ADVERTISEMENT

ಬಿಜೆಪಿ, ಕಾಂಗ್ರೆಸ್‌ ಸದಸ್ಯರ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 5:38 IST
Last Updated 16 ಸೆಪ್ಟೆಂಬರ್ 2017, 5:38 IST

ಕಾರವಾರ: ಕೇಂದ್ರ ಸರ್ಕಾರದ ಉಜ್ವಲ್‌ ಯೋಜನೆಯು ಶುಕ್ರವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ನಡುವೆ ಕೋಲಾಹಲವನ್ನೇ ಎಬ್ಬಿಸಿತು. ಅಲ್ಲದೇ ಸಭೆಯ ಬಹುತೇಕ ಸಮಯವನ್ನು ಇದು ನುಂಗಿತು.

‘ಉಜ್ವಲ್‌ ಯೋಜನೆಯಡಿ ನೀಡಲಾಗುತ್ತಿರುವ ಗ್ಯಾಸ್‌ನ ವಿತರಣಾ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆಯದೇ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ’ ಎಂದು ಯಲ್ಲಾಪುರ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಆರೋಪಿಸಿದರು. ‘ಕಾರ್ಯಕ್ರಮಕ್ಕೆ ಬರೀ ಬಿಜೆಪಿ ಮುಖಂಡರನ್ನು ಕರೆಯಲಾಗುತ್ತಿದ್ದು, ನಮ್ಮನ್ನು ಕಡೆಗಣಿಸಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ಪುಷ್ಪಾ ನಾಯ್ಕ, ಜಿ.ಎನ್.ಹೆಗಡೆ ಮುರೇಗಾರ ಹಾಗೂ ಅಲ್ಬರ್ಟ್‌ ಡಿಕೋಸ್ತಾ ದೂರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಜಗದೀಶ ನಾಯಕ, ‘ಇಲ್ಲಿ ಪಕ್ಷದ ವಿಷಯ ಎಳೆದು ತರುವುದು ಬೇಡ. ಹೌದು ನಾವು ಕಾರ್ಯಕ್ರಮಕ್ಕೆ ಹೋಗುತ್ತೇವೆ. ನೀವು ಸಹ ಹೋಗಿ, ನಿಮ್ಮನ್ನು ಯಾರು ತಡೆಯುತ್ತಾರೆ’ ಎಂದರು. ಇದಕ್ಕೆ ಬಿಜೆಪಿಯ ಗಾಯತ್ರಿ ಗೌಡ, ವೀಣಾ ನಾಯ್ಕ, ಉಷಾ ಹೆಗಡೆ ಕೂಡ ದಡಿಗೂಡಿಸಿದರು. 

ADVERTISEMENT

‘ನಾನು ಕೇಳು ತ್ತಿರುವುದು ನಿಮ್ಮನಲ್ಲ. ನನ್ನ ಪ್ರಶ್ನೆಗೆ ಅಧ್ಯ ಕ್ಷರು ಉತ್ತರಿಸುತ್ತಾರೆ. ಅಲ್ಲದೇ ಗ್ಯಾಸ್‌ ನೀಡುತ್ತಿರುವುದು ಉಚಿತವೋ ಅಥವಾ ಅಲ್ಲವೋ ಎಂಬುದನ್ನು ಅಧಿಕಾರಿಗಳು ಸ್ಪಷ್ಪಪಡಿಸಬೇಕು’ ಎಂದು ಪುಷ್ಪಾ ಒತ್ತಾಯಿಸಿದರು.

ಮಧ್ಯ ಪ್ರವೇಶಿಸಿ ಮಾತನಾಡಿದ ಸಿಇಒ ಎಲ್‌.ಚಂದ್ರಶೇಖರ ನಾಯಕ, ‘ಸರ್ಕಾರದ ಕಾರ್ಯಕ್ರಮ ಆದರೆ ಶಿಷ್ಟಾಚಾರದ ಪ್ರಕಾರ ಜನಪ್ರತಿನಿಧಿಗಳನ್ನು ಕರೆಯಬೇಕು. ಆದರೆ ಯೋಜನಾ ಕಾರ್ಯಕ್ರಮಗಳಿಗೆ ಕರೆಯುವುದು ಕಡ್ಡಾಯವಲ್ಲ’ ಎಂದು ಹೇಳಿದರು.

