ADVERTISEMENT

ಬಣ್ಣದ ಚಾವಡಿ ಜೀರ್ಣೋದ್ಧಾರಕ್ಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:24 IST
Last Updated 23 ಜುಲೈ 2017, 9:24 IST
ಶಿರಸಿ ತಾಲ್ಲೂಕಿನ ಬನವಾಸಿ ಮಧುಕೇಶ್ವರ ದೇವಾಲಯದ ಎದುರು ಶಿಥಿಲಾವಸ್ಥೆಯಲ್ಲಿರುವ ಬಣ್ಣದ ಚಾವಡಿ
ಶಿರಸಿ ತಾಲ್ಲೂಕಿನ ಬನವಾಸಿ ಮಧುಕೇಶ್ವರ ದೇವಾಲಯದ ಎದುರು ಶಿಥಿಲಾವಸ್ಥೆಯಲ್ಲಿರುವ ಬಣ್ಣದ ಚಾವಡಿ   

ಶಿರಸಿ: ತಾಲ್ಲೂಕಿನ ಬನವಾಸಿಯ ಮಧು ಕೇಶ್ವರ ದೇವರ ರಥದ ಸಾಮಗ್ರಿಗಳನ್ನು ಸಂಗ್ರಹಿಸುವ ಬಣ್ಣದ ಚಾವಡಿ ಸಂಪೂರ್ಣ ಶಿಥಿಲಗೊಂಡಿದೆ. 400 ವರ್ಷ ಹಳೆಯದಾಗಿರುವ ಈ ಕಟ್ಟಡದ ಜೀರ್ಣೋದ್ಧಾರಕ್ಕೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಯೋಜನೆ ರೂಪಿಸಿ ಪುರಾತತ್ವ ಇಲಾಖೆಗೆ ಸಲ್ಲಿಸಿದೆ.

ನೂತನವಾಗಿ ರಚಿತವಾಗಿರುವ ಮಧುಕೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ದೇಗುಲದ ಸಮಗ್ರ ಅಭಿವೃದ್ಧಿಗೆ ಸಮಿತಿ ರೂಪಿಸಿರುವ ಯೋಜನೆ ಕುರಿತು ಮಾಹಿತಿ ನೀಡಿದರು.

ಬಣ್ಣದ ಚಾವಡಿಯ ಕಟ್ಟಡ ಜೀರ್ಣಗೊಂಡಿರುವುದರಿಂದ ಇದರ ಪುನರ್ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಿ ₹ 24 ಲಕ್ಷ ವೆಚ್ಚದ ಪ್ರಸ್ತಾವ ಸಿದ್ಧ ಪಡಿಸಿ ಈ ಹಿಂದೊಮ್ಮೆ ಪುರಾತತ್ವ ಇಲಾಖೆಗೆ ಕಳುಹಿಸಲಾಗಿತ್ತು. ಇಲಾಖೆ ಯಿಂದ ಯಾವುದೇ ಕ್ರಮವಾಗದ ಕಾರಣ ಪುನಃ ಈ ಪ್ರಸ್ತಾವ ಕಳುಹಿಸ ಲಾಗಿದೆ. 2010ರಲ್ಲಿ ತಿದ್ದುಪಡಿಯಾಗಿ ರುವ ಪುರಾತತ್ವ ಇಲಾಖೆಯ ನಿಯಮದ ಅಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.

ADVERTISEMENT

ದೇವಾಲಯದ ಪಕ್ಕದಲ್ಲಿರುವ ಕಿಲಾರ ಕೊಟ್ಟಿಗೆ ಸಹ ಶಿಥಿಲಗೊಂಡಿದೆ. ಪ್ರಸ್ತುತ ಈ ಕಟ್ಟಡದಲ್ಲಿ ಪ್ರವಾಸೋದ್ಯಮ ಮಾಹಿತಿ ನೀಡುವ ಕಚೇರಿ ನಡೆಯುತ್ತಿದೆ. ಈ ಕಟ್ಟಡ ಸುವ್ಯವಸ್ಥಿತಗೊಳಿಸಬೇಕು. ಬನವಾಸಿಗೆ ಬರುವ ಪ್ರವಾಸಿಗರಿಗೆ ಸ್ಥೂಲ ಮಾಹಿತಿ ನೀಡುವ ಗೈಡ್‌ಗಳನ್ನು ನೇಮಿಸಬೇಕು. ಈ ಬಗ್ಗೆ ಸಹ ಪುರಾತತ್ವ ಇಲಾಖೆಗೆ ಪ್ರಸ್ತಾವ ನೀಡಲಾಗಿದೆ ಎಂದು ಹೇಳಿದರು.

