ADVERTISEMENT

‘ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:24 IST
Last Updated 23 ಮೇ 2017, 9:24 IST

ಕಾರವಾರ: ‘ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾನೆ. ಇಂಥ ಪರಿಸ್ಥಿತಿ ಮುಂದುವರಿದರೆ ಜೀವಿಗಳ ಸರ್ವನಾಶ ನಮ್ಮ ಕಣ್ಣೆದುರೆ ನಡೆಯಲಿದೆ’ ಎಂದು ಗೋವಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ್‌ ಪವಾರ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಹಾಗೂ ವಿಜ್ಞಾನ ಮಾದರಿ ತಯಾರಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.

‘ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ಕಾಳಜಿ ಹೊಂದುವುದು ಅತೀ ಮುಖ್ಯ. ನಮ್ಮ ದೈನಂದಿನ ಜೀವನ ದಲ್ಲಿ ಕೆಲವೊಂದು ಕ್ರಮಗಳನ್ನು ಅನು ಸರಿಸಿದರೆ ಅದೇ ಪರಿಸರದ ಉಳಿವಿಗೆ ಸಹಾಯಕವಾಗುತ್ತದೆ’ ಎಂದರು.

ADVERTISEMENT

ವಲಯ ಅರಣ್ಯಾಧಿಕಾರಿ ಕೆ.ಡಿ. ನಾಯ್ಕ ಮಾತನಾಡಿ, ‘ಪ್ರತಿಯೊಂದು ಮಗುವು ತಮ್ಮ ಮನೆಯ ಅಥವಾ ಶಾಲಾ ಆವರಣದಲ್ಲಿ ಒಂದು ಗಿಡ ನೆಟ್ಟು ಪರಿಸರದ ರಕ್ಷಣೆಗೆ ಕೈಜೋಡಿಸಬೇಕು. ಇದಕ್ಕೆ ಗಿಡಗಳನ್ನು ಉಚಿತವಾಗಿ ನೀಡು ವುದರ ಮೂಲಕ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ’ ಎಂದರು.

ಬಹುಮಾನ ವಿತರಣೆ: ಜೀವವೈವಿಧ್ಯ ದಿನಾಚರಣೆಯ ನಿಮಿತ್ತ ಆಯೋಜಿಸ ಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನ ವಿತರಣೆ ಮಾಡಲಾಯಿತು. ಕಾರವಾರದ ಸೇಂಟ್ ಜೋಸೆಫ್‌ ಶಾಲೆ ವಿದ್ಯಾರ್ಥಿನಿ- ಸುಪ್ರಿಯಾ ತೆಂಡೂಲ್ಕರ ಪ್ರಥಮ, ಬಾಲ ಮಂದಿರ ಪ್ರೌಢಶಾಲೆಯ ಅನನ್ಯ ಡಿ. ನಾಯ್ಕ ದ್ವಿತೀಯ, ಸೇಂಟ್ ಮೈಕಲ್ಸ್ ಹೈಸ್ಕೂಲ್‌ನ ರಾಜ ಎಸ್.ತಳೇಕರ ತೃತಿಯ ಹಾಗೂ ಸೇಂಟ್ ಜೋಸೆಫ್‌ ಶಾಲೆಯ ಮೋಹಿತ್ ನಾಗೇಕರ್‌ಗೆ ಸಮಾಧಾನಕರ ಬಹುಮಾನ ದೊರೆಯಿತು.
ವಿದ್ಯಾರ್ಥಿ ಶ್ರೇಯಸ್ ನಾಯಕ ವಿಜ್ಞಾನ ಮಾದರಿ ತಯಾರಿಕಾ ಶಿಬಿರದ ವರದಿ ವಾಚಿಸಿದರು.

ಸೂರಜ ಕಾಮತ ಹಾಗೂ ಬಿ.ಎನ್.ನಮಿತಾ ಜೀವ ವೈವಿಧ್ಯದ ಕುರಿತು ವಿವರಿಸಿದರು. ಸಿಂಧು ನಾಯ್ಕ ಸ್ವಾಗತಿಸಿದರು. ಪೂಜಾ ಗಾಂವ್ಕರ ಹಾಗೂ ಆರ್ಯಾ ಭಕ್ತಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಹನಾ ನಾಯ್ಕ ವಂದಿಸಿದರು.

ಜಿಲ್ಲಾ ವಿಜ್ಞಾನ ಕೇಂದ್ರದ ಹಿರಿಯ ಸದಸ್ಯ ಅನಂತ ರಾಯ್ಕರ, ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ಪಿ.ಎಚ್. ಪೇಲಣ್ಣವರ್, ಕೆನರಾ ಬ್ಯಾಂಕ್‌ನ ನಿವೃತ್ತ ಹಿರಿಯ ವ್ಯವಸ್ಥಾಪಕ ಎನ್.ಜಿ.ನಾಯಕ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಮತ್ತೊಂದು ವಿಜ್ಞಾನ ಕೇಂದ್ರ: ಕಳವಳ
‘ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವನ್ನು ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ. 150ಕ್ಕೂ ಅಧಿಕ ಅಜೀವ ಸದಸ್ಯತ್ವ ಹೊಂದಿರುವ, 100ಕ್ಕೂ ಅಧಿಕ ವಿದ್ಯಾ ಸಂಸ್ಥೆಗಳನ್ನು ಒಳಗೊಂಡಿರುವ ಕೇಂದ್ರವು ಯಾವುದೇ ಫಲಾಪೇಕ್ಷೆ ಇಲ್ಲದೇ, ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತ ಅಧ್ಯಯನಕ್ಕೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ.

ಆದರೆ ಜಿಲ್ಲಾಡಳಿತ ಜಿಲ್ಲೆಯಲ್ಲಿ ಮತ್ತೊಂದು ಕೇಂದ್ರವನ್ನು ಸ್ಥಾಪನೆ ಮಾಡಲು ತಯಾರಿ ನಡೆಸಿದೆ. ಈಗಾಗಲೇ ಸಿಬ್ಬಂದಿ ನೇಮಕಕ್ಕೆ ಸಂದರ್ಶನ ಕೂಡ ನಡೆದಿದೆ. ಹೀಗಾಗಿ ವಿಜ್ಞಾನ ಕೇಂದ್ರದ ಕಟ್ಟಡದಲ್ಲಿ ಇದೇ ಕೊನೆಯ ಕಾರ್ಯಕ್ರಮ ಇರಬಹುದು’ ಎಂದು ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ವಿ.ಎನ್.ನಾಯಕ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.