ADVERTISEMENT

ಮಳೆಗಾಲಕ್ಕೆ ನಗರಸಭೆಯ ಸಿದ್ಧತೆ ಆರಂಭ

9 ಮಂದಿ ಪೌರಕಾರ್ಮಿಕರ ಮೂರು ತಂಡ ರಚನೆ: ವಿವಿಧೆಡೆ ಚರಂಡಿ ಸ್ವಚ್ಛ

​ಪ್ರಜಾವಾಣಿ ವಾರ್ತೆ
Published 26 ಮೇ 2018, 13:38 IST
Last Updated 26 ಮೇ 2018, 13:38 IST
ಕಾರವಾರ ನಗರ ವ್ಯಾಪ್ತಿಯಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಿರುವುದು
ಕಾರವಾರ ನಗರ ವ್ಯಾಪ್ತಿಯಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಿರುವುದು   

ಕಾರವಾರ: ಮಳೆಗಾಲ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ನಡುವೆ ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಇಲ್ಲಿನ ನಗರಸಭೆ ಸಿದ್ಧತೆ ಆರಂಭಿಸಿದೆ.

ತಲಾ 9 ಮಂದಿ ಪೌರಕಾರ್ಮಿಕರ ಮೂರು ತಂಡಗಳು ನಗರ ವ್ಯಾಪ್ತಿಯ ವಿವಿಧೆಡೆಯ ಚರಂಡಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಇದೇ ಕಾರ್ಯಕ್ಕಾಗಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಆದರೆ, ಅದರ ನಂತರವೂ ಯಾವುದೇ ಗುತ್ತಿಗೆದಾರರು ಟೆಂಡರ್ ಪಡೆಯಲು ಮುಂದಾಗದ ಕಾರಣ ನಗರಸಭೆಯ ಸಿಬ್ಬಂದಿಯೇ ತಂಡಗಳನ್ನು ರಚಿಸಿ, ಸ್ವಚ್ಛತಾ ಕಾರ್ಯ ಶುರು ಮಾಡಿಸಿದ್ದಾರೆ.

ಅಧಿಕಾರಗಳ ಗಮನಕ್ಕೆ ಕೆಲಸದ ವಿವರ:  ‘ನಗರ ವ್ಯಾಪ್ತಿಯಲ್ಲಿ ಶುರು ಮಾಡಿರುವ ಮಳೆಗಾಲದ ಪೂರ್ವದ ಚರಂಡಿ ಸ್ವಚ್ಛತಾ ಕಾರ್ಯದ ಬಗ್ಗೆ ಅಧಿಕಾರಿಗಳು ಸಹ ನಿಗಾ ಇಟ್ಟಿದ್ದಾರೆ. ಕೆಲಸ ನಡೆಯುವ ಸ್ಥಳಕ್ಕೆ ವಿವಿಧ ಹಂತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜತೆಗೆ, ಕೆಲಸದ ಪ್ರಗತಿಯ ಕುರಿತು ವಾಟ್ಸ್‌ಆ್ಯಪ್‌ ಮೂಲಕ ಫೋಟೊ ಸಮೇತ ಮಾಹಿತಿ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ನಗರಸಭೆಯ ಪರಿಸರ ಅಧಿಕಾರಿ ಮಲ್ಲಿಕಾರ್ಜುನ.

ADVERTISEMENT

ರಸ್ತೆಯ ಮೇಲೆಯೇ ಹೂಳು?:  ‘ನಗರಸಭೆಯವರು ಚರಂಡಿ ಸ್ವಚ್ಛ ಮಾಡುವ ಕಾರ್ಯವನ್ನು ಮಳೆಗಾಲಕ್ಕೂ ಪೂರ್ವ ಕೈಗೊಂಡಿದ್ದಾರೆ ನಿಜ. ಆದರೆ, ಚರಂಡಿಯಿಂದ ಎತ್ತಿದ ಹೂಳನ್ನು ರಸ್ತೆ ಪಕ್ಕದಲ್ಲೆ ಇಡುತ್ತಾರೆ. ವಾರ ಕಳೆದರೂ ಅದನ್ನು ಬೇರೆಡೆ ಸಾಗಿಸುವುದಿಲ್ಲ. ಇದರಿಂದ ಸುತ್ತಲಿನ ಪ್ರದೇಶಗಳಿಗೆ ವಾಸನೆ ಹರಡುವುದಲ್ಲದೆ ವಾಹನಗಳ ಸಂಚಾರಕ್ಕೂ ಸಂಚಕಾರ ತಂದೊಡ್ಡುತ್ತದೆ. ಜತೆಗೆ, ಅದು ಮರಳಿ ಚರಂಡಿಗಳಿಗೇ ಬೀಳುತ್ತದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರವೀಂದ್ರ.