ಶ್ರಾವಣ ಮಾಸ ವಿಶೇಷ: ‘410 ವರ್ಷ ಹಳೆಯದಾಗಿರುವ ಮಧುಕೇಶ್ವರ ದೇವರ ರಥ ಸಹ ಶಿಥಿಲವಾಗಿದೆ. ರಥದ ಪುನರ್ ನಿರ್ಮಾಣ ಸಂಬಂಧ ₹ 90 ಲಕ್ಷ ವೆಚ್ಚದ ಯೋಜನೆ ರೂಪಿಸಿ ಜಿಲ್ಲಾಧಿ ಕಾರಿಗೆ ಸಲ್ಲಿಸಲಾಗಿದೆ. 9.5 ಎಕರೆ ವಿಸ್ತೀರ್ಣದಲ್ಲಿರುವ ಪಂಪವನದ ಸುತ್ತ ಬೇಲಿ ನಿರ್ಮಿಸುವ ಜೊತೆಗೆ ಈ ಉದ್ಯಾನದಲ್ಲಿ ಗಿಡಗಳನ್ನು ನಾಟಿ ಮಾಡುವ ಯೋಜನೆ ರೂಪಿಸಲಾಗಿದೆ.

ಸಮೀಪದ ಯಾತ್ರಿನಿವಾಸದಲ್ಲಿ ಉಳಿಯುವ ಪ್ರವಾಸಿಗರಿಗೆ ವಾಯವಿಹಾರಕ್ಕೆ ಈ ತಾಣ ಪ್ರಶಸ್ತವಾಗಿದೆ. 500ರಷ್ಟು ಔಷಧ ಗಿಡಗಳು ಸೇರಿ 2000 ಗಿಡ ನಾಟಿಗೆ ಸಿದ್ಧತೆ ನಡೆಸಲಾಗಿದೆ. ಯಾತ್ರಿ ನಿವಾಸ ದಲ್ಲಿ ಉಳಿಯುವ ಪ್ರವಾಸಿಗರಿಗೆ ಊಟ, ನೀರಿನ ಸೌಕರ್ಯ ಇಲ್ಲವಾಗಿದೆ. ಜಿಡಿಸೆಟ್ ಸ್ವಯಂ ಸೇವಾ ಸಂಸ್ಥೆಯ ನೆರವು ಪಡೆದು ಯಾತ್ರಾರ್ಥಿಗಳಿಗೆ ಸೌಲಭ್ಯ ನೀಡಲು ಯೋಚಿಸಲಾಗಿದೆ’ ಎಂದು ಸಮಿತಿಯ ಶಿವಾನಂದ ದೀಕ್ಷಿತ್ ಹೇಳಿದರು.

‘ಪ್ರತಿ ಮಾಸದಲ್ಲೂ ದೇವಾಲ ಯದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿ ಕೊಳ್ಳುವ ಸಂಪ್ರದಾಯವಿದೆ. ಈ ಬಾರಿ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಬೆಳಿಗ್ಗೆ ದೇವರಿಗೆ ಶತರುದ್ರಾಭಿಷೇಕ, ಮಧ್ಯಾಹ್ನ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಮಿತಿಯ ಜಿ.ಎ. ಹೆಗಡೆ ಸೋಂದಾ ತಿಳಿಸಿದರು.

ದೇವಾಲಯದ ಎದುರಿನಲ್ಲಿ ರಕ್ಷಣೆಯಿಲ್ಲದೇ ಇರುವ ಪುರಾತನ ವಸ್ತು ಸಂಗ್ರಹಾಲಯ ಸ್ಥಳಾಂತರಕ್ಕೆ ಪುರಾತತ್ವ ಇಲಾಖೆಯ ಮೇಲೆ ಒತ್ತಡ ತರಲಾಗು ವುದು. ಸೋರುತ್ತಿರುವ ದೇವಾಲಯದ ದುರಸ್ತಿ ಕಾರ್ಯ ನಡೆಸುವಂತೆ ಇಲಾಖೆ ಯನ್ನು ವಿನಂತಿಸಲಾಗಿದೆ. ಇಲಾಖೆ ಆಗಸ್ಟ್‌ನಿಂದ ದುರಸ್ತಿ ಕಾರ್ಯ ಪ್ರಾರಂಭಿಸುವ ಭರವಸೆ ನೀಡಿದೆ’ ಎಂದು ರಾಜಶೇಖರ ಒಡೆಯರ್ ಪ್ರಶ್ನೆಗೆ ಉತ್ತರಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾದ ನಿರ್ಮಲಾ ದಾವಣಗೆರೆ, ಗೀತಾ ಯಜಮಾನ, ಹನುಮಂತಪ್ಪ ಮಡ್ಲೂರು, ಜಿಡಿಸೆಟ್ ಸಂಸ್ಥೆಯ ಕಿರಣ್ ಉಪಸ್ಥಿತರಿದ್ದರು.

* * 

ದೇವಾಲಯದ ಅಭಿವೃದ್ಧಿಗೆ ವಾರ್ಷಿಕ ಬಜೆಟ್ ರೂಪಿಸುವ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯ ಗಳಿಗೆ ಕಾಣಿಕೆ ಹಣ, ಸರ್ಕಾರಿ ಇಲಾಖೆ ಗಳ ಸಹಕಾರ ಪಡೆಯಲಾಗುವುದು
ರಾಜಶೇಖರ ಒಡೆಯರ್
ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.