ADVERTISEMENT

ಭಾರತದಲ್ಲಿ ರಾಮಾಯಣಕ್ಕೆ ಮೇರು ಸ್ಥಾನ

‘ಶ್ರೀರಾಮ ಚರಿತ’ ಕೊಂಕಣಿ ಮಹಾಕಾವ್ಯ ಬಿಡುಗಡೆಗೊಳಿಸಿದ ಸಾಹಿತಿ ಗೋಪಾಲಕೃಷ್ಣ ಪೈ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 8:49 IST
Last Updated 27 ಮಾರ್ಚ್ 2017, 8:49 IST
ಶಿರಸಿ: ‘ಅಕ್ಷರಾಭ್ಯಾಸಕ್ಕೂ ಮುನ್ನವೇ ಆಂತರ್ಯದಲ್ಲಿ ಶ್ರೀರಾಮನನ್ನು ಆವರಿಸಿಕೊಳ್ಳುವ ಭಾರತೀಯ ಮನಸ್ಥಿತಿಯಲ್ಲಿ ರಾಮಾಯಣಕ್ಕೆ ಮೇರು ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ಕೊಂಕಣಿ ಭಾಷೆಯಲ್ಲಿ ಬಂದಿರುವ ಶ್ರೀರಾಮ ಚರಿತ ಮಹಾಕಾವ್ಯ ಕೂಡ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲಿದೆ’ ಎಂದು ಸಾಹಿತಿ ಗೋಪಾಲಕೃಷ್ಣ ಪೈ ಹೇಳಿದರು.  
 
ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಸಾಹಿತ್ಯ ಪರಿಷತ್ ಹಾಗೂ ಶ್ರೀರಾಮ ಚರಿತ ಕೊಂಕಣಿ ಮಹಾಕಾವ್ಯ ಪ್ರಕಟಣಾ ಸಮಿತಿ ಜಂಟಿಯಾಗಿ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬರಹಗಾರ ವಿಶ್ವನಾಥ ಶೇಟ್ ಅವರು ಷಟ್ಪದಿಯಲ್ಲಿ ರಚಿಸಿದ ಕೊಂಕಣಿ ಭಾಷೆಯ ‘ಶ್ರೀರಾಮ ಚರಿತ’ ಮಹಾಕಾವ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. 
 
ರಾಮಾಯಣ ಪರಿಶುದ್ಧ ಕಾವ್ಯ. ರಾಮ ಜಪ ನಿರಂತರ ಚೇತನವಾಗಿದೆ. ಅಕ್ಷರ ಕಲಿಯುವ ಮುನ್ನವೇ ರಾಮನನ್ನು ಅರಿಯುವ ಕಾರ್ಯ ಭಾರತೀಯ ಜನ ಮಾನಸದಲ್ಲಿದೆ. ನೂರಾರು ಭಾಷೆಯಲ್ಲಿ ಬೆಳೆದ ರಾಮಾಯಣ ಕೊಂಕಣಿ ಭಾಷೆಗೂ ವಿಸ್ತರಿಸಿದ್ದು ವಿಶೇಷವಾಗಿದೆ ಎಂದರು. 
 
ಶ್ರೀರಾಮ ಚರಿತದಲ್ಲಿ ಎಲ್ಲ ಪಾತ್ರಗಳಿಗೂ ನ್ಯಾಯ ಒದಗಿಸಲಾಗಿದ್ದು, ಪರಿಪೂರ್ಣ ಮಹಾಕಾವ್ಯವಾಗಿ ಹೊರ ಹೊಮ್ಮಿದೆ. ಮೂಲ ಸ್ವರೂಪ ಬಿಡದೆ ಬದಲಾಗುತ್ತ ಸಾಗುತ್ತಿರುವ ರಾಮಾ ಯಣ ಮಾನವನ ಅಂತರಂಗದಲ್ಲಿ ಮತ್ತೆ ಮತ್ತೆ ಲೀನವಾಗುತ್ತದೆ. ಇಂತಹ ಪುಸ್ತಕಗಳ ಪೂಜೆ ನಿತ್ಯವೂ ನಡೆಯಬೇಕು ಎಂದು ಹೇಳಿದರು. 
 
ಉದ್ಯಮಿ ಪ್ರದೀಪ ಪೈ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಕೊಂಕಣಿ ಪರಿಷತ್ ರಚನೆಯ ಮೂಲಕ ಕೊಂಕಣಿ ಗರ ಸಮಗ್ರ ಏಳ್ಗೆ ಸಾಧಿಸಲಾಗುತ್ತಿದೆ ಎಂದರು. ಸಮಾಜಕ್ಕೆ ದಾರಿದೀಪವಾದ ಶ್ರೀರಾಮ ಚರಿತದಂತಹ ಗ್ರಂಥಗಳ ಲೋಕಾರ್ಪರ್ಣೆಗೆ ಸಹಕರಿಸುವ ಮೂಲಕ ಕೊಂಕಣಿ ಭಾಷೆ ಬೆಳವಣಿಗೆ, ಪ್ರಚಾರ ಹಾಗೂ ವಿಸ್ತಾರತೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು. 
 
