ADVERTISEMENT

ಪರಿಸರ ಅಧಿಕಾರಿ ಸೇರಿ ಮೂವರು ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 9:03 IST
Last Updated 21 ಏಪ್ರಿಲ್ 2017, 9:03 IST

ಕಾರವಾರ: ಗೇರು ಬೀಜ ಸಂಸ್ಕರಣಾ ಘಟಕ ಸ್ಥಾಪನೆಗೆ ನಿರಾಕ್ಷೇಪಣಾ ಪತ್ರ ನೀಡಲು ₹ 12,000 ಲಂಚ ಪಡೆಯುತ್ತಿದ್ದ ಇಲ್ಲಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಭಾರ ಪ್ರಾದೇಶಿಕ ಅಧಿಕಾರಿ ಸುಗಂಧ ಕುರಿ ಸೇರಿದಂತೆ ಮೂವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು.ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಹಾಯಕ ಪರಿಸರ ಅಧಿಕಾರಿ ಕುಮಾರಸ್ವಾಮಿ ಹಾಗೂ ಹಣವನ್ನು ಬೇರೆಡೆ ಕೊಂಡೊಯ್ಯಲು ಸಹಕರಿಸಿದ ಭದ್ರತಾ ಸಿಬ್ಬಂದಿ ಚಂದ್ರಕಾಂತ ಗುನಗಿ ಕೂಡ ಸಿಕ್ಕಿಬಿದ್ದಿದ್ದಾರೆ.

ನಿರಾಪೇಕ್ಷಣಾ ಪತ್ರ ನೀಡಲು ₹ 15,000 ನೀಡುವಂತೆ ಪರಿಸರ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಹೊನ್ನಾವರದ ಶ್ರೀನಿವಾಸ್‌ ಬುಧವಾರ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಮಂಡಳಿಯ ಕಚೇರಿಯಲ್ಲಿ ಗುರುವಾರ ಬೆಳಿಗ್ಗೆ ಶ್ರೀನಿವಾಸರಿಂದ ₹ 12,000 ಲಂಚ ಪಡೆದ ಸುಗಂಧ ಕುರಿ ಅವರು ಆ ಹಣವನ್ನು ಭದ್ರತಾ ಸಿಬ್ಬಂದಿಗೆ ನೀಡಿದರು.

ಅದನ್ನು ಬೇರೆಡೆಗೆ ಕೊಂಡೊಯ್ಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಹಣದ ಸಮೇತ ಆತನನ್ನು ವಶಕ್ಕೆ ಪಡೆದರು.ಕಾರವಾರಕ್ಕೆ ಭೇಟಿ ನೀಡಿದ್ದ ಎಸಿಬಿ ಪ್ರಭಾರ ಎಸ್ಪಿ ಪುಟ್ಟಮಾದಯ್ಯ ಸಹ ಸ್ಥಳಕ್ಕೆ ಬಂದು ಮಾಹಿತಿ ಪಡೆದರು.ನ್ಯಾಯಾಲಯಕ್ಕೆ ಹಾಜರು ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕೈದು ತಾಸು ವಿಚಾರಣೆ ನಡೆಸಿ, ನಂತರ ಬಂಧಿತ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ದಾಳಿಯ ನೇತೃತ್ವದ ವಹಿಸಿದ್ದ  ಎಸಿಬಿ ಡಿವೈಎಸ್ಪಿ ಗಿರೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.