ADVERTISEMENT

‘ನೀರಿನ ದುಂದು ವೆಚ್ಚ ಕಡಿಮೆ ಮಾಡಿ’

ವಿಶ್ವ ಜಲ ದಿನದ ಕಾರ್ಯಕ್ರಮದಲ್ಲಿ ಸಿವಿಲ್‌ ನ್ಯಾಯಾಧೀಶ ಟಿ.ಗೋವಿಂದಯ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:13 IST
Last Updated 23 ಮಾರ್ಚ್ 2018, 11:13 IST

ಕಾರವಾರ: ‘ನಿಸರ್ಗದತ್ತ ಸಂಪನ್ಮೂಲವಾದ ನೀರನ್ನು ಮಿತವಾಗಿ ಬಳಸಬೇಕು. ಅದರ ದುಂದು ವೆಚ್ಚವನ್ನು ಕಡಿಮೆ ಮಾಡಿ, ಸಂರಕ್ಷಣೆಗೆ ಮುಂದಾಗಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ನಗರಸಭೆ ವತಿಯಿಂದ ನಡೆದ ವಿಶ್ವ ಜಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೀರಿನ ಅವಶ್ಯಕತೆ ಇಲ್ಲದ ವೇಳೆ ಅದು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ಭೂಮಿಯ ಮೇಲಿನ ಪ್ರತಿಯೊಂದು ಜೀವ ಸಂಕುಲಗಳಿಗೂ ಅದರ ಅವಶ್ಯಕತೆ ಇದೆ. ಸಾರ್ವಜನಿಕರಲ್ಲಿ ಸಂರಕ್ಷಣೆಯ ತಿಳಿವಳಿಕೆ ಮೂಡಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು. ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ನೀರು, ಪರಿಸರವನ್ನು ಕೊಡುಗೆಯಾಗಿ ನೀಡಲು ಈಗಲೇ ಜಾಗೃತರಾಗಬೇಕಾದ ಅವಶ್ಯಕತೆ ಇದೆ’ ಎಂದು ಹೇಳಿದರು.

ADVERTISEMENT

ಪೌರಾಯುಕ್ತ ಎಸ್.ಯೋಗೇಶ್ವರ ಮಾತನಾಡಿ, ‘ಮಳೆ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಅಂತರ್ಜಲ ಕೂಡ ಬತ್ತಿ ಹೋಗುತ್ತಿದೆ. ಕುಡಿಯಲು ನೀರಿಲ್ಲದೇ ಜನರು ಪರದಾಡುವ ಸ್ಥಿತಿ ಕೆಲವು ಕಡೆ ಇದೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗದಂತೆ ತಡೆಯಬೇಕಿದ್ದರೆ ಗಿಡಗಳನ್ನು ಹೆಚ್ಚು ಬೆಳೆಸಬೇಕು. ನೀರಿನ ಮೂಲ ಸಂರಕ್ಷಣೆ ಮಾಡಬೇಕು’ ಎಂದರು.

‘ನಗರದಲ್ಲಿ ಅನೇಕ ವರ್ಷಗಳ ಹಿಂದೆ ಬೋರ್‌ವೆಲ್‌ಗಾಗಿ ಮೂರು ಅಡಿ ಗುಂಡಿ ತೆಗೆದರೆ ನೀರು ಬರುತ್ತಿತ್ತು. ಅದರೀಗ ಅದು ಐದೂವರೆಯಿಂದ ಏಳು ಅಡಿಗೆ ಹೋಗಿದೆ. ಇನ್ನು ಮುಂದಿನ ದಿನಗಳಲ್ಲಿ ನೀರಿಗಾಗಿ ಹೊಡೆದಾಟಗಳು ನಡೆದರೂ ಅಚ್ಚರಿ ಪಡಬೇಕಿಲ್ಲ’ ಎಂದರು.

‘ಮಳೆಯ ನೀರನ್ನೆ ಮರು ಬಳಕೆ ಮಾಡುವಂಥ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಅದು ಭೂಮಿಯಲ್ಲಿ ಇಂಗುವಂತೆ ಮಾಡಬೇಕು. ಮಳೆ ನೀರಿನ ಕೊಯ್ಲುಗಳನ್ನು ಮಾಡಲು ಮುಂದಾಗಬೇಕು’ ಎಂದರು.

ಉಪನ್ಯಾಸ: ಹಿರಿಯ ವಕೀಲ ಪಿ.ಎಸ್.ಭಟ್ ಅವರು ನೀರಿನ ಮಹತ್ವ ಮತ್ತು ಮಿತವ್ಯಯ ಹಾಗೂ ಜಲ ಕಾಯ್ದೆ 1974ರ ಕುರಿತು ಶುಭಾ ಗಾಂವಕರ ಉಪನ್ಯಾಸ ನೀಡಿದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಕೆ.ಪವಾರ, ನಗರಸಭೆ ಸದಸ್ಯರು ಹಾಜರಿದ್ದರು.
**
ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಯು ಕಲುಷಿತಗೊಂಡು, ಅದನ್ನು ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದರೂ ಬರಬಹುದು.

– ಟಿ.ಗೋವಿಂದಯ್ಯ, ಹಿರಿಯ ಸಿವಿಲ್ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.