ADVERTISEMENT

ಮುಂಡಿಗೆಕೆರೆಯಲ್ಲಿ ಬೆಳ್ಳಕ್ಕಿ ಕಲರವ

​ಪ್ರಜಾವಾಣಿ ವಾರ್ತೆ
Published 24 ಜುಲೈ 2014, 10:51 IST
Last Updated 24 ಜುಲೈ 2014, 10:51 IST

ಶಿರಸಿ: ತಾಲ್ಲೂಕಿನ ಮುಂಡಿಗೆಕೆರೆಯಲ್ಲಿ ಈಗ ಪಕ್ಷಿಗಳ ಕಲರವ. ಸಹಸ್ರಾರು ಬೆಳ್ಳಕ್ಕಿಗಳು ಮುಂಡಿಗೆಕೆರೆಗೆ ಆಗಮಿಸಿ ಖಗ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ಸೋಂದಾ ಗ್ರಾಮದ ಬಾಡಲಕೊಪ್ಪ ಹಾಗೂ ಖಾಸಾಪಾಲ ಮಜಿರೆಗಳ ನಡುವೆ ಇರುವ ಮುಂಡಿಗೆಕೆರೆಗೆ ವರ್ಷದಿಂದ ವರ್ಷಕ್ಕೆ ಬರುವ ಅತಿಥಿಗಳ ಸಂಖ್ಯೆ ವೃದ್ಧಿಸುತ್ತಿದೆ. ಕೆರೆಯಲ್ಲಿರುವ ಮುಂಡಿಗೆ ಗಿಡಗಳ ಮೇಲೆ ಮನೆ ಮಾಡಿಕೊಂಡಿರುವ ಬೆಳ್ಳಕ್ಕಿಗಳು ಧೋ ಎಂದು ಸುರಿವ ಮಳೆಯ ನಡುವೆ ಮೊಟ್ಟೆ ಇಡುವ, ಮೊಟ್ಟೆಗಳನ್ನು ಕಾಪಾಡುವ ಕಾರ್ಯದಲ್ಲಿ ನಿರತವಾಗಿವೆ.

‘ಈ ವರ್ಷ ಮೇ 25ರ ವೇಳೆಗೆ ಹಸು ಬೆಳ್ಳಕ್ಕಿಗಳು ಇಲ್ಲಿಗೆ ಆಗಮಿಸಿದ್ದವು. ಆದರೆ ಅವು ಕೆರೆ ಇಳಿಯದೇ ಕೆರೆಯ ಸಮೀಪದ ವರೆಗೆ ಬಂದು ಸಂಜೆ ವಾಪಸ್‌ ಹಾರಿ ಹೋಗುತ್ತಿದ್ದವು. ಜೂನ್‌ 3ರ ಹೊತ್ತಿಗೆ ಅವು ಕೆರೆಯನ್ನು ಪ್ರವೇಶಿಸಿ ಗೂಡು ಕಟ್ಟಲು ಪ್ರಾರಂಭಿಸಿವೆ. ನಮ್ಮ ಅಂದಾಜಿನ ಪ್ರಕಾರ 1200ಕ್ಕೂ ಹೆಚ್ಚು ಬೆಳ್ಳಕ್ಕಿಗಳಿಗೆ ಈಗ ಮುಂಡಿಗೆಕೆರೆ ಆಶ್ರಯ ತಾಣವಾಗಿದೆ’ ಎನ್ನುತ್ತಾರೆ ಸ್ಥಳೀಯ ರತ್ನಾಕರ ಹೆಗಡೆ ಬಾಡಲಕೊಪ್ಪ.

‘ಪಕ್ಷಿಗಳು ಗೂಡು ಕಟ್ಟಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಮಳೆ ಶುರುವಾಗಿದೆ. ಮಳೆ ಹೆಚ್ಚಾಗುತ್ತಿರು ವಾಗ ಅವು ಮೊಟ್ಟೆ ಇಡಲು ಪ್ರಾರಂಭಿ ಸಿವೆ. ಮೊಟ್ಟೆಗಳ ಸಂರಕ್ಷಣೆಯಲ್ಲಿ ನಿರತ ಪಕ್ಷಿಗಳು, ಆಹಾರ ಹೊತ್ತು ತರುವ ಸಂಗಾತಿಗಳು, ಅವುಗಳ ಸರಸ ಸಲ್ಲಾಪ ಕಣ್ಸೆಳೆಯುವಂತಿದೆ’ ಎಂದರು.

ಉತ್ತರ ಕನ್ನಡ ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಬೆಳ್ಳಕ್ಕಿಗಳು ಗೂಡು ಕಟ್ಟುವ ಸ್ಥಳ ಇದಾಗಿದೆ ಎಂದು ಖ್ಯಾತ ಪಕ್ಷಿತಜ್ಞ ದಿವಂಗತ ಪಿ.ಡಿ. ಸುದರ್ಶನ ಈ ಹಿಂದೆಯೇ ಹೇಳಿದ್ದರು ಎಂಬುದನ್ನು ನೆನಪಿಸಿರುವ ಸೋಂದಾ ಜಾಗೃತ ವೇದಿಕೆ ಮುಂಡಿಗೆಕೆರೆಯ ವೀಕ್ಷಣಾ ಗೋಪುರದಿಂದ ಪಕ್ಷಿ ವೀಕ್ಷಿಸಲು ಅನುಕೂಲವಾಗುವಂತೆ ಅರಣ್ಯ ಇಲಾಖೆ ಎರಡು ಬೈನಾಕ್ಯುಲರ್‌ ಒದಗಿಸಬೇಕು ಎಂದು ವಿನಂತಿಸಿದೆ.

ಮುಂಡಿಗೆಕೆರೆಗೆ ಬರುವ ಪಕ್ಷಿಗಳ ಸಂರಕ್ಷಣೆಗೆ ಹುಲೇಕಲ್‌ ವಲಯ ಅರಣ್ಯಾಧಿಕಾರಿ ಕಾವಲುಗಾರರನ್ನು ನೇಮಿಸಿದ್ದಕ್ಕೆ ವೇದಿಕೆ ಹಾಗೂ ಸ್ಥಳೀಯ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.