ADVERTISEMENT

ಬೇಡ್ತಿ ಸೇತುವೆ ಕಾಮಗಾರಿ ವಿಳಂಬ: ಆತಂಕ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:41 IST
Last Updated 26 ಮೇ 2018, 13:41 IST
ಯಲ್ಲಾಪುರ ತಾಲ್ಲೂಕಿನ ಬೇಡ್ತಿ ನದಿಗೆ ನಿರ್ಮಿಸುತ್ತಿರುವ ಹೊಸ ಸೇತುವೆ ಕಾಮಗಾರಿ ವಿಳಂಬವಾಗಿದೆ
ಯಲ್ಲಾಪುರ ತಾಲ್ಲೂಕಿನ ಬೇಡ್ತಿ ನದಿಗೆ ನಿರ್ಮಿಸುತ್ತಿರುವ ಹೊಸ ಸೇತುವೆ ಕಾಮಗಾರಿ ವಿಳಂಬವಾಗಿದೆ   

ಯಲ್ಲಾಪುರ: ತಾಲ್ಲೂಕಿನ ಬೇಡ್ತಿ ನದಿಗೆ ನಿರ್ಮಿಸುತ್ತಿರುವ ಹೊಸ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದೆ. ಮಂಚೀಕೇರಿ ಬಳಿ ಪುರಾತನ ಬೇಡ್ತಿ ಸೇತುವೆ ಶಿಥಿಲಗೊಂಡಿದ್ದ ಪರಿಣಾಮ 2016 ಸೆಪ್ಟೆಂಬರ್‌ನಲ್ಲಿ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು.

ಲೋಕೋಪಯೋಗಿ ಇಲಾಖೆಯ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ₹14 ಕೋಟಿ ವೆಚ್ಚದಲ್ಲಿ ಸೇತುವೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ಚಾಲನೆ ಸಿಕ್ಕಿರಲಿಲ್ಲ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು.

170 ಮೀ ಉದ್ದ, 12 ಮೀ ಅಗಲದ ಸೇತುವೆ 6 ಬೃಹತ್ ಕಂಬಗಳು, 2 ದೊಡ್ಡ ಅಟಲ್ಮೆಂಟ್‌ಗಳನ್ನು ಹೊಂದಲಿದೆ. ಕಾಮಗಾರಿ ಗುತ್ತಿಗೆಯನ್ನು ಹುಬ್ಬಳ್ಳಿಯ ಬಿ.ಎಸ್.ಜಿ ಕಂಪನಿ ವಹಿಸಿಕೊಂಡಿದ್ದು, ಕಾಮಗಾರಿ ಮುಗಿಸಲು 18 ತಿಂಗಳು ಕಾಲಾವಧಿ ಪಡೆದಿತ್ತು. ಆದರೆ ಇದುವರೆಗೆ ಕೇವಲ ಕಂಬಗಳು ಮಾತ್ರ ಎದ್ದು ನಿಂತಿವೆ. ಮಳೆಗಾಲಕ್ಕೂ ಮುಂಚೆಯೇ ಸೇತುವೆ ಕಾಮಗಾರಿ ಪೂರ್ಣವಾಗುವ ಲಕ್ಷಣ ಕಾಣುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ADVERTISEMENT

ಶಿಥಿಲಾವಸ್ಥೆಯಲ್ಲಿರುವ ಹಳೆಯ ಸೇತುವೆ ಮೇಲೆಯೇ ಸದ್ಯ ವಾಹನಗಳು ಸಂಚರಿಸುತ್ತಿರುವ ಕಾರಣ ಕುಸಿಯುವ ಭೀತಿ ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸದಿದ್ದರೆ ಅಪಾಯ ಎದುರಾಗಲಿದೆ. ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಕಾಮಗಾರಿ ವೆಚ್ಚ ಅಧಿಕವಾಗಲಿದೆ ಎಂಬ ಮಾತು ಕೇಳಿಬರುತ್ತಿವೆ.

ಬೇಡ್ತಿಗೆ ಜೀವಕಳೆ

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ತಾಲ್ಲೂಕಿನ ಬೇಡ್ತಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿದೆ. ಕಳೆದ 3–4 ತಿಂಗಳಿಂದ ಒಣಗಿದ್ದ ನದಿಯಲ್ಲಿ ನೀರು ಹರಿಯುತ್ತಿರುವುದು ಸ್ಥಳೀಯ
ರನ್ನು ಸಂತ ತಂದಿದೆ. ನೀರಿಲ್ಲದೇ ಒಣಗಿದ್ದ ಮಾಗೋಡ ಜಲಪಾತ ಈಗ ಜೀವಕಳೆ ಪಡೆದುಕೊಂಡಿದೆ.

ಶಿಥಿಲವಾಗಿರುವ ಸೇತುವೆ ಮೇಲೆ ಭಾರದ ವಾಹನಗಳು ಸಂಚರಿಸಿದರೆ ಕುಸಿಯುವ ಸಂಭವ ಇದೆ. ಹೊಸ ಸೇತುವೆ ಕಾಮಗಾರಿ ತ್ವರಿತಗೊಳಿಸಲು ಗುತ್ತಿಗೆದಾರರಿಗೆ ಅಧಿಕಾರಿಗಳು ಸೂಚಿಸಬೇಕು
ಮಂಜುನಾಥ ಹೆಗಡೆ, ಯಲ್ಲಾಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.