ADVERTISEMENT

ಮಳೆ: ಜಲಪಾತಗಳಿಗೆ ಈಗ ಹರೆಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 7:29 IST
Last Updated 21 ಜುಲೈ 2017, 7:29 IST
ಸಿದ್ದಾಪುರ ತಾಲ್ಲೂಕಿನ ಹದಿನಾರನೇ ಮೈಲ್‌ಕಲ್ ಸಮೀಪವಿರುವ ತುಂಬರಗೋಡ ಜಲಪಾತ
ಸಿದ್ದಾಪುರ ತಾಲ್ಲೂಕಿನ ಹದಿನಾರನೇ ಮೈಲ್‌ಕಲ್ ಸಮೀಪವಿರುವ ತುಂಬರಗೋಡ ಜಲಪಾತ   

ಸಿದ್ದಾಪುರ: ಮಲೆನಾಡಿನಲ್ಲಿ  ಮಳೆ ಸುರಿ ದಾಗ ಎಲ್ಲೆಲ್ಲೋ ಜಲಪಾತಗಳು ಮೂಡಿ ಬಿಡುತ್ತವೆ.  ಈ ರೀತಿಯ ‘ಮಳೆ ಜಲಪಾತ’ಗಳೊಂದಿಗೆ ಎಲ್ಲ ಕಾಲದ ಲ್ಲಿಯೂ ಇರುವ ದೊಡ್ಡ ಜಲಪಾತಗಳ ಸೊಬಗೂ ಮಳೆಗಾಲದಲ್ಲಿ ಹೆಚ್ಚಾಗುತ್ತದೆ. ಸಿದ್ದಾಪುರ ತಾಲ್ಲೂಕಿನಲ್ಲಿಯೂ ಹಲ ವೆಡೆ ಮಳೆಗಾಲದಲ್ಲಿ ಮಳೆ ಜಲಪಾತ ಗಳು ಕಾಣಸಿಗುತ್ತವೆ.

ಬೇಸಿಗೆಯಲ್ಲಿ ಕೇವಲ ಕಲ್ಲಿನ ಬಂಡೆಯಾಗಿದ್ದ ಕಡಿದಾದ ಸ್ಥಳದಿಂದ ನೀರು ಧುಮ್ಮಿಕ್ಕತೊಡಗುತ್ತದೆ. ರಸ್ತೆ ಬದಿಯಲ್ಲಿ ಇಂತಹ ಹಾಲು ಬಿಳು­ಪಿನ ಜಲಧಾರೆ ಕಂಡರೆ ದಾರಿಹೋಕರು ಕ್ಷಣಕಾಲ ನಿಲ್ಲಲೇ ಬೇಕಾಗುತ್ತದೆ.

ಶಿರಸಿ–ಸಿದ್ದಾಪುರ ಕಡೆಯಿಂದ  ಜೋಗ ಜಲಪಾತ ನೋಡಲು ಹೋಗು­ವ­ವರಿಗೆ ತಾಲ್ಲೂಕಿನ ಮಾವಿನ­ಗುಂಡಿ­ಗಿಂತ (ಸಿದ್ದಾಪುರದಿಂದ ಸುಮಾರು 17 ಕಿ.ಮೀ ದೂರ) ಸ್ವಲ್ಪ ಹಿಂದೆ ಇಂತಹ ಒಂದು ಜಲಪಾತ ಕಾಣಿಸುತ್ತದೆ. ಈ ಜಲಪಾತಕ್ಕೆ ಬಹುಶಃ ಹೆಸರು ಇದ್ದಿರಲಾರದು. ಆದರೆ ಮಳೆಗಾಲದಲ್ಲಿ ಈ ಜಲಪಾತದ ನೀರಿಗೆ ತಲೆ, ಮೈ ಒಡ್ಡಿದ ಜನರು ಮಾತ್ರ ಇಲ್ಲಿ ಕಾಣುತ್ತಾರೆ. ಸುಮಾರು ಇಪ್ಪತ್ತೈದು ಅಡಿ ಎತ್ತರದಿಂದ ಒಂದೇ ಧಾರೆಯಾಗಿ,  ಎರಡು ಹಂತದಲ್ಲಿ ಬೀಳುವ ಈ ಜಲಪಾತದ ತೊರೆ ಚಿಕ್ಕದು. 

ADVERTISEMENT

ಆದರೆ ನೀರು ಮಾತ್ರ ಶುಭ್ರ. ರಸ್ತೆಯ ಪಕ್ಕದಲ್ಲಿಯೇ ಬೀಳುವ ಈ ಜಲಪಾತ ರಸ್ತೆಯ ಅಡಿಯಲ್ಲಿ ಮೊರಿಯೊಳಗಿಂದ ಹೊರಕ್ಕೆ ಸಾಗಿ, ಕಾಡಿನಲ್ಲಿ ಕಣ್ಮರೆಯಾಗುತ್ತದೆ.  ಮಳೆಗಾಲ ಮುಗಿದ ನಂತರವೂ ಕೆಲವು ತಿಂಗಳುಗಳ ಕಾಲ ಸಣ್ಣ ಧಾರೆಯಾಗಿ ಬೀಳುವ ಈ ಜಲಪಾತ ಬೇಸಿಗೆಯ ಹೊತ್ತಿಗೆ ಮಾಯವಾಗುತ್ತದೆ.

