ADVERTISEMENT

ಬಿಜೆಪಿಯ 260 ಜನರ ಬಂಧನ; ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:27 IST
Last Updated 6 ಸೆಪ್ಟೆಂಬರ್ 2017, 5:27 IST
ಬಿಜೆಪಿ ನಡೆಸಿದ ಪ್ರತಿಭಟನಾ ಸಭೆಯ ನಿಮಿತ್ತ ಯಲ್ಲಾಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು
ಬಿಜೆಪಿ ನಡೆಸಿದ ಪ್ರತಿಭಟನಾ ಸಭೆಯ ನಿಮಿತ್ತ ಯಲ್ಲಾಪುರ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು   

ಯಲ್ಲಾಪುರ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹಮ್ಮಿಕೊಂಡ ‘ಮಂಗಳೂರು ಚಲೋ’ ಬೈಕ್ ರ್‌್ಯಾಲಿ ಹಾಗೂ ಸಮಾವೇಶವನ್ನು ಪೊಲೀಸರು ತಡೆದ ಹಿನ್ನಲೆಯಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಕಾರ್ಯಕರ್ತರ ಕೊಲೆಗಾರರನ್ನು ಬಂಧಿಸಬೇಕು, ಸಚಿವ ರಮಾನಾಥ ರೈ ಸಂಪುಟದಿಂದ ಕೈ ಬಿಡಬೇಕು, ಕೊಲೆಗೆ ಕುಮ್ಮಕ್ಕು ನೀಡುತ್ತಿರುವ ಮುಸ್ಲಿಮ್ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿಯಿಂದ ಬರುವ ಬೈಕ್ ಸವಾರರನ್ನು ಪಟ್ಟಣಕ್ಕೆ ಸ್ವಾಗತಿಸಿ, ಪಟ್ಟಣದ ವೈ.ಟಿ.ಎಸ್.ಎಸ್. ಮೈದಾನದಲ್ಲಿ  ಬೃಹತ್ ಸಾರ್ವಜನಿಕ ಸಭೆಯನ್ನು ತಾಲ್ಲೂಕು ಯುವ ಮೋರ್ಚಾ ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿತ್ತು. ಸಭೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಬಸವೇಶ್ವರ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ರಸ್ತೆಯಲ್ಲಿಯೇ ಧರಣಿ ನಡೆಸಿದರು.

ADVERTISEMENT

ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರ್‌್ಯಾಲಿಯನ್ನು ಶಾಂತಿ ಸುವವ್ಯಸ್ಥೆಯಿಂದ ಹಮ್ಮಿಕೊಳ್ಳಲಾಗಿದೆ. ಆದರೆ ದುರುದ್ದೇಶದಿಂದ ಅದನ್ನು ಹತ್ತಿಕ್ಕಿ ಸರ್ಕಾರ ಅಶಾಂತಿ ವಾತಾವರಣ ಸೃಷ್ಟಿಸುತ್ತಿದೆ ಎಂದು ದೂರಿದರು.

ಮಾಜಿ ಶಾಸಕ ಸುನಿಲ್ ಹೆಗಡೆ ಮಾತನಾಡಿ, ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ರ್‌್ಯಾಲಿ ತಡೆಯಲು ಮುಂದಾಗಿದೆ ಎಂದು ದೂರಿದರು.
ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಮಾತನಾಡಿದರು. ತಾಲ್ಲೂಕು ಘಟಕದ ಅದ್ಯಕ್ಷ ರಾಮು ನಾಯ್ಕ, ನರಸಿಂಹ ಕೋಣೆಮನೆ, ಗುರುಪ್ರಸಾದ ಹೆಗಡೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಜನ್ನು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಎಂ.ಜಿ. ನಾಯ್ಕ, ಸದಾಶಿವ ಹರಿಗದ್ದೆ, ಯೋಗೇಶ ಹಿರೇಮಠ, ಪ್ರಕಾಶ ರೋಖಡೆ, ಎಂ.ಎನ್.ಭಟ್ಟ, ಬಾಬು ಬಾಂದೇಕರ್, ಶ್ಯಾಮಲಿ ಪಾಟಣಕರ್, ವೀಣಾ ಯಲ್ಲಾಪುರಕರ್, ನಟರಾಜ ಗೌಡರ್, ನಾಗರಾಜ ಕವಡಿಕೇರಿ, ರೇಖಾ ಹೆಗಡೆ, ಗಣಪತಿ ಮುದ್ದೆಪಾಲ, ಕಾವೇರಿ ಮಡಿವಾಳ ಪಾಲ್ಗೊಂಡಿದ್ದರು.

ನಂತರ ರಾಷ್ಟ್ರೀಯ ಹೆದ್ದಾರಿಗೆ ತೆರಳಿ ಟೈರ್ ಸುಟ್ಟು ಹೆದ್ದಾರಿ ತಡೆ ನಡೆಸಿದ್ದಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು. ಹಳಿಯಾಳ, ರಾಮನಗರ, ಜೋಯಿಡಾ, ಶಿರಸಿ, ಸಿದ್ದಾಪುರ ಭಾಗಗಳಿಂದ ನೂರಾರು ಕಾರ್ಯಕರ್ತರು ಬೈಕ್ ರ್‌್್ಯಾಲಿಗೆಂದು ಬಂದಿದ್ದರು.

ಗಾಜು ಪುಡಿಪುಡಿ: ಬಿಜೆಪಿ ನಾಯಕರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹಾಗೂ ಪೊಲೀಸ್ ವಾಹನದ ಎದುರು ಕುಳಿತು  ಪ್ರತಿಭಟಿಸಿದರು. ಪ್ರತಿಭಟನಾ ಕಾರರನ್ನು ಬಸ್‌ಗೆ ತುಂಬುವ ಸಮಯಲ್ಲಿ ಬಸ್‌ನ ಗಾಜು ಪುಡಿಪುಡಿಯಾಯಿತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಡನೆ ಸಾಕಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿತ್ತು. ಆಂಬುಲೆನ್ಸ್‌, ಅಗ್ನಿಶಾಮಕ ದಳದ ವಾಹನ ನಿಯೋಜಿಸಲಾಗಿತ್ತು. ಎಸ್‌ಪಿ ವಿನಾಯಕ್ ಪಾಟೀಲ ಖುದ್ದು ಸ್ಥಳದಲ್ಲಿದ್ದು ಪೊಲೀಸ್ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.

ಶಿರಸಿ ಡಿವೈಎಸ್ಪಿ ನಾಗೇಶ ಶೆಟ್ಟಿ, ಯಲ್ಲಾಪುರ ಪಿಎಸ್‌ಐ ಡಾ. ಮಂಜುನಾಥ ನಾಯಕ, ಮುಂಡಗೋಡ ಪಿಎಸ್‌ಐ ಕಿರಣ ಕುಮಾರ್, ಯಲ್ಲಾಪುರ ಪಿಎಸ್‌ಐ ಶ್ರೀಧರ್, ಶಿರಸಿ ಗ್ರಾಮೀಣ ಪಿಎಸ್ಐ ಸೀತಾರಾಮ, ಬನವಾಸಿ ಪಿಎಸ್ಐ ಮೋಹಿನಿ ಶೆಟ್ಟಿ ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.