ADVERTISEMENT

ಮಕ್ಕಳಿಗೆ ಕಲಿಕೆ; ಜನರಿಗೆ ನೀಗುವ ಬಾಯಾರಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:29 IST
Last Updated 23 ಮೇ 2017, 9:29 IST
ಶಿರಸಿಯ ಬನವಾಸಿ ರಸ್ತೆಯಲ್ಲಿ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿನಿಯರು ಜ್ಯೂಸ್ ವ್ಯಾಪಾರ ಮಾಡುತ್ತಿರುವುದು
ಶಿರಸಿಯ ಬನವಾಸಿ ರಸ್ತೆಯಲ್ಲಿ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿನಿಯರು ಜ್ಯೂಸ್ ವ್ಯಾಪಾರ ಮಾಡುತ್ತಿರುವುದು   

ಶಿರಸಿ: ನಗರದ ಬನವಾಸಿ ರಸ್ತೆಯಲ್ಲಿ ‘ಜ್ಯೂಸ್ ಬೇಕಾ ಬನ್ನಿ ಬನ್ನಿ’ ಎಂದು ಸಮವಸ್ತ್ರ ಧರಿಸಿದ ಕಾಲೇಜು ವಿದ್ಯಾರ್ಥಿಗಳು ನೀಡುವ ಕರೆಗೆ ಕಾರಿನಲ್ಲಿ ಬರುವವರು, ಬೈಕ್‌ನಲ್ಲಿ ಸಾಗುವವರು. ಪಾದಚಾರಿಗಳು ಕ್ಷಣ ಹೊತ್ತು ನಿಂತು ತಂಪಾದ ಹಣ್ಣಿನ ಜ್ಯೂಸ್ ಕುಡಿದು ಮುಂದೆ ಹೋಗುತ್ತಾರೆ.

ನಗರದ ತೋಟಗಾರಿಕಾ ಕಾಲೇಜಿನ ಪದವಿ ಅಂತಿಮ ವರ್ಷದಲ್ಲಿ ತರಕಾರಿ ಮತ್ತು ಹಣ್ಣು ಸಂಸ್ಕರಣೆ. ಮೌಲ್ಯವರ್ಧನೆಯ ವಿಭಾಗ ಆಯ್ದುಕೊಂಡಿರುವ ವಿದ್ಯಾರ್ಥಿಗಳು ಪ್ರಾಯೋಗಿಕ ಅಧ್ಯಯನಕ್ಕೆ ಇಳಿದಿದ್ದಾರೆ. ಮಾರುಕಟ್ಟೆಯ ನಾಡಿಮಿಡಿತ ಅರಿತುಕೊಂಡು ಜ್ಯೂಸ್ ತಯಾರಿಕೆ ಆರಂಭಿಸಿದ್ದಾರೆ. ಕಲ್ಲಂಗಡಿ, ಲಿಂಬು, ಮಾವಿನಹಣ್ಣು, ಪಪ್ಪಾಯಿ, ಕೋಕಂ ಜ್ಯೂಸ್‌ಗಳನ್ನು ಸಿದ್ಧಪಡಿಸಿಕೊಂಡು ಬಾಟಲಿಯಲ್ಲಿ ತಂದಿಟ್ಟು ಮಾರಾಟ ಮಾಡುತ್ತಾರೆ.

ಹಳೆ ಬಸ್‌ನಿಲ್ದಾಣದ ಆವರಣ, ಮಾರಿಕಾಂಬಾ ದೇವಾಲಯ, ಕಾಲೇಜು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಟ್ರೈಗಳಲ್ಲಿ ಜ್ಯೂಸ್ ಬಾಟಲಿ ಇಟ್ಟು ಗ್ರಾಹಕರನ್ನು ಸೆಳೆಯುತ್ತಾರೆ. ‘ತೋಟಗಾರಿಕಾ ಪದವಿಯ ಅಂತಿಮ ವರ್ಷದಲ್ಲಿ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗುವ ಪ್ರಾಯೋಗಿಕ ತರಬೇತಿ ಇರುತ್ತದೆ. ತರಕಾರಿ ಮತ್ತು ಹಣ್ಣು ಸಂಸ್ಕರಣೆ.