ಕ್ಲಸ್ಟರ್‌ ಮಟ್ಟಕ್ಕೆ ಹಣ ನೀಡಿ:  ‘ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಅನುದಾನ ಬರುವುದಿಲ್ಲ ಎಂದು ಸಿಆರ್‌ಪಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲೇ ಬಹಿರಂಗವಾಗಿ ಹೇಳುತ್ತಾರೆ. ಇದು ಜನಪ್ರತಿನಿಧಿಗಳಿಗೆ ಮುಜುಗರ ತರುವ ಸಂಗತಿ’ ಎಂದು ಅಲ್ಬರ್ಟ್ ಡಿಕೋಸ್ತಾ ಕಿಡಿಕಾರಿದರು.

‘ಜಿಲ್ಲಾ ಹಾಗೂ ತಾಲ್ಲೂಕು ಮಟ್ಟಕ್ಕೆ ಮಾತ್ರ ಅನುದಾನ ಬಿಡುಗಡೆಯಾಗುತ್ತದೆ. ತಾಲ್ಲೂಕು ಮಟ್ಟಕ್ಕೆ 3.07 ಲಕ್ಷ ಬರುತ್ತದೆ.  ಹಿಂದೆ ಆ ಹಣವನ್ನು ಕ್ಲಸ್ಟರ್‌ ಮಟ್ಟಕ್ಕೆ ಹಂಚಿಕೆ ಮಾಡುತ್ತಿದ್ದೆವು. ಈ ಬಾರಿ ಇನ್ನೂ ಹಣ ಬರದ ಕಾರಣ ಹಂಚಿಕೆ ಮಾಡೋದಕ್ಕೆ ಆಗಿಲ್ಲ’ ಎಂದು ಶಿರಸಿ ಡಿಡಿಪಿಐ ಎಚ್‌.ಪ್ರಸನ್ನಕುಮಾರ್‌ ಹೇಳಿದರು.

‘ಶಿರಸಿ ತಾಲ್ಲೂಕು ಒಂದರಲ್ಲೇ 300ಕ್ಕೂ ಅಧಿಕ ಶಾಲೆ ಗಳಿವೆ. ಹೀಗಾಗಿ ತಾಲ್ಲೂಕು ಮಟ್ಟದಲ್ಲಿ ಪ್ರತಿಭಾ ಕಾರಂಜಿ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ಒಂದೊಂದು ಸ್ಪರ್ಧೆ ನಡೆಸಲು 3–4 ದಿನಗಳು ಬೇಕಾಗುತ್ತದೆ’ ಎಂದರು. 

ಶಾಲೆಗಳಿಗೆ ಪೀಠೋಪಕರಣ ಗಳನ್ನು ನೀಡುವಾಗ ಜನಪ್ರತಿನಿಧಿಗಳ ಗಮನಕ್ಕೆ ತರಬೇಕು ಹಾಗೂ ಮಳೆಗಾ ಲದಲ್ಲಿ ಕ್ರೀಡೆಗಳನ್ನು ನಡೆಸುವುದರಿಂದ ಆಟಗಾರರು ಬಿದ್ದು ಗಾಯಾಳುಗಳು ಆಗುತ್ತಿದ್ದಾರೆ. ಹೀಗಾಗಿ ಮಳೆಗಾಲದ ನಂತರ ಕ್ರೀಡೆ ನಡೆಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ವಾರ್ಷಿಕ ಆಡಳಿತ ವರದಿಯನ್ನು ಸಭೆಯಲ್ಲಿ ಅಧ್ಯಕ್ಷೆ ಅಧ್ಯಕ್ಷೆ ಜಯಶ್ರೀ ಮೊಗೇರ ಬಿಡುಗಡೆ ಮಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವಾನಂದ ಹೆಗಡೆ, ಬಸವರಾಜ ದೊಡ್ಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.