ಸಿದ್ದಾಪುರದಿಂದ ಶಿರಸಿಗೆ ಸಾಗುವ ಮುಖ್ಯ  ರಸ್ತೆಯ ಪಕ್ಕದಲ್ಲಿ (ಸಿದ್ದಾಪುರ­ದಿಂದ 10 ಕಿ.ಮೀ ದೂರದಲ್ಲಿ) ಹದಿನಾ­ರನೇ ಮೈಲ್‌ಕಲ್‌ಗಿಂತ  ಸ್ವಲ್ಪಹಿಂದೆ ತುಂಬರಗೋಡ ಎಂಬ ಸ್ಥಳದಲ್ಲಿ ಇಂತಹದ್ದೇ ಮತ್ತೊಂದು ಜಲಪಾತವಿದೆ. ಇದು ಮಾತ್ರ ಅಪ್ಪಟ ಮಳೆಗಾಲದ ಜಲಪಾತ.  ಈ ಜಲಪಾತ ಒಂದು ದೃಷ್ಟಿಯಿಂದ ಮನುಷ್ಯ ನಿರ್ಮಿತ­ವಾದುದು.

ಈ ಸ್ಥಳದಲ್ಲಿ ಮೊದಲು  ಕರಿ ಕಲ್ಲು ತೆಗೆಯಲಾಗುತ್ತಿತ್ತು. ಹಾಗೆ ಕಲ್ಲು ತೆಗೆದಿದ್ದರಿಂದ ಕಡಿದಾದ ಗೋಡೆ ನಿರ್ಮಾಣಗೊಂಡು, ಮಳೆಗಾಲದಲ್ಲಿ ಗುಡ್ಡದ ಮೇಲಿನಿಂದ ಹರಿದ ನೀರು ಇಲ್ಲಿ ಜಲಪಾತ   ನಿರ್ಮಿಸಿದ್ದು ವಿಶೇಷ. ಈ ಜಲಪಾತವನ್ನು ದೂರದಿಂದ ಸವಿಯ­ಬೇಕು. ಜಲಪಾತದ ಸಮೀಪಕ್ಕೆ ಹೋಗುವ ಸಾಹಸಕ್ಕೆ ಕೈಹಾಕಕೂಡದು.

ತಾಲ್ಲೂಕಿನ ಹಲಗೇರಿ ಸಮೀಪದ ಹುಸೂರು ಅಣೆಕಟ್ಟೆಯಿಂದ ಹೊರಗಡೆ ಹರಿಯುವ ನೀರು ಕೂಡ ಜಲಪಾತವೇ ಆಗುತ್ತದೆ. ‘ಈ ಬಾರಿ ಮಳೆಗಾಲ ಉತ್ತಮ­ವಾಗಿರುವುದರಿಂದ ತಾಲ್ಲೂಕಿನಲ್ಲಿ ಹಲವು ಜಲಪಾತಗಳು ನಿರ್ಮಾಣ­ಗೊಳ್ಳುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಮಳೆಗಾಲ ಸೊರಗಿದ್ದರಿಂದ ಇಂತಹ ಜಲಪಾತಗಳೂ ಕೂಡ ಸೊರಗಿದ್ದವು’ ಎಂದು ಸಾಮಾಜಿಕ ಕಾರ್ಯಕರ್ತ ಗುರುರಾಜ ಶಾನಭಾಗ ಅಭಿಪ್ರಾಯಪಟ್ಟರು.

ಮಲೆನಾಡಿನಲ್ಲಿ   ಹರಿಯುವ ನೀರಿಗೆ ಗುಡ್ಡದ ಕಡಿದಾದ ಸ್ಥಳ ಸಿಕ್ಕರೇ ಅಲ್ಲಿಯೇ ಜಲಪಾತ ನಿರ್ಮಾಣವಾಗುತ್ತದೆ. ಅಂತಹ ಗುಡ್ಡ ಮತ್ತು ಮಳೆಯಿಂದ ಹರಿಯುವ ನೀರು ಈಗ ಇರುವುದರಿಂದ  ತಾಲ್ಲೂಕಿನಲ್ಲಿ ಹಲವೆಡೆ ಜಲಪಾತ ನಿರ್ಮಾಣವಾಗಿದೆ.

* * 

ತಾಲ್ಲೂಕಿನ ಹಲಗೇರಿ ಸಮೀಪ ಇರುವ ಹುಸೂರು  ಜಲಪಾತವನ್ನು ಉತ್ತಮವಾದ ಪಿಕ್ನಿಕ್ ಸ್ಥಳ ಎನ್ನಬಹುದು
ಗುರುರಾಜ ಶಾನಭಾಗ
ಸಾಮಾಜಿಕ ಕಾರ್ಯಕರ್ತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.