ADVERTISEMENT

ಬಿಜೆಪಿ ಪರಿವರ್ತನಾ ಯಾತ್ರೆ ಇಂದು ಭಟ್ಕಳಕ್ಕೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 8:58 IST
Last Updated 13 ನವೆಂಬರ್ 2017, 8:58 IST

ಭಟ್ಕಳ: ‘ನವ ಕರ್ನಾಟಕ ನಿರ್ಮಾಣಕ್ಕಾಗಿ ಇದೇ 2ರಂದು ಬೆಂಗಳೂರಿನಿಂದ ಆರಂಭಗೊಂಡ ಬಿಜೆಪಿಯ ‘ಪರಿವರ್ತನಾ ಯಾತ್ರೆ’ಯು ಇದೇ 13ರಂದು ಸಂಜೆ 6ಕ್ಕೆ ತಾಲ್ಲೂಕು ಪ್ರವೇಶಿಸಲಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ ನಾಯ್ಕ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ‘ಸೋಮವಾರ ಭಟ್ಕಳಕ್ಕೆ ಆಗಮಿಸಲಿರುವ ಯಾತ್ರೆಗೆ ತಾಲ್ಲೂಕಿನ ಗಡಿ ಭಾಗವಾದ ಗೊರಟೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ಶಂಸುದ್ದೀನ್ ಸರ್ಕಲ್‌ನಿಂದ ಬೃಹತ್ ಮೆರವಣಿಗೆಯ ಮೂಲಕ ಸಾಗರ ರಸ್ತೆಯಲ್ಲಿನ ಗುರು ಸುಧೀಂದ್ರ ಕಾಲೇಜು ಮೈದಾನಕ್ಕೆ ಕರೆತರಲಾಗುವುದು.

ಳಿಕ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಜ್ಯ ಘಟಕದ ಮುಖಂಡರು, ಕೇಂದ್ರದ ಸಚಿವರುಗಳು ಮಾತನಾಡಲಿದ್ದಾರೆ. ಪರಿವರ್ತನಾ ಯಾತ್ರೆಯ ಕುರಿತಾಗಿ ಎಲ್ಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದ ಜತೆಗೆ ಕಾರ್ಯಕ್ರಮದ ಮಾಹಿತಿಯನ್ನು ಒದಗಿಸಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾಘಟಕದ ಉಪಾಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ‘ಸಮಾವೇಶಕ್ಕೆ ಒಟ್ಟು 20 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಈಗಾಗಲೇ ದೂರದೂರಿನಿಂದ ಬರುವ ಕಾರ್ಯಕರ್ತರಿಗೆ 140 ಟೆಂಪೊಗಳನ್ನು ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕರ್ತರ 2,500 ಬೈಕ್‌ಗಳು ಯಾತ್ರೆಯ ವೇಳೆ ನಡೆಯುವ ರ‍್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಬಳಿಕ ರಾಜ್ಯದ ನಾಯಕರುಗಳಿಗೆ ಹಾಗೂ ಕೇಂದ್ರದ ಸಚಿವರಿಗೆ ಮುರ್ಡೇಶ್ವರದಲ್ಲಿ ತಂಗಲು ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದರು.

ಬಿಜೆಪಿ ಮುಖಂಡ ಜೆ.ಡಿ ನಾಯ್ಕ, ಉಸ್ತುವಾರಿ ಎಂ.ಜೆ ನಾಯ್ಕ, ಪರಮೇಶ್ವರ ದೇವಾಡಿಗ, ಸುನೀಲ್ ನಾಯ್ಕ, ಈಶ್ವರ ನಾಯ್ಕ ದೊಡ್ಮನೆ, ಉಮೇಶ ನಾಯ್ಕ, ವಿನೋದ ನಾಯ್ಕ ರಾಯಲಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.