ADVERTISEMENT

ಬೀಜದುಂಡೆ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಮೇ 2017, 9:53 IST
Last Updated 24 ಮೇ 2017, 9:53 IST

ಹಳಿಯಾಳ: ಕೋಟ್ಯಂತರ ರೂಪಾಯಿ ವೆಚ್ಚ  ಮಾಡಿ ಗಿಡ ಮರಗಳನ್ನು ನೆಡುವುದಕ್ಕಿಂತ ಬೀಜದುಂಡೆ ಮಾಡಿ ನೆಟ್ಟರೇ ಸಾಕಷ್ಟು ಪರಿಸರ ಬೆಳೆಸಬಹುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ ಹೇಳಿದರು.

ತಾಲ್ಲೂಕಿನ ಮುರ್ಕವಾಡ ಚೈತನ್ಯ ವಿದ್ಯಾಲಯದಲ್ಲಿ ಅರಣ್ಯ ಇಲಾಖೆ, ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್ –ಸೆಟಿ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ಬೀಜದುಂಡೆ ಅಭಿಯಾನದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಣ್ಣನ್ನು ಹದಗೊಳಿಸಿ ಸಗಣಿ, ಗೋಮೂತ್ರ ಹಾಗೂ ನೀರನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರಿಸಿ ಅರಣ್ಯ ಪ್ರದೇಶದಲ್ಲಿ, ರಸ್ತೆಯ ಅಕ್ಕಪಕ್ಕದಲ್ಲಿ ನಾಟಿ ಮಾಡಿದರೇ ಮುಂದಿನ ದಿನಗಳಲ್ಲಿ ಸತ್ವಯುತ ಗಿಡ ಬೆಳೆದು ಹೆಚ್ಚೆಚ್ಚು ಪರಿಸರ ಸಹ ಬೆಳೆಸಲು ಸಾಧ್ಯ. ಸಾವಯವ ಕೃಷಿಯಲ್ಲಿ ಪರಿಸರಕ್ಕೆ ಪೂರಕವಾದ ತಾಂತ್ರಿಕತೆ ಉಪಯೋಗಿಸಿ ಪ್ರತಿಯೊಬ್ಬರೂ ತಾವು ಕೆಲಸ ಕಾರ್ಯ ಮಾಡುವ ಮನೆಗಳ ಹತ್ತಿರ ಅಲ್ಲೆಲ್ಲಾ ಬೀಜದುಂಡೆಯನ್ನು ಹಾಕಿ ನಾಟಿ ಮಾಡಿ ಎಂದು ಸಲಹೆ ನೀಡಿದರು.

ADVERTISEMENT

ಭಾರತೀಯ ಜೀವ ವಿಮಾ ಸಲಹೆಗಾರ ಬಿ.ಎಚ್.ಶಿವಪ್ಪಾ ಮಾತನಾಡಿದರು. ಬೀಜದುಂಡೆ ಸಿದ್ಧಗೊಳಿಸಿ ನಾಟಿ ಮಾಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ವಲಯ ಅರಣ್ಯಾಧಿಕಾರಿ ಶಿವಾನಂದ ತೋಡ್ಕರ, ಚೈತನ್ಯ ವಿದ್ಯಾಲಯದ ಆಡಳಿತಾಧಿಕಾರಿ ಗುರುನಾಥ ಇನಾಂದಾರ, ಪ್ರಾಚಾರ್ಯ ಪಿ.ಎಸ್.ಚರಂತಿಮಠ, ಕೆನರಾ ಬ್ಯಾಂಕ ಆರ್ ಸೆಟಿಯ ವಿನಾಯಕ ಚವ್ಹಾಣ ಇದ್ದರು.

‘ಪರಿಸರ ನಾಶದಿಂದ ನೀರಿಗೆ ತತ್ವಾರ’
ಸಿದ್ದಾಪುರ: ‘ಮಲೆನಾಡಿನಲ್ಲಿಯೂ ನೀರಿಗಾಗಿ ಸಂಕಟ ಪಡುವ ಸ್ಥಿತಿ ಎದುರಾಗಿರುವುದಕ್ಕೆ ಪರಿಸರ ನಾಶವೇ ಮುಖ್ಯ ಕಾರಣ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಜೀಜ್ ಶೇಖ್ ಹೇಳಿದರು.

ಅರಣ್ಯ ಇಲಾಖೆಯು, ಗ್ರಾಮ ಅರಣ್ಯ ಸಮಿತಿ ಹಾಗೂ ಸ್ಥಳೀಯರ ಸಹಯೋಗದಲ್ಲಿ ತಾಲ್ಲೂಕಿನ ಸಂಪಗೋಡ ನರ್ಸರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ  ‘ಬೀಜದುಂಡೆ’( ಸೀಡ್‌ಬಾಲ್) ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಸಿದ್ದಾಪುರ ವಲಯ ಅರಣ್ಯಾಧಿಕಾರಿ ಲೋಕೇಶ ಪಾಟಣಕರ್,  ಗಂಜಲ, ಗೊಬ್ಬರ, ಮಣ್ಣಿನ ಹುಡಿಗಳ ಮಿಶ್ರಣದ ಮೂಲಕ  ಬೀಜದುಂಡೆ ತಯಾರಿಸುವ ವಿಧಾನವನ್ನು ತೋರಿಸಿದರು.

ನಿಡಗೋಡ ಉಪವಲಯದ ಅರಣ್ಯಾಧಿಕಾರಿ ಅಶೋಕ ಪೂಜಾರ್, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ  ಲಕ್ಷ್ಮೀ ನಾಯ್ಕ ಹದಿನಾರನೇ ಮೈಲಿಕಲ್‌, ಗಣಪತಿ ನಾಯ್ಕ ತರಳಿ, ಡಿ.ಜಿ.ಭಟ್ಟ ಮುತ್ತಿಗೆ, ಗಂಗಾಧರ   ಗೌಡರ್ ಹೆಗ್ಗೋಡಮನೆ, ವಿವಿಧ ಸ್ವಸಹಾಯ ಸಂಘದ ಸದಸ್ಯರು, ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು. 25 ಜಾತಿಗಳ ಬೀಜ ಹಾಕುವ ಮೂಲಕ ಸುಮಾರು 10 ಸಾವಿರ ಬೀಜದುಂಡೆಗಳನ್ನು ತಯಾರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.