೆ ಬೇಡ’

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 12:18 IST
Last Updated 3 ಏಪ್ರಿಲ್ 2018, 12:18 IST

ಕಾರವಾರ: ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಸಾಂಸ್ಕೃತಿಕ ಹಾಗೂ ರಾಜಕೀಯೇತರ ಮನರಂಜನಾ ಕಾರ್ಯಕ್ರಮಗಳಿಗೆ ತಡೆ ನೀಡಬಾರದು ಎಂದು ಅಂಕೋಲಾ ತಾಲ್ಲೂಕು ರಂಗಭೂಮಿ ಕಲಾವಿದರ ವೇದಿಕೆಯ ಸದಸ್ಯರು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.‘ಅಂಕೋಲಾ ಹಾಗೂ ಕಾರವಾರ ಭಾಗದಲ್ಲಿ ಏಪ್ರಿಲ್, ಮೇ ತಿಂಗಳಿನಲ್ಲಿ ಪ್ರತಿ ವರ್ಷ ಸಾಕಷ್ಟು ಜಾತ್ರೆಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಹವ್ಯಾಸಿ ಕಲಾವಿದರಿಂದ ಪ್ರತಿ ವರ್ಷದಂತೆ ನಾಟಕ, ಯಕ್ಷಗಾನ, ಜಾನಪದ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನಗಳು ನಡೆಯುತ್ತವೆ. ಆದರೆ, ಇತ್ತೀಚೆಗೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡಿ ಇವುಗಳಿಗೆ ತಡೆ ನೀಡುವ ಪ್ರಸಂಗಗಳು ನಡೆಯುತ್ತಿವೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ಇಂಥ ಕಾರ್ಯಕ್ರಮಗಳಿಂದ ಸಾರ್ವಜನಿಕರ ಮನರಂಜನೆಯ ಜತೆಗೆ ದೇವಸ್ಥಾನಗಳಿಗೂ ಆದಾಯ ಲಭ್ಯವಾಗುತ್ತವೆ. ಬಡ ಕಲಾವಿದರಿಗೆ ಕಲಾ ಸೇವೆಗೆ ಅವಕಾಶ ಸಿಗುವ ಜತೆಗೆ ಅನೇಕರ ಕುಟುಂಬಗಳಿಗೆ ಜೀವನ ನಿರ್ವಹಣೆಯೂ ಕೂಡ ಆಗಿದೆ. ಉಳಿದಂತೆ ರಂಗ ಸಜ್ಜಿಕೆಯವರಿಗೆ, ಸಂಗೀತದವರಿಗೆ, ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಆದಾಯದ ಮೂಲವೂ ಆಗಿದೆ. ಹಲವು ಕುಟುಂಬಗಳು ಕಲಾ ಪ್ರದರ್ಶನಗಳ ಆದಾಯದಿಂದಲೇ ಜೀವನ ಸಾಗಿಸುತ್ತಿವೆ. ಹೀಗಾಗಿ ಇವುಗಳಿಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.ವೇದಿಕೆಯ ಅಧ್ಯಕ್ಷ ಸುಜಿತ್ ನಾಯ್ಕ, ನಾಗೇಂದ್ರ ಅಂಚೇಕರ್ ಹಾಗೂ ಹಲವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT