ADVERTISEMENT

ಪ.ಪಂ.ಗೆ ಸೇರಿಸಿ: ಕುಂಬ್ರಿ ಮರಾಠಿಗರ ಆಗ್ರಹ

ಮಂಜುಗುಣಿಯಲ್ಲಿ ನಡೆದ ವನವಾಸಿ ಸತ್ಸಂಗ ಸಮಾವೇಶ, ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯಿಂದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:48 IST
Last Updated 19 ಜನವರಿ 2017, 6:48 IST
ಶಿರಸಿ ತಾಲ್ಲೂಕಿನ ಮಂಜುಗುಣಿಯಲ್ಲಿ ಬುಧವಾರ ನಡೆದ ವನವಾಸಿ ಸತ್ಸಂಗ ಸಮಾವೇಶದಲ್ಲಿ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಶಾರದೇಶಾನಂದ ಸ್ವಾಮೀಜಿ,ಕುಮಾರಸ್ವಾಮಿ, ಕೇಶವ ಹೆಗಡೆ ಇದ್ದಾರೆ
ಶಿರಸಿ ತಾಲ್ಲೂಕಿನ ಮಂಜುಗುಣಿಯಲ್ಲಿ ಬುಧವಾರ ನಡೆದ ವನವಾಸಿ ಸತ್ಸಂಗ ಸಮಾವೇಶದಲ್ಲಿ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿದರು. ಶಾರದೇಶಾನಂದ ಸ್ವಾಮೀಜಿ,ಕುಮಾರಸ್ವಾಮಿ, ಕೇಶವ ಹೆಗಡೆ ಇದ್ದಾರೆ   

ಶಿರಸಿ: ಕುಂಬ್ರಿಮರಾಠಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕು. ಈ ಕೂಗನ್ನು ಸರ್ಕಾರಕ್ಕೆ ತಲುಪಿಸಲು ಜನಪ್ರತಿನಿಧಿಗಳು ಸಮುದಾಯದ ದನಿಗೆ ಕಿವಿಯಾಗಬೇಕು ಎಂದು ತಾಲ್ಲೂಕಿನ ಮಂಜುಗುಣಿಯಲ್ಲಿ ಬುಧವಾರ ನಡೆದ ವನವಾಸಿ ಸತ್ಸಂಗ ಸಮಾವೇಶ ಆಗ್ರಹಿಸಿದೆ.

ಸ್ವರ್ಣವಲ್ಲಿ ಮಠದ ಗ್ರಾಮಾಭ್ಯುದಯ ಸಂಸ್ಥೆ ಹಾಗೂ ವನವಾಸಿ ಕಲ್ಯಾಣ ಸಂಘಟನೆ ಜಂಟಿಯಾಗಿ ಆಯೋಜಿಸಿದ್ದ ಸಮಾವೇಶವನ್ನು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಭಗವಂತನ ಚಿಂತನೆಯೇ ಸತ್ಸಂಗವಾಗಿದ್ದು ಈ ಅಂಶಗಳು ಭಗವದ್ಗೀತೆಯಲ್ಲಿವೆ.

ಭಗವದ್ಗೀತೆ ಹಿಂದೂಗಳ ಧರ್ಮ ಗ್ರಂಥವಾಗಿದೆ. ಬದುಕಿನಲ್ಲಿ ಉತ್ಸಾಹ ಕಳೆದುಕೊಂಡ ಸಂದರ್ಭದಲ್ಲಿ ಮತ್ತೆ ಶಕ್ತಿ ತುಂಬಿ ಬದುಕಿನಲ್ಲಿ ಯಶಸ್ಸು ಕಾಣಲು ಭಗವದ್ಗೀತೆ ಬೇಕು. ಜೀವನದಲ್ಲಿ ಅನುಸರಿಸಬೇಕಾದ ಒಳ್ಳೆಯ ನಡತೆಗಳ ಗುಚ್ಛ ಇದಾಗಿದೆ ಎಂದು ಅವರು ಹೇಳಿದರು.

ವನವಾಸಿಗಳು ಆಧುನಿಕತೆಯ ಸೆಳೆತಕ್ಕೆ ಸಿಕ್ಕಿದ್ದಾರೆ. ಜೊತೆಗೆ ಮತಾಂತರ ಕೂಡ ಕೆಲವೆಡೆ ಜೀವಂತವಾಗಿದೆ. ಕಷ್ಟ ಬಂದರೂ ಧರ್ಮ ಬಿಡಬಾರದು ಎಂಬ ಭಾವನೆ ಪ್ರತಿಯೊಬ್ಬನ್ನೂ ಇರಬೇಕು. ವನವಾಸಿಗಳಲ್ಲಿ ಪ್ರಾಮಾಣಿಕತೆ ಇದೆ. ಆದರೆ ಶಿಕ್ಷಣ ಮತ್ತು ಸೌಲಭ್ಯಗಳ ಕೊರತೆಯಿದೆ ಎಂದರು.

ಚಂಚಲತೆ ನಿಯಂತ್ರಿಸಿ: ಮನಸ್ಸಿನ ಚಂಚಲತೆಯ ನಿಯಂತ್ರಣ, ಗುರುವಿನ ವಾಣಿಯಲ್ಲಿ ನಂಬಿಕೆ ಜೊತೆಗೆ ಕಾಯಕ ನಿಷ್ಠೆ ಇದ್ದರೆ ಸಾಧನೆ ಸಾಧ್ಯ. ಮಾನವನಲ್ಲಿ ಇತ್ತೀಚೆಗೆ ಅವಿವೇಕತನ ಹೆಚ್ಚುತ್ತಿದೆ. ಮದ್ಯನಶೆಯಂತಹ ಈ ಭ್ರಮೆಯಿಂದ ಸಂಸ್ಕಾರ ನಾಶವಾಗುತ್ತಿದೆ. ಇದನ್ನು ತಡೆಯಲು ವಿವೇಕದ ಪಾಠ ಅಗತ್ಯವಾಗಿದೆ ಎಂದು ಹರಿಹರದ ಶಾರದೇಶಾನಂದ ಸ್ವಾಮೀಜಿ ಹೇಳಿದರು.

ವಿಶ್ವ ಹಿಂದೂ ಪರಿಷತ್ ರಾಜ್ಯ ಘಟಕದ ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ, ಭಯೋತ್ಪಾದನೆ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಖಂಡಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ದೇಶ ಮೊದಲೆಂಬ ಭಾವನೆ ಬೆಳೆಸಿಕೊಂಡು ರಾಷ್ಟ್ರಕ್ಕೆ ಯುವ ಪೀಳಿಗೆ ಕೊಡುಗೆ ನೀಡಬೇಕು ಎಂದರು.

ಸ್ವದೇಶಿ ಆಂದೋಲನ ಮಂಚ್‌ನ ಪ್ರಮುಖ ಪ್ರೊ. ಬಿ.ಎಂ. ಕುಮಾರಸ್ವಾಮಿ ಅವರು ಗಿರಿಜನರ ಹಕ್ಕುಗಳು ಹಾಗೂ ಅರಣ್ಯ ನಿರ್ವಹಣೆಯಲ್ಲಿ ವನವಾಸಿಗಳ ಪಾತ್ರದ ಕುರಿತು ಮಾತನಾಡಿದರು. ವನವಾಸಿ ಪ್ರಮುಖರಾದ ಸೋಮು ಮರಾಠಿ, ನಾರಾಯಣ ಮರಾಠಿ ವನವಾಸಿಗಳ ಪ್ರಚಲಿತ ಪರಿಸ್ಥಿತಿ ಕುರಿತು ವಿಷಯ ಮಂಡಿಸಿದರು. ಬಂಡಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವರಾಜ ಮರಾಠಿ, ಶಾಂತಾರಾಮ ಸಿದ್ದಿ, ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಅಶೀಸರ ಇದ್ದರು.

