ADVERTISEMENT

ಬೈಲೂರು ಅಂಚೆ ಕಚೇರಿಯಲ್ಲಿ ಅವ್ಯವಹಾರ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:41 IST
Last Updated 8 ಫೆಬ್ರುವರಿ 2017, 9:41 IST

ಭಟ್ಕಳ: ತಾಲ್ಲೂಕಿನ ಬೈಲೂರು ಅಂಚೆ ಕಚೇರಿಯಲ್ಲಿ ಠೇವಣಿ ಇಟ್ಟಿದ್ದ ಸಾರ್ವಜನಿಕರ ಹಣವನ್ನು ಸಿಬ್ಬಂದಿಯೊಬ್ಬರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ಅಂಚೆ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಇತ್ತೀಚೆಗೆ ನಡೆದಿದೆ.

ಪ್ರಧಾನ ಮಂತ್ರಿಯ ಮಹತ್ವಾಕಾಂಕ್ಷೆಯ ’ಸುಕನ್ಯ’ಯೋಜನೆಗೆ ಠೇವಣಿ ಸೇರಿದಂತೆ ಆರ್‌ಡಿ, ವಿಮೆ ತುಂಬಲು ಈ ಭಾಗದ ಗ್ರಾಮಸ್ಥರು ಖಾತೆ ತೆರೆದು ಹಣ ಕಟ್ಟಿದ್ದರು. ಆದರೆ ಅಂಚೆ ಕಚೇರಿಯ ಸಿಬ್ಬಂದಿ ಭಾಗ್ಯಶ್ರೀ ಎಂಬುವರು ಹಣವನ್ನು ಪಡೆದುಕೊಂಡು ಅವರ ಖಾತೆಗೆ ಜಮಾ ಮಾಡದೇ, ತಮ್ಮ ಸ್ವಂತಕ್ಕೆ ಬಳಸಿಕೊಂಡು ಕೇವಲ ಪಾಸ್‌ಬುಕ್‌ನಲ್ಲಿ ಬರೆದು ಮುದ್ರೆಯೊತ್ತಿ ಕಳುಹಿಸುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸುಮಾರು ₹15ರಿಂದ 20 ಲಕ್ಷ ಅವ್ಯವಹಾರ ನಡೆದಿದೆ  ಎನ್ನಲಾಗಿದೆ.

ಅಂಚೆ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿ, ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿ, ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಅವ್ಯವಹಾರದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಅಂಚೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಭಾಗ್ಯಶ್ರೀಯನ್ನು ಅಮಾನತುಗೊಳಿಸಿ, ಠೇವಣಿದಾರರ ಪಾಸ್‌ಬುಕ್‌ಗಳ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣನಾಯ್ಕ, ಹಣದ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಬೈಲೂರು ಅಂಚೆ ಇಲಾಖೆಯ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇಲಾಖೆಯ ತನಿಖೆ ಪ್ರಗತಿಯಲ್ಲಿದ್ದು, ಎಷ್ಟು ಹಣದ ಅವ್ಯವಹಾರ ನಡೆದಿದೆ ಎನ್ನುವುದನ್ನು ನಿಖರವಾಗಿ ತಿಳಿದಿಲ್ಲ. ಜನರ ಹಣಕ್ಕೆ ಮೋಸವಾಗಿದ್ದಲ್ಲಿ ಅಂಚೆ ಇಲಾಖೆಯೇ ಈ ಹಣವನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ.

ರಕ್ಷಣಾ ವೇದಿಕೆಯಿಂದ ಮನವಿ: ಸಾರ್ವಜನಿಕರ ಠೇವಣಿ ಹಣ ಅವ್ಯವಹಾರ ಎಸಗಿರುವ ಅಂಚೆ ಇಲಾಖೆಯ ಸಿಬ್ಬಂದಿ ವಜಾಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ಮತ್ತು ಅನ್ಯಾಯಕ್ಕೆ ಒಳಗಾಗಿರುವ ಜನರ ಹಣವನ್ನು ಕೂಡಲೇ ಅವರ ಖಾತೆಗೆ ಜಮಾ ಮಾಡಬೇಕು ಎಂದು ಕನ್ನಡ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದಿಂದ ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿರುವ ಅಧಿಕಾರಿಗಳು ಎರಡು ದಿನ ಸಮಯವನ್ನು ಪಡೆದುಕೊಂಡಿದ್ದಾರೆ.

ಅಲ್ಲದೇ ಅಂಚೆ ಕಚೇರಿಯಲ್ಲಿ ವ್ಯವಹಾರ ನಡೆಸಿದವರು ಅಂಚೆ ಕಚೇರಿಗೆ ತೆರಳಿ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು ಎಂದೂ ರಕ್ಷಣಾ ವೇದಿಕೆ ತಿಳಿಸಿದೆ.

ಕ್ಯಾಂಪಸ್ ಸಂದರ್ಶನ
ಭಟ್ಕಳ:
ಇಲ್ಲಿನ ಗುರು ಸುಧೀಂದ್ರ ಬಿಸಿಎ ಬಿಬಿಎ ಕಾಲೇಜಿನಲ್ಲಿ ಮಂಗಳೂರಿನ ದಿಯಾ ಸಿಸ್ಟಂ ಸಂಸ್ಥೆಯು ಕ್ಯಾಂಪಸ್ ಸಂದರ್ಶನವನ್ನು ನಡೆಸುತ್ತಿದ್ದು, ಕಂಪ್ಯೂಟರ್ ಜ್ಞಾನವಿರುವ ಅನುಭವ ಸಹಿತ, ರಹಿತ ಪದವೀಧದರರು ಹೆಸರನ್ನು ನೊಂದಾಯಿಸಬಹುದು.

ಆನ್‌ಲೈನ್‌ ನೊಂದಣಿ ಅವಶ್ಯಕತೆ ಇದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 8971071471, ಅಥವಾ ದೂರವಾಣಿ 08385-–222061 ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.