‘ಶ್ರೀರಾಮ ಚರಿತ ದರ್ಶನ‘ ಸ್ಮರಣ ಸಂಚಿಕೆಯನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಿಡುಗಡೆಗೊಳಿಸಿದರು. ಸಾಹಿತ್ಯ ಹಾಗೂ ಭಾಷೆಗೆ ಸಮಾಜವನ್ನು ಒಗ್ಗೂಡಿ ಸುವ ಶಕ್ತಿಯಿದೆ. ಉತ್ತಮ ಕಾವ್ಯ ಶ್ರೇಷ್ಠ ಭಾಷೆಯಲ್ಲಿ ಮೂಡಿ ಬಂದರೆ ಸಮಾಜ ದಲ್ಲಿ ಸದಾ ನೆಲೆ ನಿಲ್ಲುತ್ತದೆ ಎಂದರು.  
 
ಸಾಹಿತಿ ಶಾ.ಮಂ. ಕೃಷ್ಣರಾಯ ಮಾತನಾಡಿ, ಮಹಾಕಾವ್ಯಗಳು ಇಲ್ಲದ ಭಾಷೆ ಶ್ರೀಮಂತ ಪರಂಪರೆ ಹೊಂದಲು ಸಾಧ್ಯವಿಲ್ಲ. ದಶಕಗಳ ತಾಳ್ಮೆ ಹಾಗೂ ಸಾಧನೆಯ ಫಲವಾಗಿ ಹೊರಬಂದ ಶ್ರೀ ರಾಮಚರಿತ ಗ್ರಂಥ ಸೇರ್ಪಡೆಯಿಂದ ಕೊಂಕಣಿ ಭಾಷೆಗೆ ಶ್ರೇಷ್ಠತೆ ಬಂದಿದೆ. ಆ ಮೂಲಕ ಕೊಂಕಣಿ ಸಾಹಿತ್ಯದಲ್ಲಿ ಸಾರ್ವ ಕಾಲಿಕ ಇತಿಹಾಸ ನಿರ್ಮಾಣವಾಗಿದೆ ಎಂದರು. 
 
ಸಾಹಿತಿ ಪ್ರೊ. ಕೃಷ್ಣದಾಸ ಭಟ್ಟ ಕೃತಿ ಪರಿಚಯಿಸಿದರು. ಕಾರ್ಯಕ್ರಮದ ಅಂಗವಾಗಿ ಕೃತಿಕಾರ ವಿಶ್ವನಾಥ ಶೇಟ್ ಹಾರ್ಸಿಕಟ್ಟಾ, ಪ್ರೊ.ಕೆ.ಎ.ಭಟ್ಟ ಸಿದ್ದಾಪುರ ಹಾಗೂ ಸಾಹಿತಿ ಶಾ.ಮಂ.ಕೃಷ್ಣರಾಯ ಅವರನ್ನು ಸನ್ಮಾನಿಸಲಾಯಿತು. 
 
ಜಿಲ್ಲಾ ಕೊಂಕಣಿ ಸಾಹಿತ್ಯ ಪರಿಷದ್ ಗೌರವಾಧ್ಯಕ್ಷ ಡಾ.ವಿ.ಎಸ್.ಸೋಂದೆ, ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ರಾಮರಾವ್ ರಾಯ್ಕರ್, ದೈವಜ್ಞ ಸಹಕಾರಿ ಸಂಘದ ಅಧ್ಯಕ್ಷ ಎ. ಸುಬ್ಬರಾವ್, ಉದ್ಯಮಿ ರವೀಂದ್ರ ನಾಯಕ, ವೈದ್ಯ ರಾಘವೇಂದ್ರ ಕಾಮತ್, ಪ್ರಮುಖರಾದ ಸಂಧ್ಯಾ ಕುರ್ಡೇಕರ ಹಾಗೂ ಇದ್ದರು. ಸೂರಜ್ ರಾಣಿ ಪ್ರಭು ಪ್ರಾರ್ಥಿಸಿದರು.

ಎಂ.ಎಸ್.ಪ್ರಭು ಸ್ವಾಗತಿಸಿದರು. ಪ್ರಸನ್ನ ಪ್ರಭು ನಿರೂಪಿ ಸಿದರು. ನಿತಿನ್ ಕಾಸರಕೋಡ ವಂದಿಸಿ ದರು.  ಸಭಾ ಕಾರ್ಯಕ್ರಮಕ್ಕೂ ಮುನ್ನ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಶ್ರೀ ರಾಮಚರಿತ ಗ್ರಂಥವನ್ನು ಪಲ್ಲಕ್ಕಿಯಲ್ಲಿಟ್ಟು ಶೋಭಾಯಾತ್ರೆ ನಡೆಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.