ಈ  ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಮೋಹನರಾಜ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಚರಂಡಿಯಿಂದ ಕಸ– ಕಡ್ಡಿಗಳನ್ನು ಎತ್ತಿ ರಸ್ತೆಯ ಬದಿಗೆ ಇಡುವುದು ನಿಜ. ಕಾರಣ, ಅವನ್ನು ಅಲ್ಲಿಂದ ತೆಗೆದಾಗ ಒದ್ದೆಯಾಗಿರುತ್ತವೆ. ಈ ವೇಳೆ ವಾಹನದಲ್ಲಿ ಸಾಗಿಸಿದರೆ ರಸ್ತೆಯಲ್ಲೆಲ್ಲ ಕೆಸರು ಚೆಲ್ಲುತ್ತವೆ. ಹೀಗಾಗಿ ಅವು ಒಣಗಿದ ಬಳಿಕ ಸಾಗಾಟ ಮಾಡಲಾಗುತ್ತದೆ’ ಎಂದರು.

ಕೋಣೆನಾಲ ಸ್ವಚ್ಛತೆ ಪ್ರಗತಿಯಲ್ಲಿ: ‘ನಗರದ ಕೋಣೆನಾಲಾದಲ್ಲಿ ಸದ್ಯ ಹೂಳಿಗಿಂತಲೂ ಕಸ– ಕಡ್ಡಿಗಳೇ ಹೆಚ್ಚಿವೆ. ಅವುಗಳನ್ನು ಸ್ವಚ್ಛ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಮಳೆಗಾಲಕ್ಕೂ ಪೂರ್ವವೇ ಅವುಗಳನ್ನು ಖಾಲಿ ಮಾಡಿಸಲು ಕ್ರಮ ವಹಿಸಲಾಗುವುದು’ ಎನ್ನುತ್ತಾರೆ ಅವರು.

ಕಂಡಲ್ಲಿ ಕಸ ಎಸೆದರೆ ದಂಡ?

ಕಂಡ ಕಂಡಲ್ಲಿ ಕಸ ಎಸೆಯುವವರಿಗೆ ನೋಟಿಸ್ ಅಥವಾ ದಂಡವನ್ನು ವಿಧಿಸಲು ಪ್ರತಿ ವಾರ್ಡ್‌ಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮೋಹನರಾಜ್ ತಿಳಿಸಿದರು. ಅವರು ವಾರದಲ್ಲಿ ಕನಿಷ್ಠ ಎರಡು ದಿನವಾದರೂ ಆ ವಾರ್ಡ್‌ನಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಬಗ್ಗೆ ಗಮನ ಹರಿಸಲಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ಒಬ್ಬರಿಗಾದರೂ ನೋಟಿಸ್ ಅಥವಾ ದಂಡ ಬಿದ್ದಲ್ಲಿ ತನ್ನಷ್ಟಕ್ಕೆ ಜನ ಬದಲಾವಣೆಯಾಗಲಿದ್ದಾರೆ ಎನ್ನುತ್ತಾರೆ ಅವರು.

**
ಕೋಣೆನಾಲಾದ ನೀರು ಶುದ್ಧೀಕರಿಸಿ ಸಮುದ್ರಕ್ಕೆ ಬಿಡಲು ₹73 ಲಕ್ಷದ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಮುಂಬೈ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲು ಕಾಯುತ್ತಿದ್ದೇವೆ
ಮೋಹನರಾಜ್, ನಗರಸಭೆಯ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.