ADVERTISEMENT

ಮೌಲ್ಯವರ್ಧನೆಯ ವಿಭಾಗ ಆಯ್ದುಕೊಂಡ 11 ವಿದ್ಯಾರ್ಥಿಗಳಿದ್ದಾರೆ. ನಾವು ಪ್ರತಿದಿನ ಬೆಳಿಗ್ಗೆ 8.30ರಿಂದ 11 ಗಂಟೆಯವರೆಗೆ ಎಲ್ಲರೂ ಸೇರಿ ವಿವಿಧ ಬಗೆಯ ಜ್ಯೂಸ್ ಸಿದ್ಧಪಡಿಸುತ್ತೇವೆ. ನಂತರ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಮಧ್ಯಾಹ್ನದವರೆಗೆ ಅಲ್ಲಲ್ಲಿ ಪ್ರತ್ಯೇಕ ತಂಡಗಳಾಗಿ ನಿಂತು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿನಿ ಅಕ್ಷತಾ ಪಿ.ಎಂ.

‘ಮಾರುಕಟ್ಟೆಯಿಂದ ತಾಜಾ ಹಣ್ಣನ್ನು ತಂದು ಸಿದ್ಧಪಡಿಸುವ ಜ್ಯೂಸ್‌ಗೆ ನಾವು ರಾಸಾಯನಿಕ, ಸಂರಕ್ಷಕ (ಪ್ರಿಸರ್ವೇಟಿವ್), ಕೃತಕ ಬಣ್ಣ ಬಳಸುವುದಿಲ್ಲ. ಕೇವಲ ₹ 10 ಬಾಟಲಿಯ ತಾಜಾ ತಂಪು ಪಾನೀಯವನ್ನು ಜನರು ಖುಷಿಯಿಂದ ಖರೀದಿಸುತ್ತಾರೆ’ ಎಂದು ಮೇಘಾ ಕೆ. ಹೇಳಿದರು.

‘ಪ್ರತಿದಿನ ಸುಮಾರು 250 ಬಾಟಲಿ ಜ್ಯೂಸ್ ತಯಾರಿಸುತ್ತೇವೆ. ಮೂರ್ನಾಲ್ಕು ಕಡೆಗಳಲ್ಲಿ ವ್ಯಾಪಾರ ಮಾಡುವುದರಿಂದ ಬಹುತೇಕ ಎಲ್ಲ ಖಾಲಿಯಾಗುತ್ತವೆ. ಕಳೆದ ಒಂದು ತಿಂಗಳಿನಿಂದ ದಿನವೂ ಜ್ಯೂಸ್ ಮಾರಾಟ ಮಾಡುತ್ತಿದ್ದೇವೆ. ನಾವು ಸಿದ್ಧಪಡಿಸುವ ಜ್ಯೂಸ್ ಗ್ರಾಹಕರ ಮನಗೆದ್ದಿದೆ’ ಎಂದು ಪವಿತ್ರಾ ಜಿ ಹೇಳಿದರು.

‘ಎರಡು ದಿನಗಳಿಂದ ನಗರದಲ್ಲಿ ಬಿಸಿಲಿನ ಪ್ರಖರತೆ ಗಾಢವಾಗಿದೆ. ಮನೆ ಹೊರಬಿದ್ದರೆ ಬಿಸಿಲಿನ ಧಗೆಗೆ ಬಾಯಾರಿಕೆಯಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಿಂತು ಜ್ಯೂಸ್ ಮಾರಾಟ ಮಾಡುವುದನ್ನು ಕಂಡು ಖುಷಿಯಾಗಿ ಇಲ್ಲಿಯೇ ಬಂದು ಪಪ್ಪಾಯಿ ಜ್ಯೂಸ್ ಕುಡಿದೆ’ ಎಂದು ಗ್ರಾಹಕ ಪರಮೇಶ್ವರ ಪ್ರತಿಕ್ರಿಯಿಸಿದರು.

* *

ಪದವಿ ಪೂರೈಸಿದ ಮೇಲೆ ಉದ್ಯೋಗ ಸಿಗದಿದ್ದರೆ ಸ್ವ ಉದ್ಯೋಗ ನಡೆಸುವ ತಂತ್ರಗಾರಿಕೆ, ಬೇಡಿಕೆಯನ್ನು ಜ್ಯೂಸ್ ಮಾರಾಟ ಪ್ರಕ್ರಿಯೆಯಿಂದ ನಾವು ಕಲಿತಿದ್ದೇವೆ
ಅಕ್ಷತಾ ಪಿ.ಎಂ  ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.