ಬೆಣಗಾಂವ, ಸರಗುಪ್ಪಾ, ಮುಂಡಗಾರ, ಹಳ್ಳಿಬೈಲು, ಮತ್ತಿಗಟ್ಟಾ, ಬಂಡಲ, ರಾಗಿಹೊಸಳ್ಳಿ, ದೇವನಳ್ಳಿ ಮುಂತಾದ ಹಳ್ಳಿಗಳ ಮರಾಠಿ, ಸಿದ್ದಿ ಸಮುದಾಯದ ಜನರು ಭಾಗವಹಿಸಿದ್ದರು. ಗ್ರಾಮಾಭ್ಯುದಯ ಸಂಸ್ಥೆಯ ಕಾರ್ಯದರ್ಶಿ ಎಂ.ಸಿ. ಹೆಗಡೆ ಶಿರಸಿಮಕ್ಕಿ ಸ್ವಾಗತಿಸಿದರು.

*
ಆಧ್ಯಾತ್ಮಿಕ ಚಿಂತನೆ ಎಂದರೆ ಆತ್ಮವನ್ನು ಅನುಭವಿಸುವುದಾಗಿದೆ. ಹಾಗಾದಾಗ ಮಾತ್ರ ಸಾಧನೆ ಸಾಧ್ಯ. ಅಧ್ಯಾತ್ಮ ಸಾಧನೆಗೆ ಬೇಕಾದ ಅಂಶಗಳು ಭಗವದ್ಗೀತೆಯಲ್ಲಿ ಸಾಕಷ್ಟಿವೆ.
–ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ,
ಸ್ವರ್ಣವಲ್ಲಿ ಮಠಾಧೀಶ

ADVERTISEMENT

*
ವನವಾಸಿ ಸತ್ಸಂಗ ಸಮಾವೇಶದ ನಿರ್ಣಯಗಳು

* ವನ್ಯ ಪ್ರಾಣಿಗಳ ಹಾವಳಿಯಿಂದ ಆಗುವ ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು.
* ಅರಣ್ಯ ಹಕ್ಕು ಕಾಯ್ದೆ ಅಡಿ ನೂರಾರು ವನವಾಸಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಕಾಲಮಿತಿಯಲ್ಲಿ ಹಕ್ಕುಪತ್ರ ನೀಡಬೇಕು.
* ವನವಾಸಿ ಪ್ರದೇಶದಲ್ಲಿ ಗ್ರಾಮ ಅರಣ್ಯ ಸಮಿತಿ ಹೆಚ್ಚಿಸಬೇಕು. ಅರಣ್ಯ ಉಪ ಉತ್ಪನ್ನ ಸಂಗ್ರಹಕ್ಕೆ  ಅವಕಾಶ ಕಲ್ಪಿಸಬೇಕು.
* ವನವಾಸಿಗಳಿಗೆ ಸೋಲಾರ್ ಬೇಲಿ, ದೀಪ, ಸರಳ ಅಸ್ತ್ರ ಒಲೆಗಳನ್ನು ನಿರ್ಮಿಸಲು ಸರ್ಕಾರ ಬೆಂಬಲ ನೀಡಬೇಕು.
* ವನವಾಸಿಗಳ ಪಾರಂಪರಿಕ ಉದ್ಯೋಗಗಳ ಬಗ್ಗೆ ತರಬೇತಿ ನೀಡಲು ಸಹಕಾರಿ ಸಂಘಸಂಸ್ಥೆ ಸಹಾಯ ಮಾಡಬೇಕು.
* ವನವಾಸಿಗಳು ಬೆಳೆಸುವ ಗಡ್ಡೆಗೆಣಸು ಉತ್ಪನ್ನಕ್ಕೆ ಮಾರುಕಟ್ಟೆ ಕಲ್ಪಿಸಲು ಸಹಕಾರಿ ಸಂಸ್ಥೆಗಳು ಮುಂದಾಗಬೇಕು
* ವನವಾಸಿಗಳು ವ್ಯಸನಮುಕ್ತರಾಗಬೇಕು. ಇದಕ್ಕಾಗಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.