ADVERTISEMENT

ಬೇಡರ ವೇಷಕ್ಕೆ ಬಹುಮಾನ ನೀಡಲು ಒತ್ತಾಯ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಾರ್ವಜನಿಕರಿಂದ ಮನವಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:59 IST
Last Updated 4 ಮಾರ್ಚ್ 2017, 6:59 IST

ಶಿರಸಿ: ಅಪ್ಪಟ ಜನಪದ ಕಲೆಯಾಗಿರುವ ಬೇಡರ ವೇಷ ಪ್ರದರ್ಶನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಹುಮಾನ ವಿತರಿಸುವ ಕ್ರಮ ಜಾರಿಗೆ ಬರಬೇಕು ಎಂಬ ಒತ್ತಾಯ ಶುಕ್ರವಾರ ಇಲ್ಲಿ ನಡೆದ ಹೋಳಿ ಮತ್ತು ಬೇಡರ ವೇಷದ ಪೂರ್ವಭಾವಿ ಶಾಂತಿಸಭೆಯಲ್ಲಿ ವ್ಯಕ್ತವಾಯಿತು.

ದೇಶದಲ್ಲೇ ವಿಶಿಷ್ಟವಾಗಿರುವ ಶಿರಸಿಯ ಬೇಡರ ವೇಷವನ್ನು ಸರ್ಕಾರಿ ಉತ್ಸವಗಳ ಲೋಗೊಗಳಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದು ಗಣಪತಿ ನಾಯ್ಕ ಒತ್ತಾಯಿಸಿದರು. ಮೂಲ ಕಲೆಗೆ ಧಕ್ಕೆಯಾಗದಂತೆ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಶ್ರೀನಿವಾಸ ನಾಯ್ಕ ಒತ್ತಾಯಿಸಿದರು.

ಮುಸ್ಲಿಂ ಮಹಿಳೆಯರು, ವೃದ್ಧರ ಮೇಲೆ ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬಾರದು ಎಂದು ಇಸ್ಮಾಯಿಲ್ ಜುಕಾಕೊ ವಿನಂತಿಸಿದರು. ಪರಮಾನಂದ ಹೆಗಡೆ ಮಾತನಾಡಿ ಕಲೆಯ ಪ್ರದರ್ಶನದ ಸಂದರ್ಭದಲ್ಲಿ ಕಾನೂನು ಕಲೆಗೆ ಪೂರಕವಾಗಿರಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೇಡರ ವೇಷದ ಉತ್ತಮ ಕಲಾವಿದರಿಗೆ ಬಹುಮಾನ ನೀಡುವ ಕೆಲಸ ಆಗಬೇಕು ಎಂದು ರಾಜೇಶ ದೇಶಭಾಗ ಹೇಳಿದರು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮಾತನಾಡಿ,  ಇದೇ 8ರಿಂದ ಪ್ರಾರಂಭವಾಗುವ ಬೇಡರ ವೇಷ ಪ್ರದರ್ಶನದಲ್ಲಿ ಡಿಜೆ, ಸೌಂಡ್‌ ಬಾಕ್ಸ್ ಬಳಕೆ ಮಾಡುವಂತಿಲ್ಲ ಎಂದರು.

ಬೇಡರ ವೇಷ ತಾಲೀಮಿಗೆ ಸಹ ಸಮಯ ನಿರ್ಬಂಧ ಇರಬೇಕು. ಹೋಳಿ ಹಬ್ಬದಂದು ಮಧ್ಯಾಹ್ನ 12 ಗಂಟೆ ಯೊಳಗೆ ಬಣ್ಣ ಎರಚುವ ಕಾರ್ಯ ಪೂರ್ಣಗೊಳಿಸಬೇಕು ಎಂದರು. ಡಿಜೆ, ಸೌಂಡ್‌ ಬಾಕ್ಸ್ ಬಳಕೆ ಮಾಡಬಾರದು ಎಂಬ ನಿಯಮಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು.

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳ ಲಾಗುವುದು ಎಂದು ಡಿವೈಎಸ್ಪಿ ನಾಗೇಶ ಶೆಟ್ಟಿ ಹೇಳಿದರು. ತಹಶೀಲ್ದಾರ್ ಬಸಪ್ಪ ಪೂಜಾರಿ, ಸಿಪಿಐ ಕೃಷ್ಣಾನಂದ ನಾಯಕ ಇದ್ದರು. ಪಿಎಸ್‌ಐ ಇ.ಸಿ. ಸಂಪತ್ ವಂದಿಸಿದರು.

*
ಬೇಡರ ವೇಷಧಾರಿಗಳು ಲೋಹದ ಕತ್ತಿಯ ಬದಲಾಗಿ ಪ್ಲಾಸ್ಟಿಕ್ ಅಥವಾ ಮರದ ಕತ್ತಿ ಬಳಸಬೇಕು.
-ನಾಗೇಶ ಶೆಟ್ಟಿ,
ಡಿವೈಎಸ್ಪಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.